ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ; ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

Kharge
Published on

ನವದೆಹಲಿ: ‘ಪಕ್ಷದಲ್ಲಿ ಜಿ-23 ಅಥವಾ ಇನ್ಯಾವುದೇ ಗುಂಪು ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವುದೇ ನಮ್ಮ ಉದ್ದೇಶ. ಈ ಕಾರಣಕ್ಕಾಗಿಯೇ ಎಲ್ಲ ಮುಖಂಡರು ನನ್ನನ್ನು ಬೆಂಬಲಿಸಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರಿಗೆ ತಿಳಿಸಿದರು. ಅನೇಕ ನಾಯಕರು ನಾನು ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದರಿಂದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಉಮೇದುವಾರಿಕೆ ಮಾಡಬೇಕಾಯಿತು. ಇದು ಯಾರ ವಿರುದ್ಧದ ದ್ವೇಷದ ಸ್ಪರ್ಧೆಯಲ್ಲ. ನಾನು ಖಂಡಿತ ದಲಿತ ನಾಯಕನೆಂದು ಸ್ಪರ್ಧೆ ಮಾಡುತ್ತಿಲ್ಲ. ನಾನು ಕಾಂಗ್ರೆಸ್​ನ ಮುಖಂಡನೆಂದು ಸ್ಪರ್ಧಿಸುತ್ತಿರುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಪರ್ಧಿಗಳ ಮಧ್ಯೆ ಒಮ್ಮತದ ಆರೋಗ್ಯಪೂರ್ಣ ಚರ್ಚೆ ಆಗಬೇಕೆಂದು ತರೂರ್​ಗೆ ಹೇಳಿರುವೆ. ಅದಕ್ಕೆ ಅವರೂ ಸಮ್ಮತಿಸಿದ್ದಾರೆ. ಪಕ್ಷ ದ ಹಿರಿಯ ನಾಯಕರ ಸೂಚನೆಯಂತೆ ಸ್ಪರ್ಧೆ ಮಾಡುತ್ತಿರುವುದಾಗಿ ತರೂರ್ ತಿಳಿಸಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಎರಡು ವರ್ಷದ ಹಿಂದೆ ಪಕ್ಷದ ನಾಯಕತ್ವ ಬದಲಾಗಬೇಕು ಎಂದು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದವರ ಪೈಕಿ ಮನಿಶ್ ತಿವಾರಿ, ಆನಂದ್ ಶರ್ವ, ಪೃಥ್ವಿರಾಜ್ ಚವಾಣ್ ಇನ್ನಿತರರು ಖರ್ಗೆಯನ್ನು ಬೆಂಬಲಿಸಿದ್ದಾರೆ.

ಪ್ರಜಾಪ್ರಭುತ್ವದ ಸಲುವಾಗಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವೆ. ನನ್ನನ್ನು ಪಕ್ಷ ಅಧಿಕೃತ ಅಭ್ಯರ್ಥಿ ಎಂದೇನೂ ಹೇಳಲಾಗಿಲ್ಲ. ಅಥವಾ ಗಾಂಧಿ ಕುಟುಂಬದ ಬೆಂಬಲ ಇದೆ ಎಂದೂ ಇಲ್ಲ. ಹಿರಿಯ ನಾಯಕರು ಮತ್ತು ಗಾಂಧಿ ಕುಟುಂಬದವರಿಂದ ಬರುವ ಉತ್ತರ ಸಲಹೆಗಳನ್ನು ಜಾರಿ ಮಾಡುವೆ.

| ಎಂ.ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ

ಬಿಹಾರದ ಕೃಷಿ ಸಚಿವ ರಾಜೀನಾಮೆ

ಬಿಹಾರದ ಕೃಷಿ ಸಚಿವ ಸುಧಾಕರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಅದನ್ನು ಸರಿಪಡಿಸಲು ಆಗುತ್ತಿಲ್ಲವೆಂದು ನೊಂದು ಸಂಪುಟ ತೊರೆಯುತ್ತಿರುವೆ ಎಂದು ಅವರು ಹೇಳಿದ್ದಾರೆ. ಮಂಡಿ ಕಾನೂನು (ಎಪಿಎಂಸಿ ಕಾಯ್ದೆ) ತಿದ್ದುಪಡಿಯು ರೈತರನ್ನು ಸರ್ವನಾಶ ಮಾಡಿದೆ. ಎಂದಿ ದ್ದಾರೆ. ಸಿಂಗ್ ರಾಜೀನಾಮೆ ನೀಡಿರುವುದನ್ನು ಅವರ ತಂದೆ ಮತ್ತು ಆರ್​ಜೆಡಿ ರಾಜ್ಯ ಘಟಕದ ಅಧ್ಯಕ್ಷ ಜಗದಾನಂದ ಸಿಂಗ್ ಖಚಿತ ಪಡಿಸಿದ್ದಾರೆ. ಕೆಲವು ದಿನದ ಹಿಂದೆ ಸುಧಾ ಕರ್ ಸಿಂಗ್ ತಮ್ಮದೇ ಇಲಾಖೆ ಬಗ್ಗೆ ಕಟುವಾಗಿ ಟೀಕೆ ವ್ಯಕ್ತಪಡಿಸಿದ್ದರು, ‘ಕೃಷಿ ಇಲಾಖೆಯಲ್ಲಿ ಬಹುತೇಕ ಕಳ್ಳರೇ ತುಂಬಿದ್ದಾರೆ. ನಾನು ಅವರ ಸರದಾರ’ ಎಂದಿದ್ದರು.

