ಎಲ್ಲರಿಗೂ ಸಿಗಲ್ಲ ಇಂಥ ಚಾನ್ಸ್​! ಇಬ್ಬರು ಪ್ರಿಯತಮೆಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ!

marriage
Published on

ಬಸ್ತಾರ್​: ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವುದು ಅಷ್ಟು ಸುಲಭವಲ್ಲ. ಕುಟುಂಬಗಳನ್ನು ಒಪ್ಪಿಸಬೇಕು, ಅವರ ಒಪ್ಪಿಗೆ ನಂತರ ಮದುವೆಯಾಗಬೇಕು. ಆದರೆ ಇಲ್ಲೊಬ್ಬ ಯುವಕನದ್ದು ಮಾತ್ರ ಬಂಪರ್​ ಆಫರ್​. ಇಬ್ಬರನ್ನು ಪ್ರೀತಿಸಿದ ಈತ ಇಬ್ಬರೂ ಪ್ರಿಯತಮೆಯರನ್ನು ಒಂದೇ ದಿನ ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ಇಬ್ಬರೂ ವಧುಗಳು ಸಂತೋಷದಿಂದ ಗಂಡನೊಂದಿಗೆ ಬಾಳ್ವೆ ಆರಂಭಿಸಿದ್ದಾರೆ.

ಇಂತದ್ದೊಂದು ವಿಶೇಷ ಘಟನೆ ನಡೆದಿದ್ದು ಚತ್ತೀಸಗಢದ ಬಸ್ತಾರ್​ ಜಿಲ್ಲೆಯಲ್ಲಿ. ಮೂರು ವರ್ಷಗಳ ಹಿಂದೆ 24 ವರ್ಷದವನಾಗಿದ್ದ ಚಂದು ಮೌರ್ಯ ಜಿಲ್ಲೆಯ ತೋಕಾಪಲ್​ ಪ್ರದೇಶಕ್ಕೆ ವಿದ್ಯುತ್​ ಕಂಬಗಳನ್ನು ಕೂರಿಸಲು ಹೋಗಿದ್ದನಂತೆ. ಈ ಸಮಯದಲ್ಲಿ ಆತನಿಗೆ ಅಲ್ಲಿನ 21 ವರ್ಷದ ಬೆಡಗಿ ಸುಂದರಿ ಕಶ್ಯಪ್​ನೊಂದಿಗೆ ಪ್ರೀತಿ ಹುಟ್ಟಿದೆ. ಇಬ್ಬರು ಪರಸ್ಪರ ಪ್ರೀತಿ ಮಾಡಿದ್ದು, ಫೋನ್​ನಲ್ಲಿ ಸಂಪರ್ಕ ಸಾಧಿಸಿಕೊಂಡಿದ್ದಾರೆ. ಅದಾದ ಒಂದೇ ವರ್ಷದಲ್ಲಿ ಹಸೀನಾ(20) ಹೆಸರಿನ ಯುವತಿ ಚಂದುವಿನ ಊರಿಗೆ ಯಾರದ್ದೋ ಮದುವೆಗೆ ಬಂದಿದ್ದಾಳೆ. ಅವಳಿಗೆ ಚಂದುವಿನ ಮೇಲೆ ಪ್ರೀತಿ ಹುಟ್ಟಿದೆ. ಚಂದುಗೆ ಆಕೆಯ ಮೇಲೆ ಪ್ರೀತಿ ಹುಟ್ಟಿದ್ದು, ಇಬ್ಬರೂ ಫೋನ್​ ನಂಬರ್​ ಹಂಚಿಕೊಂಡಿದ್ದಾರೆ.

ಹಸೀನ್​ ಜತೆ ಪ್ರೀತಿ ಹುಟ್ಟಿರುವ ವಿಚಾರವನ್ನು ಚಂದು ಸುಂದರಿಗೂ ತಿಳಿಸಿದ್ದಾಳೆ. ಇದಕ್ಕೆ ಆಕೆ ಆಕ್ಷೇಪಣೆ ಮಾಡದೆಯೇ ಪ್ರೀತಿಗೆ ಒಪ್ಪಿದ್ದಾಳೆ. ಕೆಲ ತಿಂಗಳ ಹಿಂದೆ ಹಸೀನಾ ಚಂದುವಿನ ಮನೆಗೆ ಬಂದು ನೆಲೆಸಿದ್ದಾಳೆ. ಇದನ್ನು ತಿಳಿದ ಸುಂದರಿಯೂ ಚಂದುವಿನ ಮನೆಯಲ್ಲಿರಲು ಬಂದಿದ್ದಾಳೆ. ಮೂವರು ಲೀವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ್ದಾರೆ. ಇದಕ್ಕೆ ಮನೆಯಲ್ಲಿದ್ದ ಚಂದುವಿನ ಅಪ್ಪ ಅಮ್ಮ ಮತ್ತು ಇಬ್ಬರು ಸಹೋದರರೂ ಒಪ್ಪಿಗೆ ನೀಡಿದ್ದಾರೆ. ಆದರೆ ಈ ಸಂಬಂಧದ ಬಗ್ಗೆ ಗ್ರಾಮಸ್ಥರು ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ. ಪ್ರತಿದಿನ ಪ್ರಶ್ನೆಗಳನ್ನು ಕೇಳಿ ಬೇಸತ್ತಿದ್ದ ಕುಟುಂಬದವರು ಜನವರಿ 5ರಂದು ಚಂದುಗೆ ಸುಂದರಿ ಮತ್ತು ಹಸೀನಾ ಜತೆ ಮದುವೆ ಮಾಡಿದ್ದಾರೆ. ಒಂದೇ ಮಂಟಪದಲ್ಲಿ ಚಂದು ಇಬ್ಬರೂ ಯುವತಿಯರಿಗೆ ತಾಳಿ ಕಟ್ಟಿದ್ದಾನೆ.

ಮದುವೆಗೆ ಹಸೀನಾಳ ಕುಟುಂಬವೂ ಬಂದಿತ್ತು. ಆದರೆ ಸುಂದರಿಯ ಕುಟುಂಬ ಆಕೆಯ ಬಗ್ಗೆ ಮುನಿಸಿಕೊಂಡಿದ್ದು, ಮದುವೆಗೆ ಬಂದಿಲ್ಲ. ಮುಂದೊಂದು ದಿನ ನನ್ನ ಕುಟುಂಬವೂ ನಮ್ಮ ಮದುವೆಯನ್ನು ಒಪ್ಪಿಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ ಎನ್ನುತ್ತಾಳೆ ಸುಂದರಿ. ನಾನು ಒಬ್ಬಳನ್ನು ಮದುವೆಯಾಗಿ ಇನ್ನೊಬ್ಬಳನ್ನು ಆಗದಿದ್ದರೆ ಒಬ್ಬರಿಗೆ ದ್ರೋಹ ಮಾಡಿದಂತಾಗುತ್ತಿತ್ತು. ಅದಕ್ಕಾಗಿ ಇಬ್ಬರನ್ನೂ ಮದುವೆಯಾದೆ ಎಂದಿದ್ದಾನೆ ಚಂದು. ನಾವು ಮೂರೂ ಜನ ಸುಖ ಸಂಸಾರ ನಡೆಸುತ್ತೇವೆ ಎಂದಿದ್ದಾರೆ ನವ ವಿವಾಹಿತರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net