More

    ಬರಿದಾಗಲಿ ಬದುಕು ತೊರೆದು ಹೋಗುವ ಮುನ್ನ!

    DR KP putturayaಖ್ಯಾತ ಪ್ರವಚನಕಾರರೊಬ್ಬರು ತಮ್ಮ ಪ್ರವಚನದ ವೇಳೆ ಸಭಿಕರಿಗೊಂದು ಪ್ರಶ್ನೆಯನ್ನು ಕೇಳುತ್ತಾರೆ. ಈ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಭೂಭಾಗ ಯಾವುದು? ಸಭಿಕನೊಬ್ಬ ಹೇಳಿದ: ಇಂಧನ ತೈಲ ತುಂಬಿದ ಕೊಲ್ಲಿ ರಾಷ್ಟ್ರಗಳು. ಇನ್ನೊಬ್ಬನೆಂದ: ಆಫ್ರಿಕಾದಲ್ಲಿರುವ ವಜ್ರಗಳ ಹರಳು ತುಂಬಿದ ಭೂಮಿ. ಈ ಉತ್ತರಗಳನ್ನು ನಿರಾಕರಿಸಿದ ಗುರುಗಳು ಹೇಳಿದರು: ಜಗತ್ತಿನ ಅತ್ಯಂತ ಶ್ರೀಮಂತ ಭೂಭಾಗವೆಂದರೆ ಕೋಟ್ಯಂತರ ಸಂಖ್ಯೆಯಲ್ಲಿ ಮೃತರನ್ನು ಮಣ್ಣು ಮಾಡಿದ ಸ್ಮಶಾನಗಳು!

    ಇದು ಹೇಗೆಂದು ಸಭಿಕರು ಪ್ರಶ್ನಿಸಲು ಪ್ರವಚನಕಾರರು ವಿವರಿಸಿದರು. ಕೋಟ್ಯಂತರ ಜನರು ಜೀವದಲ್ಲಿದ್ದಾಗ ತಾವು ಕಂಡ ಸುಂದರ ಕನಸುಗಳನ್ನು ನನಸು ಮಾಡಲು ಸಾಧ್ಯವಾಗದೇ, ತಮ್ಮೊಂದಿಗೆ ಹೊತ್ತುಕೊಂಡು ಸತ್ತು ಹೋದ ಜಾಗವಿದು. ಅಂತೆಯೇ ಲಕ್ಷಾಂತರ ಜನರು ತಮ್ಮ ಜೀವನದಲ್ಲಿ ತಾವು ಕಷ್ಟಪಟ್ಟು ಗಳಿಸಿದ ಜ್ಞಾನವನ್ನು ಕರಗತ ಮಾಡಿಕೊಂಡ ಕಲೆ-ಕೌಶಲಗಳನ್ನು, ಪಡೆದ ಅನುಭವಗಳನ್ನು ಯಾರಿಗೂ ಹಂಚದೇ ತಮ್ಮೊಂದಿಗೆ ಒಯ್ದು ಅವೆಲ್ಲವನ್ನೂ ವ್ಯರ್ಥಗೊಳಿಸಿ ನಿರ್ಗಮಿಸಿದ ಸ್ಥಳವಿದು. ಮಾತ್ರವೇ ಅಲ್ಲ ತಾವು ದುಡಿದು ಸಂಪಾದಿಸಿದ ಸಂಪತ್ತನ್ನು ಜೀವದಲ್ಲಿರುವಾಗ ಕೊಟ್ಟು ಹೋಗದೇ ಅನ್ಯರ ಪಾಲಿಗೆ ಬಿಟ್ಟು ಹೋಗಿ ನಿರ್ಗಮಿಸಿದ ಜಾಗವಿದು. ಆದುದರಿಂದಲೇ ಅತ್ಯಂತ ಶ್ರೀಮಂತ ಭೂಭಾಗ.

