ಅವಳು ಮಾತನಾಡುತ್ತಿಲ್ಲ, ಕರೆ ಸ್ವೀಕರಿಸುತ್ತಿಲ್ಲ ಎಂದು ತಲೆಗೆ ರಾಡ್​ನಿಂದ ಹೊಡೆದು ಪ್ರಾಣ ತೆಗೆದ!; ಅಸಲಿ ಕಾರಣ ಇದು..

Crime Scene
Published on

ನವದೆಹಲಿ: ಆಕೆ ತನ್ನ ಬಳಿ ಮಾತನಾಡುತ್ತಿಲ್ಲ, ಫೋನ್​ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಬೇಸತ್ತ ಯುವಕನೊಬ್ಬ ವಿದ್ಯಾರ್ಥಿನಿಯೊಬ್ಬಳ ತಲೆಗೆ ರಾಡ್​ನಿಂದ ಹೊಡೆದು ಕೊಲೆ ಮಾಡಿದ್ದಾನೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಪ್ರಕರಣ ನಡೆದಿದೆ. ದೆಹಲಿಯ ಮಾಳವೀಯ ನಗರದಲ್ಲಿ ಈ ಕೊಲೆ ನಡೆದಿದೆ.

ನರ್ಗಿಸ್ (25) ಕೊಲೆಯಾದ ವಿದ್ಯಾರ್ಥಿನಿ. ಈಕೆ ಇಲ್ಲಿನ ಕಮಲಾ ನೆಹರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಇಂದು ಇಲ್ಲಿನ ಅರಬಿಂದೋ ಕಾಲೇಜ್ ಬಳಿ ಪಾರ್ಕ್​ನಲ್ಲಿ ಈಕೆಯ ಮೃತದೇಹ ಪತ್ತೆಯಾಗಿದ್ದು, ತಲೆಗೆ ಪೆಟ್ಟಾಗಿರುವುದು ಕಂಡುಬಂದಿದೆ.

ಈಕೆ ತನ್ನ ದೂರದ ಸಂಬಂಧಿ ಇರ್ಫಾನ್​ ಜೊತೆ ಪಾರ್ಕ್​ಗೆ ಬಂದಿದ್ದಳು. ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಇರ್ಫಾನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾನು ಆಕೆಯನ್ನು ಮದುವೆಯಾಗಬೇಕು ಎಂದು ಬಯಸಿದ್ದೆ. ಆದರೆ ತನಗೆ ಉದ್ಯೋಗ ಇಲ್ಲ ಎಂಬ ಕಾರಣಕ್ಕೆ ಆಕೆಯ ಮನೆಯವರು ಮದುವೆಗೆ ನಿರಾಕರಿಸಿದ್ದರು. ಆ ಬಳಿಕ ನರ್ಗಿಸ್ ತನ್ನ ಬಳಿ ಮಾತನಾಡುವುದನ್ನು ನಿಲ್ಲಿಸಿದಳು. ತನ್ನ ಕರೆ ಸ್ವೀಕರಿಸುತ್ತಿರಲಿಲ್ಲ, ಬೇಜಾರಾಗಿ ಕೊಂದೆ ಎಂದು ಆರೋಪಿ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net