ಖರ್ಗೆಯಿಂದ ಬದಲಾವಣೆ ಸಾಧ್ಯವಿಲ್ಲ

ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ. ಖರ್ಗೆಯವರಂಥ ನಾಯಕರಿಂದ ಬದಲಾವಣೆ ಸಾಧ್ಯವಿಲ್ಲ. ಅಂಥವರೇನಿದ್ದರು ಈಗಿರುವ ವ್ಯವಸ್ಥೆಯನ್ನು ಮುಂದುವರಿಸಬಹುದಷ್ಟೆ ಎಂದು ತರೂರ್ ಹೇಳಿದ್ದಾರೆ. ‘ನಾವಿಬ್ಬರು ವೈರಿಗಳಲ್ಲ. ಪಕ್ಷದ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ. ಖರ್ಗೆ ಅವರು ಪಕ್ಷದ ಪ್ರಮುಖ ಮೂವರು ನಾಯಕರಲ್ಲಿ ಒಬ್ಬರು. ಅವರಿಂದ ಮಹತ್ತರ ಬದಲಾವಣೆ ಆಗುವುದಿಲ್ಲ. ಇರುವ ವ್ಯವಸ್ಥೆಯನ್ನು ಮುಂದುವರಿಸುತ್ತಾರೆ. ಆದರೆ ನಾನು ಪಕ್ಷದ ಕಾರ್ಯಕರ್ತರ ಆಶಯದಂತೆ ಬದಲಾವಣೆ ತರಬಲ್ಲೆ’ ಎಂದು ತರೂರ್ ನಾಗಪುರದಲ್ಲಿ ಹೇಳಿದ್ದಾರೆ.

ಶಾಸಕರ ಪ್ರತ್ಯೇಕ ಸಭೆ ತಿಳಿದಿರಲಿಲ್ಲ

ಹೊಸ ಸಿಎಂ ಹೆಸರು ಪ್ರಸ್ತಾಪವಾದಾಗ ಶಾಸಕರು ಅಕ್ರೋಶಗೊಳ್ಳುವುದು ಸಹಜ. ಆದರೆ, ಪಕ್ಷದ ಶಾಸಕಾಂಗ ಸಭೆ ನಡೆದ ದಿನ ಬೆಳಗ್ಗೆ ನಾನು ಜೈಸಲ್ಮೇರ್​ನಲ್ಲಿ ಇದ್ದೆ. ಹಾಗಾಗಿ ಜೈಪುರದಲ್ಲಿನ ಬೆಳವಣಿಗೆಗಳು ಗೊತ್ತಿರಲಿಲ್ಲ. ಸಿಎಂ ಹುದ್ದೆಯಲ್ಲಿ ಮುಂದುವರಿಯಲೇಬೇಕೆಂಬ ಹಠ ನನಗೆ ಇರಲಿಲ್ಲ. ಇದನ್ನು ನಾನು ಸೋನಿಯಾ ಗಾಂಧಿ ಮತ್ತು ಅಜಯ್ ಮಾಕನ್ ಅವರನ್ನು ಆಗಸ್ಟ್​ನಲ್ಲಿ ಭೇಟಿಯಾದಾಗಲೇ ಸ್ಪಷ್ಟ ಪಡಿಸಿದ್ದೆ ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಗೆಹ್ಲೋಟ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ ರಾಜಸ್ಥಾನದ ಸಿಎಂ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲು ಕಳೆದ ಭಾನುವಾರ ಸಿಎಂ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಯೋಜನೆಗೊಂಡಿತ್ತು. ಬಹುತೇಕ ಸಚಿನ್ ಪೈಲಟ್ ಹೆಸರು ಅಂತಿಮಗೊಂಡಿತ್ತು. ಇದನ್ನು ಸುಗಮಗೊಳಿಸಲು ಹೊಸ ಸಿಎಂ ಆಯ್ಕೆ ನಿರ್ಧಾರವನ್ನು ಪಕ್ಷದ ಅಧ್ಯಕ್ಷರಿಗೆ ಬಿಡುವ ಏಕಸಾಲಿನ ನಿರ್ಣಯ ಸಭೆಯಲ್ಲಿ ಅಂಗೀಕಾರ ಆಗಲಿದೆ ಎನ್ನಲಾಗಿತ್ತು. ಆದರೆ, ಗೆಹ್ಲೋಟ್ ಬೆಂಬಲಿತ ಸುಮಾರು 90 ಶಾಸಕರು ಪ್ರತ್ಯೇಕ ಸಭೆ ನಡೆಸಿದರು. ಎರಡು ವರ್ಷದ ಹಿಂದೆ ಸರ್ಕಾರ ಬಿದ್ದು ಹೋಗುವ ಹಂತದಲ್ಲಿದ್ದಾಗ ರಕ್ಷಿಸಿದ 100ಕ್ಕೂ ಹೆಚ್ಚು ಶಾಸಕರ ಪೈಕಿ ಒಬ್ಬರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಲಿಖಿತ ಷರತ್ತನ್ನು ಬಂಡಾಯವೆದ್ದ ಶಾಸಕರು ವೀಕ್ಷಕರ ಮುಂದೆ ಇರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net