ಯಾರೂ ಸಾವಿಗೀಡಾಗದಿರಲಿ ಎಂದು ಜನರನ್ನು ಸೇರಿಸಿ ಮೃತ್ಯುಂಜಯ ಜಪ ಮಾಡಿಸಿದ ವ್ಯಕ್ತಿ ಮೇಲೆ ಕೇಸ್​ ದಾಖಲು!

Samruddhi Expressway
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಜೀವಕ್ಕೆ ಕಂಟಕ ಬರುವಂಥ ಸಂದರ್ಭ-ಸೂಚನೆಗಳಿದ್ದಾಗ ಮೃತ್ಯುಂಜಯ ಹೋಮ-ಜಪ ಮಾಡಿಸುವುದು ಸಾಮಾನ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ಈ ಜಾಗದಲ್ಲಿ ಯಾರೂ ಸಾವಿಗೀಡಾಗದಿರಲಿ ಎಂದು ಜನರನ್ನು ಸೇರಿಸಿ ಮೃತ್ಯುಂಜಯ ಜಪ ಮಾಡಿಸಿದ್ದಕ್ಕೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಸಮೃದ್ಧಿ ಎಕ್ಸ್​ಪ್ರೆಸ್​ವೇನಲ್ಲಿ ಜು. 1ರಂದು ಖಾಸಗಿ ಬಸ್​ಗೆ ಬೆಂಕಿ ಹೊತ್ತಿಕೊಂಡು 25 ಮಂದಿ ಸತ್ತು ಸುಟ್ಟು ಕರಕಲಾಗಿದ್ದರು. ಅಲ್ಲದೆ ಕಳೆದ 6 ತಿಂಗಳಲ್ಲಿ ಈ ಪ್ರದೇಶದಲ್ಲಿ 80ಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಬುಲ್ದಾನದ ನೀಲೇಶ್ ಅಧವ್ ಎಂಬ ವ್ಯಕ್ತಿ ಜುಲೈ 23ರಂದು ಈ ಪ್ರದೇಶದಲ್ಲಿ ಮೃತ್ಯುಂಜಯ ಯಂತ್ರ ಅಳವಡಿಸಿ, ಜನರನ್ನು ಸೇರಿಸಿ ಮೃತ್ಯುಂಜಯ ಜಪ ಮಾಡಿಸಿದ್ದ. ಇದನ್ನು ವಿರೋಧಿಸಿ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಹಮಿದ್ ದಾಭೋಲ್ಕರ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದ. ಆದ್ದರಿಂದ ಮಹಾರಾಷ್ಟ್ರ ಪೊಲೀಸರು ಅಧವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ್ಯುಂಜಯ ಯಂತ್ರ ಅಳವಡಿಸಿದ ಜಾಗದಿಂದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನು ಅಪಘಾತ ಸಂಭವಿಸುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಜನರನ್ನು ದಾರಿ ತಪ್ಪಿಸಿರುವ ಹಿನ್ನೆಲೆಯಲ್ಲಿ ಅಧವ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net