

Meghalaya Honeymoon Case : ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಹನಿಮೂನ್ ಹೆಸರಿನಲ್ಲಿ ಪತ್ನಿಯೇ ಪತಿಯನ್ನು ಶಿಲ್ಲಾಂಗ್‌ಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಆರೋಪಿ ಸೋನಮ್ ರಘುವಂಶಿ ತನ್ನ ಪತಿ ರಾಜಾ ರಘುವಂಶಿಯ ಕೊಲೆಗಾರರಿಗೆ ಆರಂಭದಲ್ಲಿ 4 ಲಕ್ಷ ರೂ. ನೀಡುವುದಾಗಿ ಹೇಳಿದ್ದಳು. ನಂತರದಲ್ಲಿ ಅದನ್ನು 20 ಲಕ್ಷ ರೂ.ಗೆ ಹೆಚ್ಚಿಸಿದಳು ಎಂಬ ಆಘಾತಕಾರಿ ಸಂಗತಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ, ರಘುವಂಶಿಯ ಶವವನ್ನು ಮೇಘಾಲಯದ ಕಣಿವೆಯಲ್ಲಿ ಎಸೆಯಲು ಆರೋಪಿಗಳಿಗೆ ಸೋನಮ್ ಸಹಾಯ ಮಾಡಿದ್ದಾಳೆ ಅನ್ನೋ ಸಂಗತಿ ಸಹ ಬಯಲಾಗಿದೆ.
ಒಂದು ಹಂತದಲ್ಲಿ ಸುಪಾರಿ ಹಂತಕರು, ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ನಮ್ಮಿಂದ ರಘುವಂಶಿಯನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಹೇಳಿದರಂತೆ. ಆದರೆ, ಅವರ ಮಾತನ್ನು ಕೇಳಲು ತಯಾರಿರದ ಸೋನಮ್, ತನ್ನ ಗಂಡನನ್ನು ಕೊಂದರೆ 4 ಲಕ್ಷ ರೂ. ಬದಲಾಗಿ 20 ಲಕ್ಷ ರೂ. ಕೊಡುವುದಾಗಿ ಆಮಿಷ ಒಡ್ಡಿದಳು ಎಂದು ಹೇಳಲಾಗಿದೆ. ಆಮಿಷದ ಬಲೆಗೆ ಬಿದ್ದ ಹಂತಕರು ಕೊನೆಗೆ ರಾಜಾ ರಘುವಂಶಿಯನ್ನು ಭೀಕರವಾಗಿ ಕೊಂದಿದ್ದಾರೆ.
ಜೂನ್ 2ರಂದು ಪೂರ್ವ ಖಾಸಿ ಬೆಟ್ಟಗಳ ಜಿಲ್ಲೆಯ ಸೊಹ್ರಾ ಪ್ರದೇಶದ (ಚಿರಾಪುಂಜಿ ಎಂದೂ ಕರೆಯುತ್ತಾರೆ) ಜಲಪಾತದ ಬಳಿಯ ಕಣಿವೆಯಲ್ಲಿ ರಾಜಾ ರಘುವಂಶಿ ಅವರ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ರಾಜಾ ರಘುವಂಶಿ ತನ್ನ ಪತ್ನಿ ಸೋನಮ್ ಜತೆ ಹನಿಮೂನ್‌ಗಾಗಿ ಮೇಘಾಲಯಕ್ಕೆ ಬಂದ ಕೆಲವೇ ದಿನಗಳಲ್ಲಿ ಶವವಾಗಿ ಪತ್ತೆಯಾದರು. ಆರಂಭದಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಆದರೆ, ತನಿಖೆಗೆ ಇಳಿದ ಪೊಲೀಸರಿಗೆ ಕೊಲೆ ಪ್ರಕರಣದ ರಹಸ್ಯ ಬಯಲಾಯಿತು. ತನ್ನ ಪ್ರಿಯಕರನಿಗಾಗಿ ಸೋನಮ್ ಈ ಹತ್ಯೆ ಮಾಡಿದ್ದಾಳೆ. ಈ ಕೊಲೆಯಲ್ಲಿ ಪ್ರಿಯಕರನ ಕೈವಾಡ ಇರುವುದು ತನಿಖೆಯಲ್ಲಿ ಬಯಲಾಗಿದೆ.
ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ, ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆಗೂಡಿ ತನ್ನ ಗಂಡನನ್ನು ಕೊಲ್ಲಲು ಸಂಚು ರೂಪಿಸಿದಳು. ಹನಿಮೂನ್‌ಗಾಗಿ ಮೇಘಾಲಯಕ್ಕೆ ಪ್ರಯಾಣಿಸುವುದು ಅವರ ಯೋಜನೆಯ ಭಾಗವಾಗಿತ್ತು. ರಾಜ್ ಕುಶ್ವಾಹ ಮೇಘಾಲಯಕ್ಕೆ ಪ್ರಯಾಣಿಸದಿದ್ದರೂ, ಆತ ಸೋನಮ್ ಜತೆ ನಿರಂತರ ಸಂಪರ್ಕದಲ್ಲಿದ್ದ ಮತ್ತು ತೆರೆಮರೆಯಲ್ಲಿ ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಂತಕರು ಮೊದಲು ನವವಿವಾಹಿತರನ್ನು ಮೇ21 ರಂದು ಗುವಾಹಟಿವರೆಗೆ ಹಿಂಬಾಲಿಸಿದರು. ಈ ವೇಳೆ ನವದಂಪತಿ ತಂಗಿದ್ದ ಹೋಟೆಲ್ ಬಳಿಯೇ ತಂಗಿದ್ದರು. ನಂತರ ಮೇ 22 ರಂದು ಶಿಲ್ಲಾಂಗ್‌ಗೆ ಹೋದರು. ಮರುದಿನ ಹಂತಕರು ತಮ್ಮ ಪ್ಲಾನ್ನಂತೆ ರಾಜಾ ಅವರನ್ನು ಕೊಲೆ ಮಾಡಿದ್ದಾರೆ. ಮೇ 23 ರಂದು ಸೋನಮ್ ಮತ್ತು ರಾಜಾ ರಘುವಂಶಿ ಜಲಪಾತವನ್ನು ನೋಡಲು ಕಡಿದಾದ ಶಿಖರಕ್ಕೆ ಚಾರಣ ಹೋದರು. ಈ ವೇಳೆ ಹಂತಕರು ಅವರನ್ನೇ ಹಿಂಬಾಲಿಸಿದರು. ಒಂದು ಹಂತದಲ್ಲಿ, ಸೋನಮ್ ದಣಿದಂತೆ ನಟಿಸಿ, ತನ್ನ ಪತಿ ಮತ್ತು ಹಂತಕರಿಂದ ದೂರ ನಡೆಯಲು ಪ್ರಾರಂಭಿಸಿದಳು. ಈ ಮಧ್ಯೆ ನಿರ್ಜನ ಸ್ಥಳವನ್ನು ತಲುಪಿದಾಗ, ಸೋನಮ್ ತನ್ನ ಪತಿಯನ್ನು ಕೊಲ್ಲಲು ಹಂತಕರಿಗೆ ಸೂಚನೆ ನೀಡಿದಳು. ಬಳಿಕ ಹಂತಕರು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಾರಣದ ವೇಳೆ ಹಂತಕರು ಕೂಡ ತುಂಬಾ ದಣಿದಿದ್ದರು. ಅಲ್ಲದೆ, ಆ ಸಮಯದಲ್ಲಿ ರಾಜಾನನ್ನು ಕೊಲ್ಲಲು ನಿರಾಕರಿಸಿದರು. ಆದರೆ, ಹೇಗಾದರೂ ಮಾಡಿ ತನ್ನ ಗಂಡನನ್ನು ಕೊಲ್ಲಲು ನಿರ್ಧರಿಸಿದ ಸೋನಮ್, 4 ಲಕ್ಷ ರೂ. ಬದಲಾಗಿ 20 ಲಕ್ಷ ರೂ. ಆಫರ್ ನೀಡಿದಳು. ಆಮಿಷಕ್ಕೆ ಒಳಗಾದ ಹಂತಕರು ರಾಜಾ ರಘುವಂಶಿಯನ್ನು ಕೊಲೆ ಮಾಡಿದ್ದು, ಆತನ ದೇಹವನ್ನು ಎಸೆಯಲು ಹಂತಕರಿಗೆ ಸೋನಮ್ ಸಹಾಯ ಸಹ ಮಾಡಿದ್ದಾಳೆ. ಪ್ರಾಥಮಿಕ ಶವಪರೀಕ್ಷೆ ವರದಿಯ ಪ್ರಕಾರ, ರಾಜಾ ರಘುವಂಶಿ ಅವರ ತಲೆಯ ಹಿಂಭಾಗ ಮತ್ತು ಮುಂಭಾಗದಲ್ಲಿ ಗಾಯಗಳಾಗಿವೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)