

Marriage : ಹಂತಕಿ ಸೋನಮ್ ರಘುವಂಶಿ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಹನಿಮೂನ್ ಹೆಸರಿನಲ್ಲಿ ತನ್ನ ಪತಿ ರಾಜಾ ರಘುವಂಶಿಯನ್ನು ಮೇಘಾಲಯಕ್ಕೆ ಕರೆದೊಯ್ದು ಸುಪಾರಿ ಹಂತಕರಿಂದ ಕೊಲೆ ಮಾಡಿಸಿದ್ದಾಳೆ. ತನ್ನ ಬಾಯ್ಫ್ರೆಂಡ್ ರಾಜ್ ಕುಶ್ವಾಹ ಜತೆ ಸೇರಿ ಕೊಲೆಗೆ ಯೋಜನೆ ರೂಪಿಸಿ, ಈ ದುಷ್ಕೃತ್ಯ ಎಸಗಿದ್ದಾಳೆ. ಆದರೆ, ಇದು ಕೇವಲ ಸೋನಮ್ ಪ್ರಕರಣ ಮಾತ್ರವಲ್ಲ, ದೇಶಾದ್ಯಂತ ನಡೆಯುತ್ತಿರುವ ಕೆಲವು ಘಟನೆಗಳಿಂದ ಯುವಕರು ಮದುವೆಯಾಗಲು ಹೆದರುವಂತಾಗಿದೆ.
ನಾನು ಮದುವೆಯಾದರೆ ಬದುಕಲು ಸಾಧ್ಯಾನಾ? ನನ್ನ ಹೆಂಡತಿ ಮತ್ತು ಅವಳ ಗೆಳೆಯನ ಕೈಯಲ್ಲಿ ನಾನು ಸಾಯಬೇಕೇ? ಈ ರೀತಿಯ ಪ್ರಶ್ನೆಗಳು ಯುವಕರ ಮನಸ್ಸಿನಲ್ಲಿ ಮೂಡುತ್ತಿದೆ. ಪ್ರಸ್ತುತ ಪೀಳಿಗೆಯಲ್ಲಿ, ಮದುವೆಯಾಗುವುದಕ್ಕಿಂತ ಒಂಟಿಯಾಗಿ ಬದುಕುವುದು ಉತ್ತಮ ಎನ್ನುವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿಂದೆ, ಹುಡುಗಿಯರ ಪಾಲಕರು ತಮ್ಮ ಹೆಣ್ಣುಮಕ್ಕಳಿಗೆ ಒಳ್ಳೆಯ ಗಂಡ ಸಿಗಬೇಕೆಂದು ಬಯಸುತ್ತಿದ್ದರು ಆದರೆ, ಈಗ ಹುಡುಗರ ಪಾಲಕರು ತಮ್ಮ ಗಂಡುಮಕ್ಕಳಿಗೆ ಒಳ್ಳೆಯ ಹೆಂಡತಿ ಸಿಗಬೇಕೆಂದು ಬಯಸುವಂತಾಗಿದೆ.
ಈ ಹಿಂದೆ, ವರದಕ್ಷಿಣೆ ಕಿರುಕುಳದಿಂದ ಹೆಂಡತಿಯರನ್ನು ಹಿಂಸಿಸಿ ಕೊಲ್ಲುವ ಘಟನೆಗಳನ್ನು ನಾವು ನೋಡುತ್ತಿದ್ದೆವು. ಈಗ ಟ್ರೆಂಡ್ ಬದಲಾಗಿದೆ. ಮದುವೆಯ ನಂತರ ಅತ್ಯಂತ ಕ್ರೂರ ರೀತಿಯಲ್ಲಿ ಗಂಡಂದಿರನ್ನು ಕೊಲ್ಲುವ ಸಂಸ್ಕೃತಿ ಪ್ರಾರಂಭವಾಗಿದೆ. ಕೊನೆಯದಾಗಿ, ತಮ್ಮ ಗೆಳೆಯರ ವ್ಯಾಮೋಹದಿಂದ ಗಂಡ ಮತ್ತು ಮಕ್ಕಳನ್ನು ಕೊಲ್ಲುವ ಘಟನೆಗಳು ಸಮಾಜವನ್ನು ಭಯಭೀತಿಗೊಳಿಸುತ್ತಿವೆ. ಕೆಲವು ಮಹಿಳೆಯರು ಮದುವೆಗೆ ಮೊದಲು ತಮಗಿದ್ದ ಪ್ರೇಮ ಪ್ರಕರಣವನ್ನು ಮರೆಮಾಡಿ, ಮದುವೆಯ ನಂತರ ತಮ್ಮ ಗಂಡಂದಿರನ್ನು ಕೊಲ್ಲುವುದನ್ನು ನೋಡುವುದು ಸ್ವಲ್ಪ ಭಯಾನಕವಾಗಿದೆ.
ಇದೆಲ್ಲದರ ಜೊತೆಗೆ, ಕೆಲವು ಮಹಿಳೆಯರು ತಮ್ಮ ಗಂಡಂದಿರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಹೆಂಡತಿಯರು ಮತ್ತು ಅವರ ಕುಟುಂಬಗಳು ನೀಡುವ ಚಿತ್ರಹಿಂಸೆಯಿಂದಾಗಿ ಗಂಡಂದಿರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ, ಗಂಡಂದಿರು ತಮ್ಮ ಕುಟುಂಬಗಳ ವಿರುದ್ಧ ಸುಳ್ಳು ಕೌಟುಂಬಿಕ ಹಿಂಸಾಚಾರದ ಪ್ರಕರಣಗಳನ್ನು ದಾಖಲಿಸಿ, ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ ಅವರಿಂದ ಭಾರಿ ಮೊತ್ತದ ಜೀವನಾಂಶವನ್ನು ಬೇಡುವ ಘಟನೆಗಳು ನಡೆದಿವೆ. ತಮಗಿರುವ ಕಾನೂನಿನ ಬಲವನ್ನು ಕೆಲ ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ತಾವು ಮದುವೆಯಾಗುವ ಹುಡುಗಿ ಮತ್ತು ಅವರ ಹೆತ್ತವರ ದುರಾಸೆ ಹೆಚ್ಚಿರುವುದರಿಂದ ಅನೇಕ ಯುವಕರು ಮದುವೆಯಾಗುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಅಳಿಯನಿಗೆ ಲಕ್ಷಗಟ್ಟಲೆ ಪ್ಯಾಕೇಜ್ ಇರಬೇಕು, ಕಾರುಗಳು, ಭೂಮಿ, ಒಂದು ದೊಡ್ಡ ಬಂಗಲೆ ಜೊತೆಗೆ ಆಸ್ತಿಗಳು ಇರಬೇಕೆಂಬ ದುರಾಸೆ ಇದೆ. ಸಾಲದು ಎಂಬಂತೆ ಮದುವೆಯಾಗುವ ಹುಡುಗ ಅಮೆರಿಕ ಅಥವಾ ಯುಕೆಯಲ್ಲಿ ನೆಲೆಸಬೇಕು ಎಂಬ ಅತಿ ಆಸೆಯೂ ಇದೆ. ಈ ಎಲ್ಲ ಅವಶ್ಯಕತೆಗಳನ್ನು ಪೂರೈಸಿದರೆ ಮಾತ್ರ ಯುವತಿಯರು ಮದುವೆಗೆ ಒಪ್ಪುವ ಕೆಟ್ಟ ಟ್ರೆಂಡ್ ಶುರುವಾಗಿದೆ. ಯುವಕರಲ್ಲಿ ಮದುವೆಯ ಬಗ್ಗೆ ನಿರಾಸಕ್ತಿಗೆ ಇದು ಕೂಡ ಒಂದು ಕಾರಣವಾಗಿದೆ. ನನ್ನ ಎಲ್ಲ ಗಳಿಕೆಯನ್ನು ಇನ್ನೊಬ್ಬ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರ ಸಂತೋಷಕ್ಕಾಗಿ ಖರ್ಚು ಮಾಡುವುದರಲ್ಲಿ ಅರ್ಥ ಏನಿದೆ? ಮದುವೆಯಾಗದಿದ್ದರೆ ಉತ್ತಮ ಎನ್ನುತ್ತಿದ್ದಾರೆ ಕೆಲವರು.
ರಾಜಾ ರಘುವಂಶಿ ಮತ್ತು ಸೋನಮ್ ಮೇ 11 ರಂದು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ, ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆಗೂಡಿ ಸುಪಾರಿ ಹಂತಕರನ್ನು ನೇಮಿಸಿ, ತನ್ನ ಗಂಡನನ್ನು ಕೊಲ್ಲಲು ಸಂಚು ರೂಪಿಸಿದಳು. ಹನಿಮೂನ್‌ಗಾಗಿ ಮೇಘಾಲಯಕ್ಕೆ ಪ್ರಯಾಣಿಸುವುದು ಅವರ ಯೋಜನೆಯ ಭಾಗವಾಗಿತ್ತು. ರಾಜ್ ಕುಶ್ವಾಹ ಮೇಘಾಲಯಕ್ಕೆ ಪ್ರಯಾಣಿಸದಿದ್ದರೂ, ಆತ ಸೋನಮ್ ಜತೆ ನಿರಂತರ ಸಂಪರ್ಕದಲ್ಲಿದ್ದ ಮತ್ತು ತೆರೆಮರೆಯಲ್ಲಿ ಸಂಚು ರೂಪಿಸುತ್ತಿದ್ದ. ಹಂತಕರು ಮೊದಲು ನವವಿವಾಹಿತರನ್ನು ಮೇ21 ರಂದು ಗುವಾಹಟಿವರೆಗೆ ಹಿಂಬಾಲಿಸಿದರು. ಈ ವೇಳೆ ನವದಂಪತಿ ತಂಗಿದ್ದ ಹೋಟೆಲ್ ಬಳಿಯೇ ತಂಗಿದ್ದರು. ನಂತರ ಮೇ 22 ರಂದು ಶಿಲ್ಲಾಂಗ್‌ಗೆ ಹೋದರು. ಮರುದಿನ ಹಂತಕರು ತಮ್ಮ ಪ್ಲಾನ್ನಂತೆ ರಾಜಾ ಅವರನ್ನು ಕೊಲೆ ಮಾಡಿದ್ದಾರೆ. ಮೇ 23 ರಂದು ಸೋನಮ್ ಮತ್ತು ರಾಜಾ ರಘುವಂಶಿ ಜಲಪಾತವನ್ನು ನೋಡಲು ಕಡಿದಾದ ಶಿಖರಕ್ಕೆ ಚಾರಣ ಹೋದರು. ಈ ವೇಳೆ ಹಂತಕರು ಅವರನ್ನೇ ಹಿಂಬಾಲಿಸಿದರು. ಒಂದು ಹಂತದಲ್ಲಿ, ಸೋನಮ್ ದಣಿದಂತೆ ನಟಿಸಿ, ತನ್ನ ಪತಿ ಮತ್ತು ಹಂತಕರಿಂದ ದೂರ ನಡೆಯಲು ಪ್ರಾರಂಭಿಸಿದಳು. ಈ ಮಧ್ಯೆ ನಿರ್ಜನ ಸ್ಥಳವನ್ನು ತಲುಪಿದಾಗ, ಸೋನಮ್ ತನ್ನ ಪತಿಯನ್ನು ಕೊಲ್ಲಲು ಹಂತಕರಿಗೆ ಸೂಚನೆ ನೀಡಿದಳು. ಬಳಿಕ ಹಂತಕರು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದು ಉತ್ತರ ಪ್ರದೇಶದ ಮೀರತ್‌ನಲ್ಲಿ ಕೆಲವೇ ತಿಂಗಳುಗಳ ಹಿಂದಷ್ಟೇ ನಡೆದ ಘಟನೆ. ಸೌರಭ್ ರಜಪೂತ್ (29) ಮತ್ತು ಮುಸ್ಕಾನ್ (27) 2016 ರಲ್ಲಿ ಪ್ರೇಮ ವಿವಾಹವಾದರು. ಸೌರಭ್, ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ 2019ರಲ್ಲಿ ಒಂದು ಹೆಣ್ಣು ಮಗು ಜನಿಸಿತು. ಇದರ ನಡುವೆ ಮುಸ್ಕಾನ್ಗೆ ಸಾಹಿಲ್ (25) ಜೊತೆ ವಿವಾಹೇತರ ಸಂಬಂಧ ಬೆಳೆಯಿತು. ಸೌರಭ್ ತನ್ನ ಕೆಲಸವನ್ನು ಬಿಟ್ಟು ಬೇಕರಿಯಲ್ಲಿ ಕೆಲಸ ಮಾಡಲು ಲಂಡನ್‌ಗೆ ಹೋಗಿದ್ದ. ಕಳೆದ ಫೆ. 24ರಂದು ಪತ್ನಿಯ ಹುಟ್ಟುಹಬ್ಬಕ್ಕೆ ಲಂಡನ್‌ನಿಂದ ಹಿಂತಿರುಗಿದ್ದ. ಮಾರ್ಚ್ 4ರಂದು ಸೌರಭ್ನನ್ನು ಮುಸ್ಕಾನ್ ಮತ್ತು ಸಾಹಿಲ್ ಸೇರಿ ಕೊಲೆ ಮಾಡಿದರು. ಸೌರಭ್ ಕಾಣೆಯಾದ ನಂತರ ಅವನ ಪೋಷಕರು ಪೊಲೀಸರನ್ನು ಸಂಪರ್ಕಿಸಿದಾಗ ಕೊಲೆ ಬೆಳಕಿಗೆ ಬಂದಿತು. ಮುಸ್ಕಾನ್ ಮತ್ತು ಸಾಹಿಲ್ ಸೇರಿ ಸೌರಭ್ ದೇಹವನ್ನು 15 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಬಚ್ಚಿಟ್ಟು ಸಿಮೆಂಟ್‌ನಿಂದ ಮುಚ್ಚಿದರು. ಈ ಘಟನೆಯ ಬಳಿಕ ಪ್ಲಾಸ್ಟಿಕ್ ಡ್ರಮ್ ಸಿಕ್ಕಾಪಟ್ಟೆ ಟ್ರೆಂಡ್ ಆಯಿತು. ಖರೀದಿ ಮಾಡಲು ಸಹ ಅನೇಕ ಮಂದಿ ಹಿಂದೇಟು ಹಾಕಿದರು.
