More

  ಜಮೀರ್ ವಜಾಗೆ ಪ್ರತಿಪಕ್ಷ ಬಿಗಿಪಟ್ಟು; ಬಗ್ಗದ ಬಿಜೆಪಿ-ಜೆಡಿಎಸ್, ಜಗ್ಗದ ಸರ್ಕಾರ

  ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನದ ಎರಡನೇ ಚರಣದಲ್ಲಿ ಬಿಜೆಪಿ- ಜೆಡಿಎಸ್ ಜಂಟಿ ಕಾರ್ಯಾಚರಣೆ ಆರಂಭವಾಗಿದ್ದು, ಸಚಿವ ಸ್ಥಾನದಿಂದ ಜಮೀರ್ ಅಹ್ಮದ್ ವಜಾಗೆ ಪಟ್ಟುಹಿಡಿದು ಸ್ಪೀಕರ್ ಪೀಠದ ಮುಂದೆ ಧರಣಿ ನಡೆಸಿದ ಪ್ರಸಂಗ ನಡೆಯಿತು.

  ತೆಲಂಗಾಣ ಚುನಾವಣೆ ಪ್ರಚಾರ ವೇಳೆ ಜಮೀರ್ ಅಹ್ಮದ್ ‘ಕರ್ನಾಟಕದ ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿರಲಿಲ್ಲ. ಈಗ ಮೊದಲಬಾರಿಗೆ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್. ಈಗ ದೊಡ್ಡ ದೊಡ್ಡ ಬಿಜೆಪಿ ನಾಯಕರು ಕೂಡಾ ಸ್ಪೀಕರ್ ಯು.ಟಿ ಖಾದರ್ ಅವರಿಗೆ ನಮಸ್ಕಾರ ಎನ್ನುತ್ತಾರೆ. ಇದನ್ನು ಮಾಡಿದ್ದು ಯಾರು? ಕಾಂಗ್ರೆಸ್’ ಎಂದು ಖಾದರ್ ಅವರು ತೆಲಂಗಾಣ ಪ್ರಚಾರದಲ್ಲಿ ಹೇಳಿದ್ದು ವಿವಾದವಾಗಿತ್ತು. ಪ್ರಶ್ನೋತ್ತರ ಕಲಾಪದಲ್ಲಿ ಜಮೀರ್ ಅಹ್ಮದ್ ಉತ್ತರಿಸುವ ಸಂದರ್ಭ ಬಂದಾಗ ಬಿಜೆಪಿ ಶಾಸಕರು ಆಕ್ಷೇಪ ಎತ್ತಿದರು. ಸ್ಪೀಕರ್ ಪೀಠಕ್ಕೆ ಕಳಂಕ ಅಂಟಿಸಿದ ಇಂತಹ ಸಚಿವರಿಂದ ಉತ್ತರ ಬೇಡ ಎಂದು ಸರ್ಕಾರವನ್ನು ಮುಜುಗರಕ್ಕೆ ತಳ್ಳಿದರು. ಕೆಲ ನಿಮಿಷ ಜಟಾಪಟಿ ನಡೆದ ಬಳಿಕ ಸ್ಪೀಕರ್ ಅವರು ಕಲಾಪವನ್ನೇ ಮುಂದೂಡಬೇಕಾಯಿತು. ನಂತರ ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ತೀವ್ರ ಜಟಾಪಟಿ ನಡೆಯಿತು. ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಜಮೀರ್ ಅಹ್ಮದ್ ರಾಜೀನಾಮೆ ಕೊಡುವವರೆಗೂ ಕಲಾಪಕ್ಕೆ ಸಹಕಾರ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಸಭೆಯಲ್ಲಿ ತೀವ್ರ ವಾಗ್ದಾದವೂ ನಡೆಯಿತು. ಸರ್ಕಾರವೂ ಬಗ್ಗಲಿಲ್ಲ. ಜಮೀರ್ ಅವರಿಂದ ಸಮಜಾಯಿಷಿ ಅಥವಾ ಸ್ಪಷ್ಟನೆ ಕೊಡಿಸುವ ಗೋಜಿಗೂ ಹೋಗಲಿಲ್ಲ.

  ಮಧ್ಯಾಹ್ನದ ಭೋಜನ ವಿರಾಮದ ಬಳಿಕವೂ ಧರಣಿ ಮುಂದುವರಿಯಿತು. ಸ್ಪೀಕರ್ ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಧರಣಿ ನಿರತರ ಮನವೊಲಿಕೆ ಪ್ರಯತ್ನ ನಡೆಸಿದಿದರು. ಬಿಜೆಪಿ ನಾಯಕರು ಮಾತ್ರ ಇಡೀ ದಿನ ಸ್ಪೀಕರ್ ಪೀಠದ ಎದುರು ನಿಂತೇ ಇದ್ದು, ಬಗ್ಗಲಿಲ್ಲ, ಜಗ್ಗಲಿಲ್ಲ.

  ವಾಗ್ವಾದ: ಅಶ್ವತ್ಥನಾರಾಯಣ- ಜಮೀರ್ ಅಹ್ಮದ್, ಕೃಷ್ಣಬೈರೇಗೌಡ- ಆರ್.ಅಶೋಕ ನಡುವೆ ತೀವ್ರ ಜಟಾಪಟಿಯೂ ನಡೆಯಿತು. ಜಮಿರ್ ಅಹ್ಮದ್ ತಮ್ಮ ಮಾತನ್ನು ಸಮರ್ಥಿಸಿಕೊಂಡು, ನಾನು ಪೀಠಕ್ಕೆ ಅಗೌರವ ತೋರಿಲ್ಲ ಎಂದು ಹೇಳಿದರೆ, ಆರ್.ಅಶೋಕ ಅವರ ಜಮೀರ್ ಅಹ್ಮದ್ ಹೇಳಿಕೆ ಪತ್ರಿಕಾ ಹೇಳಿಕೆಯನ್ನು ಪ್ರದರ್ಶಿಸಿ ಸಂವಿಧಾನ ವಿರೋಧಿ ಹೇಳಿಕೆ ಎಂದು ಕುಟುಕಿದರು. ನಾವೇನು ಗುಲಾಮರೇ ಎಂದು ಅಶೋಕ ಪ್ರಶ್ನಿಸಿದರೆ, ಜಮೀರ್ ಅಹ್ಮದ್ ಅವರನ್ನು ಸದನಕ್ಕೆ ಬರಲು ಬಿಟ್ಟಿದ್ದು ಪ್ರವೇಶಿಸಲು ಬಿಟ್ಟಿದ್ದು ಏಕೆ ಎಂದು ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು. ಇನ್ನೊಂದೆಡೆ ಜಮೀರ್ ಅಹ್ಮದ್ ಕೆರಳಿ ಹೇಳಿಕೆ ನೀಡಲು ಮುಂದಾದಾಗ ಸಚಿವ ಶಿವಾನಂದ ಪಾಟೀಲ್ ಸಮಾಧಾನಪಡಿಸಿದರು.

  ಚರ್ಚೆಗೆ ರೆಡಿ: ಸ್ಪೀಕರ್ ಮಾತನಾಡಿ, ಬರ ಮತ್ತು ಉತ್ತರ ಕರ್ನಾಟಕದ ಚರ್ಚೆ ಬಗ್ಗೆ ಪ್ರತಿಪಕ್ಷಕ್ಕೆ ಆಸಕ್ತಿ ಇದ್ದಂತಿಲ್ಲ. ರಾಜಕೀಯವೇ ಮುಖ್ಯವಾದಂತಿದೆ ಎಂದು ಕುಟುಕಿದರು. ಈ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ, ಮೊದಲು ನಿಯಮದ ಪ್ರಕಾರ ನೋಟಿಸ್ ಕೊಡಲಿ ಎಂದರು. ಸಿಎಂ ಕೂಡ ದನಿಗೂಡಿಸಿದರು, ಬಿಜೆಪಿಯವರಿಗೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಸಲು ಸಿದ್ಧವಿಲ್ಲ. ಅವರ ಬಣ್ಣ ಬಯಲಾಗುತ್ತದೆ ಎಂಬ ಭಯ ಇದೆ. ಇವರು ಉತ್ತರ ಕರ್ನಾಟಕದ ವಿರೋಧಿಗಳು ಎಂದು ತರಾಟೆಗೆ ತೆಗೆದುಕೊಂಡರು.

  ಬಿಜೆಪಿಯಿಂದ ಚರ್ಚೆಗೆ ನೋಟಿಸ್: ವಿಧಾನ ಸಭೆ ಸ್ಪೀಕರ್ ಪೀಠದ ಕುರಿತು ಸಚಿವ ಜಮೀರ್ ಅಹ್ಮದ್ ನೀಡಿದ ಹೇಳಿಕೆ ಕುರಿತು ಚರ್ಚೆ ಮಾಡಲು ಅವಕಾಶ ಕೋರಿ ಪ್ರತಿಪಕ್ಷ ಬಿಜೆಪಿ ಸ್ಪೀಕರ್​ಗೆ ನೋಟಿಸ್ ನೀಡಿದೆ. ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಸೋಮವಾರ ಸಂಜೆ ಸ್ಪೀಕರ್​ಗೆ ನೋಟಿಸ್ ತಲುಪಿಸಲಾಗಿದೆ.

