ಶವಾಗಾರದಲ್ಲಿ ಇಟ್ಟಿದ್ದ ದೇಹ ವಿರೂಪ! ಕಾರಣ ತಿಳಿದ ಕುಟುಂಬಸ್ಥರು ಕೆಂಡಾಮಂಡಲ

ವಿಜಯವಾಣಿ (35)
Published on

ಉತ್ತರಾಖಂಡ್‌: ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ಕೊಠಡಿಯಲ್ಲಿ ಇರಿಸಲಾಗಿದ್ದ ವ್ಯಕ್ತಿಯೊಬ್ಬರ ಮೃತದೇಹವು ಇಲಿಗಳಿಂದ ಭಾಗಶಃ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸುದ್ದಿ ಕೇಳಿದ ಕುಟುಂಬಸ್ಥರು ಆಸ್ಪತ್ರೆಯ ಆಡಳಿತ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದು, ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಉತ್ತರಾಖಂಡ್‌ನ ಪೌರಿಯಲ್ಲಿ ವರದಿಯಾಗಿದೆ.

ಗ್ರಾಮೀಣಾಭಿವೃದ್ಧಿ ಅಧಿಕಾರಿಯಾಗಿದ್ದ ವ್ಯಕ್ತಿಯೊಬ್ಬರು ಶುಕ್ರವಾರದಂದು ತೀವ್ರ ಅಸ್ವಸ್ಥತೆಯಿಂದ ಮೃತಪಟ್ಟಿದ್ದಾರೆ. ಘಟನೆಯ ಬೆನ್ನಲ್ಲೇ ಕುಟುಂಬದವರು ಆಸ್ಪತ್ರೆಯ ಸಿಬ್ಬಂದಿಗಳ ಬಳಿ ಶವಪರೀಕ್ಷೆಗೆ ಮನವಿ ಮಾಡಿದ್ದರು. "ಶವಾಗಾರಕ್ಕೆ ಆರಂಭಿಕ ಭೇಟಿ ನೀಡಿದಾಗ, ಶವವನ್ನು ಇರಿಸಲಾಗಿದ್ದ ಫ್ರೀಜರ್‌ನ ಬೀಗ ಮುರಿದಿರುವುದು ನಮ್ಮ ಗಮನಕ್ಕೆ ಬಂತು ಕೂಡಲೇ ಆಸ್ಪತ್ರೆಯ ಸಿಬ್ಬಂದಿಗೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ, ದೇಹವು ಸುರಕ್ಷಿತವಾಗಿರುತ್ತದೆ ಎಂದು ಭರವಸೆ ನೀಡಿ, ನಮ್ಮನ್ನು ಅಲ್ಲಿಂದ ಕಳಿಸಿದರು" ಎಂದು ವ್ಯಕ್ತಿಯ ಸಹೋದರ ನಿತಿನ್ ಉಪ್ರೇತಿ ಹೇಳಿದ್ದಾರೆ.

ಘಟನೆಗೆ ಪ್ರತಿಕ್ರಿಯೆಯಾಗಿ, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ (ACMO), ಪೌರಿ, ಡಾ. ರಮೇಶ್ ಕುಮಾರ್, ಮರಣೋತ್ತರ ಪರೀಕ್ಷೆಯ ಕೊಠಡಿಯ ಬಾಗಿಲು ಸ್ವಲ್ಪ ಸಮಯದವರೆಗೆ ದೋಷಪೂರಿತವಾಗಿದೆ ಎಂಬ ಸಂಗತಿಯನ್ನು ಒಪ್ಪಿಕೊಂಡರು. ದುರಸ್ತಿಗೆ ಸೂಚನೆಗಳ ಹೊರತಾಗಿಯೂ, ಯಾವುದೇ ಬಡಗಿ ಈ ಕಾರ್ಯವನ್ನು ಕೈಗೊಳ್ಳಲು ಮುಂದಾಗಲಿಲ್ಲ ಎಂದು ತಿಳಿಸಿದ್ದು, ಇದು ಅಂತಿಮವಾಗಿ ಇಲಿಗಳಿಗೆ ಸುಲಭವಾಗಿ ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ಇಂತಹ ಭೀಕರ ಘಟನೆ ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ. ಬಾಗಿಲುಗಳನ್ನು ಸರಿಪಡಿಸಲು ಶ್ರೀನಗರದಿಂದ ಬಡಗಿಗಳನ್ನು ಕರೆಸಲಾಗಿದೆ ಮತ್ತು ಸೌಲಭ್ಯದೊಳಗೆ ದಂಶಕಗಳ ಸಮಸ್ಯೆಯನ್ನು ತೊಡೆದುಹಾಕಲು ಕೀಟ ನಿಯಂತ್ರಣ ಕ್ರಮಗಳನ್ನು ಕೂಡ ವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net