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಪ್ರಕರಣವೂ ಒಂದು ಉದಾಹರಣೆಯಾಗಿದೆ. ಪತ್ನಿ, ತನ್ನ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಅತುಲ್ ಕಣ್ಣೀರಿಟ್ಟು ಆಡಿದ ಮಾತುಗಳು ಅನೇಕರಿಗೆ ನೋವುಂಟುಮಾಡಿತು. ಪತ್ನಿ ನಿಕಿತಾ ಸಿಂಘಾನಿಯಾ, ಅತ್ತೆ-ಮಾವನ ಕಿರುಕುಳ ಮತ್ತು ನಕಲಿ ಕೌಟುಂಬಿಕ ಹಿಂಸಾಚಾರದ ಬಗ್ಗೆ ವಿಡಿಯೋ ಮಾಡಿದ ನಂತರ ಅತುಲ್ ಅವರು ಆತ್ಮಹತ್ಯೆಗೆ ಶರಣಾದರು. ದೇಶದಲ್ಲಿ ಕೆಲವು ಮಹಿಳೆಯರು ಉದ್ದೇಶಪೂರ್ವಕವಾಗಿ ನಕಲಿ ಕೌಟುಂಬಿಕ ಹಿಂಸಾಚಾರ ಪ್ರಕರಣಗಳನ್ನು ಸೃಷ್ಟಿಸುತ್ತಿರುವುದನ್ನು ಈ ಪ್ರಕರಣ ಎತ್ತಿ ತೋರಿಸಿತು. ಬಿಜೆಪಿ ರಾಜ್ಯಸಭಾ ಸದಸ್ಯ ದಿನೇಶ್ ಶರ್ಮಾ ಕೂಡ ಸಂಸತ್ತಿನಲ್ಲಿ ಸುಭಾಷ್ ಸಾವಿನ ವಿಷಯವನ್ನು ಪ್ರಸ್ತಾಪಿಸಿದರು. ಕಾನೂನುಗಳ ದುರುಪಯೋಗ ಮತ್ತು ಮಹಿಳೆಯರು ಸುಳ್ಳು ಪ್ರಕರಣಗಳನ್ನು ದಾಖಲಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇಂತಹ ಹಿಂಸೆ ಮತ್ತು ಶೋಷಣೆಯಿಂದ ಪುರುಷರಿಗೆ ರಕ್ಷಣೆ ಇಲ್ಲದಿರುವುದು ಕಳವಳಕಾರಿ ಎಂದು ಸಂಸದರು ಹೇಳಿದರು. ಸದನದಲ್ಲಿ ಆತ್ಮಹತ್ಯೆಗಳ ಕುರಿತು ಎನ್‌ಸಿಆರ್‌ಬಿ ಅಂಕಿಅಂಶಗಳನ್ನು ದಿನೇಶ್ ಶರ್ಮಾ ಬಹಿರಂಗಪಡಿಸಿದರು. 2022ರಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 72 ರಷ್ಟು ಅಥವಾ ಒಟ್ಟು 1,25,000 ಪುರುಷರು, ಆದರೆ ಮಹಿಳೆಯರ ಸಂಖ್ಯೆ ಸುಮಾರು 47,000 ಎಂದು ಹೇಳಿದರು.
ಕಳೆದ ಮಾರ್ಚ್ 19ರಂದು, ಸಹಾರಾ ಪೊಲೀಸ್ ಠಾಣೆಗೆ ಒಂದು ಕರೆ ಬಂತು. ಒಬ್ಬ ವ್ಯಕ್ತಿ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ತಲುಪಿದ ಪೊಲೀಸರು ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟ. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಪೊಲೀಸ್ ತನಿಖೆಯ ಸಮಯದಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ಮೃತನ ಪತ್ನಿ ಮತ್ತು ಆಕೆಯ ಗೆಳೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಮೃತ ದಿಲೀಪ್ ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 5ರಂದು ಪ್ರಗತಿ ಎಂಬ ಯುವತಿಯನ್ನು ವಿವಾಹವಾಗಿದ್ದ. ಆದಾಗ್ಯೂ, ಪ್ರಗತಿ ಅದೇ ಗ್ರಾಮದ ಅನುರಾಗ್ ಯಾದವ್ ಜೊತೆ ಸಂಬಂಧ ಹೊಂದಿದ್ದಳು. ಅಲ್ಲದೆ, ಈ ಮದುವೆಯೂ ಅವಳ ಇಚ್ಛೆಗೆ ವಿರುದ್ಧವಾಗಿ ನಡೆದಿತ್ತು. ದಿಲೀಪ್ ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದಾನೆ ಎಂದು ನಂಬಿದ ಪ್ರಗತಿ, ತನ್ನ ಗೆಳೆಯನೊಂದಿಗೆ ಸೇರಿ ತನ್ನ ಗಂಡನನ್ನು ತೊಡೆದುಹಾಕಲು ಸಂಚು ರೂಪಿಸಿದಳು. ತನ್ನ ಗಂಡನನ್ನು ಕೊಲ್ಲಲು ಬಬ್ಲು ಯಾದವ್ ಎಂಬ ವ್ಯಕ್ತಿಗೆ 2 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಳು. ಆತ, ದಿಲೀಪ್ ಮೇಲೆ ಹಲ್ಲೆ ನಡೆಸಿ, ಗುಂಡಿಕ್ಕಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಸುಪಾರಿ ಹಂತಕ, ಮೃತನ ಪತ್ನಿ ಮತ್ತು ಆಕೆಯ ಗೆಳೆಯನನ್ನು ಬಂಧಿಸಲಾಯಿತು.
ದೆಹಲಿ ಮೂಲದ ವುಡ್ ಬಾಕ್ಸ್ ಕೆಫೆ ಮಾಲೀಕ ಪುನೀತ್ ಖುರಾನಾ ಅವರು ತಮ್ಮ ಪತ್ನಿ ಮಣಿಕಾ ಪಹ್ವಾ ಅವರ ನಿರಂತರ ಮಾನಸಿಕ ಹಿಂಸೆ ಮತ್ತು ಅತಿಯಾದ ಬೇಡಿಕೆಗಳಿಂದ ಆತ್ಮಹತ್ಯೆಗೆ ಶರಣಾದರು. ಸಾವಿಗೂ ಮೊದಲು ಅವರು ಎದುರಿಸಿದ ಕಷ್ಟಗಳನ್ನು ವಿಡಿಯೋದಲ್ಲಿ ದಾಖಲಿಸಿದರು.
ಈ ವರ್ಷ, ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರದಲ್ಲಿ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷಪ್ರಾಶನ ಮಾಡಿ, ಕೊಲೆಗೈದು ಸಂಚಲನ ಮೂಡಿಸಿದಳು. ತನ್ನ ಗೆಳೆಯನ ಮೇಲೆ ಮೋಹಗೊಂಡಿದ್ದ ರಜಿತಾ, ತನ್ನ ಪತಿ ಚೆನ್ನೈಯ್ಯ ಮತ್ತು ಆಕೆಯ ಮೂವರು ಮಕ್ಕಳಿಗೆ ವಿಷಪ್ರಾಶನ ಮಾಡಲು ಯೋಜಿಸಿದ್ದಳು. ಆದರೆ, ಕೊನೆಯ ಕ್ಷಣದಲ್ಲಿ ಪತಿ ತಪ್ಪಿಸಿಕೊಂಡ. ಪರಿಣಾಮವಾಗಿ ಮೂವರು ಮಕ್ಕಳು ಮೃತಪಟ್ಟರು. ರಜಿತಾ ತನ್ನ ಪತಿ ಮತ್ತು ಮಕ್ಕಳನ್ನು ಬಿಟ್ಟು ತನ್ನ ಪ್ರಿಯಕರನೊಂದಿಗೆ ಹೋಗಲು ಬಯಸಿದ್ದಳು.