  ಸಂವಿಧಾನ ರಕ್ಷಣೆಗೆ ಹೋರಾಟ: ಸಂವಿಧಾನ ರಕ್ಷಣೆ, ಸ್ಪೀಕರ್ ಸ್ಥಾನದ ಗೌರವ-ಘನತೆ ಉಳಿಸಲು ವಿಧಾನಸಭೆಯಲ್ಲಿ ಬಿಜೆಪಿ ಹೋರಾಟ ನಡೆಸಿದೆಯೇ ಹೊರತು ರಾಜಕಾರಣಕ್ಕಲ್ಲವೆಂದು ಆರ್.ಅಶೋಕ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ನಿಲುವು ಸಮರ್ಥಿಸಿಕೊಂಡರು. ಜಮೀರ್ ಅಹಮದ್ ನೀಡಿರುವ ಹೇಳಿಕೆ ತಪು್ಪ ಎಂದು ವಿಧಾನಸಭಾಧ್ಯಕ್ಷರು ಹೇಳದಿರುವುದೂ ದುರದೃಷ್ಟಕರ. ಮುಸ್ಲಿಮರನ್ನು ಓಲೈಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವಾಗಿದ್ದು, ಹಿಂದುಗಳನ್ನು ಎರಡನೇ ದರ್ಜೆ ನಾಗರಿಕರಂತೆ ಪರಿಗಣಿಸಿದ್ದಾರೆ ಎಂದು ಅಶೋಕ್ ಕಿಡಿಕಾರಿದರು. ಜಮೀರ್ ವಿರುದ್ಧ ಕ್ರಮಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ಅನಿವಾರ್ಯವಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

  ಜಿನ್ನಾ ಫೋಟೋ ಹಾಕಿಬಿಡಿ: ವಿಧಾನಸಭೆಯೊಳಗೆ ಮೊಹಮದ್ ಹಾಲಿ ಜಿನ್ನಾ ಫೋಟೋವನ್ನೂ ಹಾಕಿಬಿಡಿ ಎಂದು ಬಿಜೆಪಿ ಶಾಸಕರು ಕುಟುಕಿದರು. ಜಮೀರ್ ಅಹ್ಮದ್ ಅವರನ್ನು ಕರ್ನಾಟಕದ ಜಿನ್ನಾ, ಕೋಮುವಾದಿ ಜಮೀರ್ ಎಂದೂ ಘೋಷಣೆ ಹಾಕಿದರು. ಇನ್ನು ಮುಂದೆ ಸ್ಪೀಕರ್​ಗೆ ನಮಸ್ಕಾರ ಹೇಳುವಂತಿಲ್ಲ, ಸಲಾಂಮಲೇಕಮ್ ಎನ್ನಬೇಕೆಂದು ಅಪಹಾಸ್ಯಮಾಡಿದರು. ಖಾದರ್ ಸಾಬ್ ಇದರ್ ದೇಖೋ, ಸುನೋ ಎಂದೂ ಸಹ ಹೇಳಿದರು. ಸ್ಪೀಕರ್ ಅವರೇ, ಜಮೀರ್ ಹೇಳಿಕೆಯನ್ನು ನೀವು ಖಂಡಿಸಲಿಲ್ಲ, ನಿಮ್ಮದೂ ಬೆಂಬಲವೇ ಎಂದು ಯತ್ನಾಳ್ ಕುಟುಕಿದರು.

  ಮುಖ್ಯಮಂತ್ರಿ ಸಮರ್ಥನೆ: ಸ್ಪೀಕರ್ ಸ್ಥಾನಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಅಗೌರವ ತೋರಿಸಿಲ್ಲ. ಅಸಂಸದೀಯ ಪದ ಬಳಕೆ ಮಾಡಿಲ್ಲ. ಬಿಜೆಪಿಗೂ ಅಗೌರವ ತರುವ ಕೆಲಸ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಮ್ಮ ಪಕ್ಷ ಸಂವಿಧಾನಕ್ಕೆ ಗೌರವ ನೀಡುತ್ತಿದೆ. ಇದು ಸಂವಿಧಾನದ ಬಿಕ್ಕಟ್ಟು ಅಲ್ಲ. ಶಾಸಕರು ಹಕ್ಕುಚ್ಯುತಿ ತರುವ ಕೆಲಸ ಮಾಡಿಲ್ಲ. ಇದನ್ನು ಜಮೀರ್ ಕೂಡ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೋತ್ತರ ಕಲಾಪ ನಡೆಯು ವಾಗ ನೀವು ಈ ವಿಷಯ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರೆ ಹೇಗೆ? ಚರ್ಚೆ ಮಾಡಲೇಬೇಕಾದರೆ ಸ್ಪೀಕರ್​ಗೆ ನೋಟಿಸ್ ನೀಡಿ ಎಂದು ಹೇಳಿದರು.

