92ರ ಇಳಿ ವಯಸ್ಸಿನಲ್ಲಿ 5ನೇ ಮದುವೆ; ಮಧುಮಗನಾಗಲು ಸಜ್ಜಾದ ಮಾಧ್ಯಮ ಲೋಕದ ದಿಗ್ಗಜ

Rupert Murdoch
Published on

ನವದೆಹಲಿ: ಪ್ರೀತಿ ಹಾಗೂ ಮದುವೆಗೆ ವಯಸ್ಸಿನ ಅಂತವಿಲ್ಲ ಎಂದು ಹೇಳುತ್ತಾರೆ. ಯಾವ ವಯಸ್ಸಿನಲ್ಲಿ ಬೇಕಾದ್ರೂ ಮನುಷ್ಯ ಪ್ರೀತಿಯಲ್ಲಿ ಬೀಳಬಹುದು. ಮದುವೆ ಮಾಡಿಕೊಳ್ಳಬಹುದು. ಗಂಡ – ಹೆಂಡತಿ ಮಧ್ಯೆ ವಯಸ್ಸಿನ ಅಂತರ ಎಷ್ಟಿರಬೇಕು ಎನ್ನುವುದಕ್ಕೆ ಯಾವುದೇ ನಿಯಮವಿಲ್ಲ. ತಮಗಿಂತ ಹತ್ತು, ಹದಿನೈದು ವರ್ಷ ದೊಡ್ಡವರನ್ನು ಮದುವೆ ಆಗಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ಅದೇ ರೀತಿ ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮಾಧ್ಯಮ ಲೋಕದ ದಿಗ್ಗಜ ರೂಪರ್ಟ್ ಮುರ್ಡೋಕ್ 92ರ ಇಳಿ ವಯಸ್ಸಿನಲ್ಲಿ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಮಾಸ್ಕೋ ನಿವಾಸಿ 67 ವರ್ಷದ ಎಲೆನಾ ಝುಕೋವಾ ಅವರನ್ನು ಮದುವೆಯಾಗಲಿದ್ದಾರೆ. ಇದು ಇವರ ಐದನೇ ಮದುವೆ ಎಂದು ತಿಳಿದು ಬಂದಿದೆ.

ಎಲೆನಾ ಝುಕೋವಾ ಅವರೊಂದಿಗೆ ಮುರ್ಡೋಕ್‌ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ರೂಪರ್ಟ್ ಮುರ್ಡೋಕ್ ಅವರ ವಕ್ತಾರರು ತಿಳಿಸಿದ್ದಾರೆ. ಈಗ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. ಎಲೆನಾ ಝುಕೋವಾ ಅವರು ಆಣ್ವಿಕ ಜೀವಶಾಸ್ತ್ರಜ್ಞರ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಕಳೆದ ಬೇಸಿಗೆಯಿಂದಲೂ ಇವರಿಬ್ಬರ ನಡುವೆ ಮೀಟಿಂಗ್ ನಡೆಯುತ್ತಿತ್ತು. ಅವರನ್ನು ರೂಪರ್ಟ್ ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಪರಿಚಯಿಸಿದರು.

ರೂಪಾರ್ಟ್​ ಮುರ್ಡೋಕ್ ಮದುವೆ ಕಹಾನಿ

1956ರಲ್ಲಿ ರೂಪಾರ್ಟ್‌ ಮುರ್ಡೋಕ್ ಮೊದಲ ಬಾರಿ ವಿವಾಹ ಆಗಿದ್ದರು. ಆಸ್ಟ್ರೇಲಿಯಾದ ಮೆಲ್ಬೋರ್ನ್‌ ನಿವಾಸಿ ಪಟ್ರಿಸಿಯಾ ಬೂಕರ್ ಅವರನ್ನ ವಿವಾಹವಾಗಿದ್ದರು. ಆಕೆ ವೃತ್ತಿಯಲ್ಲಿ ಗಗನಸಖಿ ಆಗಿದ್ದರು. 1967ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು. 1967ರಲ್ಲಿ ಸ್ಕಾಟ್ಲೆಂಡ್‌ ಮೂಲದ ಸಿಡ್ನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತೆ ಅನ್ನಾ ತೊರ್ವ್‌ ಅವರನ್ನು ರೂಪಾರ್ಟ್‌ ಮುರ್ಡೋಕ್ ವಿವಾಹ ಆಗಿದ್ದರು. 1999ರಲ್ಲಿ ಅನ್ನಾಗೆ 1.2 ಬಿಲಿಯನ್ ಮೊತ್ತದ ಪರಿಹಾರವನ್ನು ನೀಡಿ ಡಿವೋರ್ಸ್‌ ಪಡೆದಿದ್ದರು.

ಅನ್ನಾ ಡೈವೋರ್ಸ್‌ ಕೊಟ್ಟ 17 ದಿನಕ್ಕೇ ಮತ್ತೊಂದು ಮದುವೆಯಾದ ರೂಪಾರ್ಟ್‌ ಮುರ್ಡೋಕ್, ಚೀನಾ ಮೂಲದ ವೆಂಡಿ ಡೆಂಗ್ ಅವರನ್ನು ವಿವಾಹವಾದರು. ಆಗ ರೂಪಾರ್ಟ್‌ ಮುರ್ಡೋಕ್‌ಗೆ 68 ವರ್ಷ ವಯಸ್ಸಾಗಿದ್ದರೆ, ಡೆಂಗ್ ಅವರಿಗೆ 30 ವರ್ಷ ವಯಸ್ಸಾಗಿತ್ತು. 2013ರಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದರು. 2016ರಲ್ಲಿ ರೂಪಾರ್ಟ್‌ ಮುರ್ಡೋಕ್ ಅವರು ರೂಪದರ್ಶಿ ಜೆರ್ರಿ ಹಾಲ್ ಅವರನ್ನು ಮದುವೆಯಾದರು. 2022ರಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದರು.

ತಮ್ಮ ನಾಲ್ವರು ಪತ್ನಿಯರಿಂದ 6 ಮಕ್ಕಳನ್ನು ರೂಪಾರ್ಟ್‌ ಮುರ್ಡೋಕ್ ಪಡೆದಿದ್ದಾರೆ. ಎಲ್ಲಾ ಮಕ್ಕಳಿಗೂ ತಮ್ಮ ಮಾಲೀಕತ್ವದ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರ ಹುದ್ದೆಗಳನ್ನು ನೀಡಿದ್ದಾರೆ. ರೂಪಾರ್ಟ್‌ ಮುರ್ಡೋಕ್ ಅವರು ಭಾರತ ಸೇರಿದಂತೆ ವಿಶ್ವದ ಮೂರು ಖಂಡಗಳಲ್ಲಿ ಮಾಧ್ಯಮ ಲೋಕದಲ್ಲಿ ತಮ್ಮ ವರ್ಚಸ್ಸು ಹೊಂದಿದ್ದಾರೆ. ಸ್ಟಾರ್ ಟಿವಿ, ಫಾಕ್ಸ್ ನ್ಯೂಸ್, ನ್ಯೂಯಾರ್ಕ್‌ ಪೋಸ್ಟ್‌ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳ ಒಡೆಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net