UP Woman : ಗಂಡನೊಬ್ಬ ತನ್ನ 8 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಕೊಟ್ಟ ಘಟನೆ ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಅದರಲ್ಲೂ ಲವರ್ ಜತೆ ಪತ್ನಿಯನ್ನು ಮದುವೆ ಮಾಡಿಕೊಡಲು ಗಂಡ ಕೊಟ್ಟಿರುವ ಕಾರಣ ಮಾತ್ರ ಎಲ್ಲರ ಹುಬ್ಬೇರಿಸಿದೆ. ಆ ಕಾರಣ ಏನು ಅನ್ನೋದನ್ನ ನಾವೀಗ ತಿಳಿದುಕೊಳ್ಳೋಣ.

ಅಂದಹಾಗೆ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಸಂತ ಕಬೀರ್ ನಗರದ ಕತಾರ್ ಜೋತ್ ಗ್ರಾಮದಲ್ಲಿ. ಬಬ್ಲು ಎಂಬಾತ 2017ರಲ್ಲಿ ಗೋರಖ್‌ಪುರದ ರಾಧಿಕಾ ಎಂಬಾಕೆಯನ್ನು ವಿವಾಹವಾದನು. ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಜೀವನ ನಡೆಸುತ್ತಿದ್ದರು. ತಮ್ಮ 8 ವರ್ಷದ ದಾಂಪತ್ಯ ಜೀವನದಲ್ಲಿ ಇಬ್ಬರು ಮಕ್ಕಳು ಹುಟ್ಟಿದರು. ಹಿರಿಯ ಮಗ ಆರ್ಯನ್‌ಗೆ 7 ವರ್ಷ ಮತ್ತು ಕಿರಿಯ ಮಗಳು ಶಿವಾನಿ 2 ವರ್ಷ ವಯಸ್ಸು.
ಜೀವನೋಪಾಯಕ್ಕಾಗಿ ಬಬ್ಲು ಆಗಾಗ ಮನೆಯಿಂದ ಹೊರಗೆ ಇರುತ್ತಿದ್ದ. ಈ ಸಮಯದಲ್ಲಿ, ಆತನ ಪತ್ನಿ ರಾಧಿಕಾ ಅದೇ ಗ್ರಾಮದ ವಿಕಾಸ್ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧವನ್ನು ಬೆಳೆಸಿದಳು. ಅವರ ಸಂಬಂಧ ಬಹಳ ಕಾಲ ನಡೆಯಿತು. ಈ ಸಂಬಂಧ ಗ್ರಾಮದಲ್ಲಿ ಚರ್ಚೆಯ ವಿಷಯವಾಯಿತು. ಬಳಿಕ ಕುಟುಂಬ ಸದಸ್ಯರಿಗೂ ಈ ವಿಷಯ ತಿಳಿದಾಗ ಅವರು ಬಬ್ಲುಗೆ ಮಾಹಿತಿ ನೀಡಿದರು.
ಬಳಿಕ ಬಬ್ಲು ರಾಧಿಕಾ ಜೊತೆ ಈ ವಿಷಯವನ್ನು ಚರ್ಚಿಸಿ, ಆಕೆಯ ಮನವೊಲಿಸಲು ಪ್ರಯತ್ನಿಸಿದನು. ಆದರೆ, ರಾಧಿಕಾ, ತನ್ನ ಗೆಳೆಯನಿಗಾಗಿ ತನ್ನ ಮಕ್ಕಳನ್ನು ಸಹ ಬಿಟ್ಟುಕೊಡಲು ಮುಂದಾದಳು. ತನಗೆ ತನ್ನ ಗೆಳೆಯ ಬೇಕೆಂದು ಒತ್ತಾಯಿಸಿದಳು. ಬಳಿಕ ಒಂದು ನಿರ್ಧಾರಕ್ಕೆ ಬಂದ ಬಬ್ಲು, ಮಕ್ಕಳನ್ನು ನಾನೇ ಬೆಳೆಸುತ್ತೇನೆ ಎಂದು ಹೇಳಿದ. ಅಲ್ಲದೆ, ತಾನೇ ಮುಂದೆ ನಿಂತು ತನ್ನ ಪತ್ನಿ ರಾಧಿಕಾಳನ್ನು ವಿಕಾಸ್ ಜತೆ ಮದುವೆ ಮಾಡಿಕೊಟ್ಟ. ಮದುವೆ ಸಮಯದಲ್ಲಿ ರಾಧಿಕಾ ಅಳುತ್ತಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ.