  ಪ್ರತಿಪಕ್ಷದ ವಾಗ್ಬಾಣ

  • 1 ಇದು ಭಾರತ, ಹಿಂದೂಸ್ಥಾನ. ಒಂದು ಧರ್ಮದ ಪರವಾಗಿ ಜಮೀರ್ ಮಾತನಾಡಿದ್ದು ಸರಿಯಲ್ಲ. ಹಿಂದೂಗಳಲ್ಲಿ ಕೀಳರಿಮೆಯಿಂದ ನೋಡಲು ಅವಕಾಶ ಯಾರು ಕೊಟ್ಟರು?
  • 2 ಜಮೀರ್ ಅಹ್ಮದ್ ಕೋಮುವಾದಿ. ಸಂವಿಧಾನ ವಿರೋಧಿ. ಸ್ಪೀಕರ್ ಪೀಠಕ್ಕೆ ಅಪಚಾರ ಎಸಗುವಂತೆ ಹೇಳಿಕೆ ನೀಡಿದ್ದಾರೆ. ಸ್ಪೀಕರ್ ಕೂಡ ಪ್ರತಿಕ್ರಿಯೆ ನೀಡಿಲ್ಲ.
  • 3 ಜಮೀರ್ ಮಾತಿನ ಅರ್ಥದಲ್ಲಿ ಮುಸ್ಲಿಂ ಧರ್ಮದವರು ಉನ್ನತ ಸ್ಥಾನದವರು. ಅವರ ಅಡಿಯಲ್ಲಿ ಹಿಂದೂಗಳು ಸಲಾಂ ಹೊಡೆದು ಅವರ ಕೆಳಗೆ ಕೂರಬೇಕು ಎಂಬಂತಿದೆ.
  • 4 ಸಂವಿಧಾನ ಅನುಚ್ಛೇದದ ಪ್ರಕಾರ ಈ ಹೇಳಿಕೆ ಉಲ್ಲಂಘನೆಯಾಗಲಿದೆ. ಜಮೀರ್ ವಿರುದ್ಧ ಕೇಸ್ ದಾಖಲಿಸಬೇಕಿತ್ತು. ಆದರೆ ಪ್ರಜಾಪ್ರಭುತ್ವ ದಮನ ಮಾಡಿ, ಮುಸ್ಲಿಂ ಓಲೈಕೆ ನಡೆದಿದೆ.
  • 5 ಪೀಠಕ್ಕೆ ಅಗೌರವ ಕೊಡುವ ಮಾತನಾಡಿ ದರೂ ಸುಮ್ಮನಿರುವ ಕಾಂಗ್ರೆಸ್​ಗೆ ನಾಚಿಕೆ ಆಗುವುದಿಲ್ಲವೇ. ಸ್ಪೀಕರ್ ಕೂಡ ಒನ್​ಸೈಡ್ ಆಗಿ ವರ್ತಿಸುತ್ತಿದ್ದಾರೆ.

  ಸರ್ಕಾರ ತಿರುಗೇಟು

  • 1 ಮೊದಲು ನೋಟಿಸ್ ಕೊಡಿ ಆಗ ಚರ್ಚೆಗೆ ಅವಕಾಶ ನೀಡಲಾಗುತ್ತದೆ
  • 2 ಬರದ ಬಗ್ಗೆ ಚರ್ಚೆ ಮಾಡಿದ್ದೀರಿ, ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿ
  • 3 ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡದ ಇವರು ಉತ್ತರ ಕರ್ನಾಟಕ ವಿರೋಧಿಗಳು
  • 4 ಜಮೀರ್ ಅವರು ಯಾವುದೇ ತಪ್ಪು ಮಾಡಿಲ್ಲ, ಅವರ ಹೇಳಿಕೆಯನ್ನು ತಿರುಚಲಾಗುತ್ತಿದೆ
  • 5 ಬಿಜೆಪಿಗೆ ರಾಜ್ಯದ ಸಮಸ್ಯೆಗಿಂತ ರಾಜಕೀಯವೇ ಮುಖ್ಯವಾಗಿದೆ

  ಪೀಠಕ್ಕೆ ಎಲ್ಲರೂ ನಮಸ್ಕಾರ ಮಾಡಲೇಬೇಕು. ಕಾಂಗ್ರೆಸ್ ಸ್ಪೀಕರ್ ಸ್ಥಾನ ಕೊಟ್ಟಿದೆ. ಅದನ್ನು ನಾನು ಹೇಳಿದ್ದೇನೆ. ಹಿಂದುಗಳು ನಮಸ್ಕಾರ ಮಾಡಬೇಕು ಎಂದು ನಾನು ಹೇಳಿದ್ದೀನಾ?

  | ಜಮೀರ್ ಅಹ್ಮದ್ ವಸತಿ ಸಚಿವ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts