

ಶಿವಮೊಗ್ಗ: ದಸರಾ ಹಬ್ಬದ ಅಂಗವಾಗಿ ಮಹಾನಗರ ಪಾಲಿಕೆ ಏರ್ಪಡಿಸಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ನಡೆದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಟಿಬೇಟಿಯನ್ ಮಸ್ತೀಫ್ ಎಂಬ ನಾಯಿ ವಿಶೇಷ ಆಕರ್ಷಣೆಯ ಭಾಗವಾಗಿತ್ತು.
ಭೀಮ ಎಂಬ ಹೆಸರಿನ ನಾಯಿಯನ್ನು ಬೆಂಗಳೂರಿನಿಂದ ಸತೀಶ್ ಎಂಬುವರು ಶ್ವಾನ ಪ್ರದರ್ಶನಕ್ಕೆ ತಂದಿದ್ದರು. ಇದಕ್ಕಾಗಿ ವಿಶೇಷವಾಗಿ ಕೂಲರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ 'ಭೀಮ' ಎಲ್ಲರ ಗಮನ ಸೆಳೆಯಿತು. ಅಪರೂಪದ ತಳಿಯಾದ ಟಿಬೇಟಿಯನ್ ಮ್ಯಾಸ್ತೀಫ್ ಶ್ವಾನವನ್ನು ನೋಡಲು ಶ್ವಾನಪ್ರಿಯರು ಮುಗಿಬಿದ್ದಿದ್ದಾರೆ. ಈ ವೇಳೆ ಅನೇಕರು ಸೆಲ್ಫಿ ತೆಗೆದು ಸಂಭ್ರಮಪಟ್ಟರು.
ಟಿಬೇಟಿಯನ್ ಮ್ಯಾಸ್ತೀಫ್ ನಾಯಿಯ ಬೆಲೆ 10 ಕೋಟಿ. ಇದರ ಬೆಲೆ ಕೇಳಿದ ಶ್ವಾನಪ್ರಿಯರು ಆಶ್ಚರ್ಯಚಕಿತರಾಗಿದ್ದಾರೆ. ಬೆಂಗಳೂರಿನಿಂದ ಹವಾನಿಯಂತ್ರಿತ ಕಾರಿನಲ್ಲಿ ಕರೆತಂದ ಈ ಶ್ವಾನಕ್ಕೆ ಮಲಗಲು ಮೆತ್ತನೆಯ ಹಾಸಿಗೆ ಒದಗಿಸಲಾಗಿತ್ತು.
ತಿಂಗಳಿಗೆ 25 ಸಾವಿರ ರೂ. ಖರ್ಚು!
ಈ ಶ್ವಾನವನ್ನು ಬೀಜಿಂಗ್ನಿಂದ ತಂದಿದ್ದೇನೆ. ಎರಡೂವರೆ ವರ್ಷದ ಭೀಮನನ್ನು ಸಾಕಲು ಪ್ರತಿ ತಿಂಗಳು 25 ಸಾವಿರ ರೂ. ಖರ್ಚಾಗುತ್ತದೆ. ಚಿಕನ್ ತುಂಡುಗಳು ಇದರ ಪ್ರಿಯವಾದ ಆಹಾರ. ಸುಮಾರು 90 ಕೆಜಿ ತೂಕವಿರುವ ಈತ ಅರ್ಧ ತಾಸು ವಾಕ್ ಮಾಡುತ್ತಾನೆ. ನನ್ನ ಬಳಿ ಅಪರೂಪದ ತಳಿಗಳ 150ಕ್ಕೂ ಹೆಚ್ಚು ಶ್ವಾನಗಳಿವೆ ಎಂದು ಟಿಬೇಟಿಯನ್ ಮ್ಯಾಸ್ತೀಫ್ನ ಮಾಲೀಕ ಸತೀಶ್ ಮಾಹಿತಿ ನೀಡಿದ್ದಾರೆ. ಅಪರೂಪದ ಶ್ವಾನಗಳನ್ನು ಸಾಕುವುದು ನನಗೆ ಹವ್ಯಾಸ ಎಂದಿದ್ದಾರೆ.