ಕಾರಣವೇನು?
ಇದೀಗ ಬಬ್ಲು, ತನ್ನ ಹೆಂಡ್ತಿಯನ್ನ ಆಕೆಯ ಪ್ರಿಯಕರನ ಜತೆ ಮದುವೆ ಮಾಡಿಕೊಡಲು ಕಾರಣ ಏನೆಂಬುದನ್ನು ಬಿಚ್ಚಿಟ್ಟಿದ್ದಾನೆ. ಮಾಧ್ಯಮಗಳ ಬಳಿ ಮಾತನಾಡಿರುವ ಬಬ್ಲು, ತನ್ನ ಜೀವ ಉಳಿಸಿಕೊಳ್ಳಲು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅಂದಹಾಗೆ, ಇತ್ತೀಚೆಗೆ ಮೀರತ್‌ನಲ್ಲಿ ನಡೆದ ಘಟನೆಯಿಂದ ಬಬ್ಲು ಭಯಭೀತರಾಗಿದ್ದರು. ಮೀರತ್‌ನಲ್ಲಿ ಪ್ರಿಯಕರ ಮತ್ತು ಪತ್ನಿ ಸೇರಿ ತನ್ನ ಪತಿಯನ್ನ ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿದ್ದರು. ಇದರಿಂದ ಹೆದರಿದ ಬಬ್ಲು ಈ ನಿರ್ಧಾರಕ್ಕೆ ಬಂದಿದ್ದಾನೆ.
ನನಗೆ ಸಂಭವಿಸಬಹುದಾದ ಯಾವುದೇ ಅಪಘಾತಗಳನ್ನು ತಪ್ಪಿಸಲು ನಾನು ಅವರಿಬ್ಬರ ಮದುವೆ ಮಾಡಲು ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ, ಗಂಡಂದಿರು ತಮ್ಮ ಹೆಂಡತಿಯರಿಂದ ಕೊಲೆಯಾಗುತ್ತಿರುವುದನ್ನು ನಾವು ನೋಡಿದ್ದೇನೆ. ಮೀರತ್‌ನಲ್ಲಿ ಏನಾಯಿತು ಎಂಬುದನ್ನು ನೋಡಿದ ನಂತರ, ನಾವಿಬ್ಬರೂ ಶಾಂತಿಯುತವಾಗಿ ಬದುಕಲು ನನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಲು ನಿರ್ಧರಿಸಿದೆ ಎಂದು ಬಬ್ಲು ಹೇಳಿದ್ದಾನೆ.
ಮೀರತ್ ಪ್ರಕರಣದ ಹಿನ್ನೆಲೆ
20 ದಿನಗಳ ಹಿಂದೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತು. ಸೌರಭ್ ರಜಪೂತ್ (29) ಮತ್ತು ಮುಸ್ಕಾನ್ (27) 2016 ರಲ್ಲಿ ಪ್ರೇಮ ವಿವಾಹವಾದರು. ಸೌರಭ್, ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ 2019ರಲ್ಲಿ ಒಂದು ಹೆಣ್ಣು ಮಗು ಜನಿಸಿತು. ಇದರ ನಡುವೆ ಮುಸ್ಕಾನ್ಗೆ ಸಾಹಿಲ್ (25) ಜೊತೆ ವಿವಾಹೇತರ ಸಂಬಂಧ ಬೆಳೆಯಿತು. ಸೌರಭ್ ತನ್ನ ಕೆಲಸವನ್ನು ಬಿಟ್ಟು ಬೇಕರಿಯಲ್ಲಿ ಕೆಲಸ ಮಾಡಲು ಲಂಡನ್‌ಗೆ ಹೋಗಿದ್ದ. ಕಳೆದ ತಿಂಗಳು ಫೆ. 24ರಂದು ಪತ್ನಿಯ ಹುಟ್ಟುಹಬ್ಬಕ್ಕೆ ಲಂಡನ್‌ನಿಂದ ಹಿಂತಿರುಗಿದ್ದ. ಈ ತಿಂಗಳ 4ರಂದು ಸೌರಭ್ನನ್ನು ಮುಸ್ಕಾನ್ ಮತ್ತು ಸಾಹಿಲ್ ಸೇರಿ ಕೊಲೆ ಮಾಡಿದ್ದಾರೆ. ಸೌರಭ್ ಕಾಣೆಯಾದ ನಂತರ ಅವನ ಪೋಷಕರು ಪೊಲೀಸರನ್ನು ಸಂಪರ್ಕಿಸಿದಾಗ ಕೊಲೆ ಬೆಳಕಿಗೆ ಬಂದಿದೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮದುವೆಯಾದ 15 ದಿನಗಳಲ್ಲೇ ಗಂಡನನ್ನು ಕೊಲ್ಲಿಸಿದ ಪತ್ನಿ
ಪೊಲೀಸ್ ವರದಿಯ ಪ್ರಕಾರ, ಮಾರ್ಚ್ 19ರಂದು, ಸಹಾರಾ ಪೊಲೀಸ್ ಠಾಣೆಗೆ ಒಂದು ಕರೆ ಬಂತು. ಒಬ್ಬ ವ್ಯಕ್ತಿ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ತಲುಪಿದ ಪೊಲೀಸರು ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟ. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಪೊಲೀಸ್ ತನಿಖೆಯ ಸಮಯದಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ಮೃತನ ಪತ್ನಿ ಮತ್ತು ಆಕೆಯ ಗೆಳೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಮೃತ ದಿಲೀಪ್ ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 5ರಂದು ಪ್ರಗತಿ ಎಂಬ ಯುವತಿಯನ್ನು ವಿವಾಹವಾಗಿದ್ದ. ಆದಾಗ್ಯೂ, ಪ್ರಗತಿ ಅದೇ ಗ್ರಾಮದ ಅನುರಾಗ್ ಯಾದವ್ ಜೊತೆ ಸಂಬಂಧ ಹೊಂದಿದ್ದಳು. ಅಲ್ಲದೆ, ಈ ಮದುವೆಯೂ ಅವಳ ಇಚ್ಛೆಗೆ ವಿರುದ್ಧವಾಗಿ ನಡೆದಿತ್ತು. ದಿಲೀಪ್ ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದಾನೆ ಎಂದು ನಂಬಿದ ಪತ್ನಿ ಪ್ರಗತಿ, ತನ್ನ ಗೆಳೆಯನೊಂದಿಗೆ ಸೇರಿ ತನ್ನ ಗಂಡನನ್ನು ತೊಡೆದುಹಾಕಲು ಸಂಚು ರೂಪಿಸಿದಳು. ತನ್ನ ಗಂಡನನ್ನು ಕೊಲ್ಲಲು ಬಬ್ಲು ಯಾದವ್ ಎಂಬ ವ್ಯಕ್ತಿಗೆ 2 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಳು. ಆತ, ದಿಲೀಪ್ ಮೇಲೆ ಹಲ್ಲೆ ನಡೆಸಿ, ಗುಂಡಿಕ್ಕಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಸುಪಾತಿ ಹಂತಕ, ಮೃತನ ಪತ್ನಿ ಮತ್ತು ಆಕೆಯ ಗೆಳೆಯನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)
ಕಿಲ್ಲರ್ ಪತ್ನಿಯರು.. ಇತ್ತೀಚಿನ ಈ 3 ಪ್ರಕರಣಗಳಲ್ಲಿ ಕೊಲೆಗಳ ಮಾದರಿ ಬಹುತೇಕ ಒಂದೇ, ಇದು ಮೋಹದ ಬಲೆ! Killer Wives