    ತಾತ್ಪರ್ಯ ಇಷ್ಟೆ: ಪ್ರತಿಯೊಬ್ಬರೂ ತಮ್ಮ ಜೀವನವನ್ನು ವ್ಯರ್ಥಗೊಳಿಸುವುದಿಲ್ಲ. ಅತ್ಯಮೂಲ್ಯ ಅನುಭವವನ್ನು ಪಡೆದಿರುತ್ತಾರೆ. ಇಲ್ಲವೇ ಜ್ಞಾನವನ್ನು ಹೊಂದಿರುತ್ತಾರೆ. ಅಥವಾ ಯಾವುದಾದರೊಂದು ಕಲೆಯನ್ನು, ಕೌಶಲವನ್ನು ಕರಗತ ಮಾಡಿಕೊಂಡಿರುತ್ತಾರೆ. ಏನೂ ಇಲ್ಲವಾದರೆ ಒಂದಿಷ್ಟು ಸಂಪತ್ತನ್ನಾದರೂ ಸಂಪಾದಿಸಿರುತ್ತಾರೆ. ಸತ್ತಮೇಲೆ ನಮ್ಮ ಆಸ್ತಿ-ಪಾಸ್ತಿ ನಗನಾಣ್ಯ, ವಸ್ತು-ವಡವೆ ಮಡದಿ ಮಕ್ಕಳ ಪಾಲಾಗುವುದು ಸ್ವಾಭಾವಿಕ. ಅಂತೆಯೇ ನಮ್ಮ ಅನುಭವ, ಜ್ಞಾನ ಕರ-ಕುಶಲತೆಗಳು ಕೂಡಾ ಇತರರಿಗೆ ಲಭ್ಯವಾಗಬೇಕು. ಇಲ್ಲವಾದರೆ ಅದು ಪೆಟ್ಟಿಗೆಯೊಳಗೆ ಭದ್ರವಾಗಿ ಮುಚ್ಚಿಟ್ಟ ಶ್ರೀಗಂಧದ ಕೊರಡಿನಂತೆ ವ್ಯರ್ಥವಾಗಿ ಹೋಗುತ್ತದೆ. ಇಲ್ಲವೇ ನಾಶವಾಗಿ ಹೋಗುತ್ತದೆ.

    ಈ ಸತ್ಯವನ್ನೇ ಪುರಂದರದಾಸರು ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸು ಎಂದರು. ಒಂದು ದೀಪ, ಇನ್ನೊಂದು ದೀಪವನ್ನು ಹಚ್ಚಿದರೆ, ಅದರ ಬೆಳಕು ಹೇಗೆ ಕಡಮೆಯಾಗದೋ ಅಂತೆಯೇ ನಮ್ಮಲ್ಲಿರುವ ಅನುಭವಾಮೃತ, ಅಪೂರ್ವ ಜ್ಞಾನ ಹಾಗೂ ವಿಶೇಷವಾದ ಕರಕುಶಲತೆಗಳನ್ನು ಇತರರಿಗೆ ರವಾನಿಸಿದರೆ ನಮ್ಮದೇನೂ ಕಡಿಮೆಯಾಗದು; ಬದಲಾಗಿ ಬದುಕು ಸಾರ್ಥಕಗೊಳ್ಳುತ್ತದೆ. ಸಾಯುವ ಮುನ್ನ ಈ ಪ್ರಪಂಚಕ್ಕೆ ಏನಾದರೂ ಒಳ್ಳೆಯದನ್ನು ಕೊಟ್ಟು ಹೋಗಬೇಕು ಎಂಬ ಸಂಕಲ್ಪ ಬಂದು, ಆ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾದಾಗಲೇ ಜೀವನ ಸಾರ್ಥಕಗೊಳ್ಳುವುದು. ಸತ್ತ ಮೇಲೆ ನಾವು ಯಾರೂ ಕಂಡರಿಯದ ಸ್ವರ್ಗಕ್ಕೆ ಹೋಗುವುದಂತಿರಲಿ, ನಾವು ವಾಸಿಸಿದ ಜಗತ್ತಿಗಿಂತಲೂ ಒಳ್ಳೆಯ ಜಗತ್ತನ್ನು ಮುಂದಿನ ತಲೆಮಾರಿನವರಿಗೆ ಬಿಟ್ಟು ಹೋಗಬೇಕು. ಈ ಹಿನ್ನೆಲೆಯಲ್ಲಿ ಜೀವನದ ಉದ್ದೇಶ ಕಂಡ ಕನಸುಗಳನ್ನು ನನಸು ಮಾಡಿ ಸಾಯುವುದು! ಜೀವನದಲ್ಲಿ ತಾನು ಬೆಳೆಯಬೇಕೆಂಬ ಕನಸು ಇರಬೇಕು, ಅಂತೆಯೇ ಇತರರನ್ನು ಬೆಳೆಸಬೇಕೆಂಬ ಮನಸ್ಸು ಕೂಡಾ ಇರಬೇಕು. ಆದುದರಿಂದ ನಾವು ಪಡೆದದ್ದನ್ನೆಲ್ಲಾ ನೀಡಿ ಹೋಗಬೇಕು;ನೀಡುವುದರಲ್ಲಿ ಇರುವ ಸಂತೋಷ ಪಡೆಯುವುದರಲ್ಲಿ ಇಲ್ಲ. ಇದನ್ನು ಅನುಭವಿಸಬೇಕು. ವಿವರಿಸಲಾಗದು.

    ಈ ಜಗತ್ತಿಗೆ ಬರುವಾಗ ಬರಿ ಕೈಯ್ಯಲ್ಲಿ ಬಂದೆವು. ಈ ಜಗತ್ತನ್ನು ಬಿಟ್ಟು ಹೋಗುವಾಗ ಬರೀ ಕೈಯ್ಯಲ್ಲಿ ಹೊರಟು ಹೋಗಬೇಕು! ನಮ್ಮ ಜೊತೆ ಏನನ್ನೂ ಒಯ್ಯಬಾರದು. ಸಂಪತ್ತಿನ ವಿಚಾರದಲ್ಲೂ ಅಷ್ಟೆ. ಸಂಪತ್ತಿಗಿರುವ ಮೂರು ಹಂತಗಳಾದ ಗಳಿಕೆ- ಉಳಿಕೆ- ಬಳಕೆಗಳನ್ನು ಸಮಪ್ರಮಾಣದಲ್ಲಿ ನಿಭಾಯಿಸಬೇಕು. ಎಷ್ಟೋ ಜನರು ಎಲ್ಲವನ್ನೂ ತಮ್ಮೊಂದಿಗೆ ಗುಪ್ತವಾಗಿಟ್ಟುಕೊಂಡು ಮರಣ ಹೊಂದಿ ಸ್ಮಶಾನಗಳನ್ನು ಶ್ರೀಮಂತಗೊಳಿಸುತ್ತಾರೆ. ಇದು ತರವಲ್ಲ. ಇದರಿಂದ ಸಮಾಜಕ್ಕೆ ನಷ್ಟವೇ ಆದೀತು. ಇನ್ನೂ ಕೆಲವರಂತೂ ತಾವೂ ಈ ಜಗತ್ತಿಗೆ ಅನಿವಾರ್ಯವೆಂಬ ಭ್ರಮೆಯಿಂದ ಬದುಕುತ್ತಾರೆ. ಆದರೆ ಹೀಗೆ ತಿಳಿದವರ ಹೆಣಗಳಿಂದಲೇ ಸ್ಮಶಾನಗಳು ತುಂಬಿವೆ ಅನ್ನುವುದು ಸತ್ಯ. ಈ ಭೂಮಿಗೆ ಬರುವಾಗ ನಮಗೆ ಇದ್ದಿದ್ದು ಬರೇ ಉಸಿರು, ಹೆಸರಲ್ಲ; ಭೂಮಿಯನ್ನು ಬಿಟ್ಟು ಹೋಗುವಾಗ ಉಸಿರಿರುವುದಿಲ್ಲ; ಒಳ್ಳೆಯ ಹೆಸರಿರಲಿ. ಈ ಜಗತ್ತಿಗೆ ಬರುವುದು ಮತ್ತು ಇಲ್ಲಿಂದ ಹೊರಟು ಹೋಗುವುದು ಭಗವಂತನ ಇಚ್ಛೆ. ಆದರೆ ಬಂದು ಹೋಗುವುದರ ನಡುವೆ ಹೀಗೆ ಬದುಕಬೇಕೆಂಬುದು ನಮ್ಮ ಇಚ್ಛೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ; ಸಾರ್ಥಕತೆಯಿಲ್ಲದೆ ಬದುಕಿದರೆ ಬದುಕಿಗೆ ಅವಮಾನ!

    ಅಡುಗೆಮನೆಯಲ್ಲಿ ಇರುವ ಈ 5 ವಸ್ತುಗಳು ಕೊಲೆಸ್ಟ್ರಾಲ್, ಮಧುಮೇಹಕ್ಕೆ ಮೂಲ ಕಾರಣ!

    ಕ್ರಿಸ್ಮಸ್ ಉಡುಗೊರೆಗಳ ನಡುವೆ ಇದೆ ಉಂಗರ; ಅದ್ಭುತ ದೃಷ್ಟಿ ಇದ್ದರೆ 7 ಸೆಕೆಂಡುಗಳಲ್ಲಿ ಪತ್ತೆ ಮಾಡಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts