

ಚಿಕ್ಕೋಡಿ: ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೆಕ್ಪೋಸ್ಟ್ನಲ್ಲಿ ಮಳೆ ಸಂಬಂಧಿತ ಅವಘಡ ಸಂಭವಿಸಿದ್ದು, ಸೇನಾ ಸಿಬ್ಬಂದಿ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ಇರುವ ಚೆಕ್ಪೋಸ್ಟ್ನಲ್ಲಿ ಈ ಪ್ರಕರಣ ನಡೆದಿದೆ.
ನಿಪ್ಪಾಣಿ ಮೂರಗುಡ ಮಧ್ಯ ಈ ಚೆಕ್ಪೋಸ್ಟ್ ಇದ್ದು, ಇಂದು ಸುರಿದ ಭಾರಿ ಗಾಳಿಮಳೆಗೆ ಚೆಕ್ಪೋಸ್ಟ್ನ ಛಾವಣಿ ಕಿತ್ತು ಹಾರಿ ಸಿಬ್ಬಂದಿ ಮೇಲೆ ಬಿದ್ದಿದ್ದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ಸಿಬ್ಬಂದಿ ಹಾಗೂ ತಾಲೂಕು ಆಡಳಿತದ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ ಒಬ್ಬ ಬೂದಿಹಾಳ ಗ್ರಾಮದ ವಾಟರ್ಮ್ಯಾನ್ ಮಾರುತಿ ಪಾಟೀಲ ಎಂಬುದು ತಿಳಿದುಬಂದಿದೆ. ಇಬ್ಬರೂ ಗಾಯಾಳುಗಳನ್ನು ನಿಪ್ಪಾಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.