

ನವ ದೆಹಲಿ: ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಬೆಸ್ಟ್ ಆಲ್ರೌಂಡರ್ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ. ಶೇನ್ ವ್ಯಾಟ್ಸನ್ ಆಸ್ಟ್ರೇಲಿಯಾ ಕಂಡ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರು. 207 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವ್ಯಾಟ್ಸನ್, 10,950 ರನ್ ಗಳಿಸಿದ್ದಾರೆ. ಬೌಲಿಂಗ್ ಮೂಲಕ 291 ವಿಕೆಟ್ ಕಬಳಿಸಿದ್ದಾರೆ.
ಲೆಜೆಂಡ್ಸ್ ಕ್ರಿಕೆಟ್ ಲೀಗ್ ಆಡಲು ಭಾರತಕ್ಕೆ ಬಂದಿದ್ದ ಶೇನ್ ವ್ಯಾಟ್ಸನ್ ಹಾರ್ದಿಕ್ ಪಾಂಡ್ಯಾ ಪರ ಬ್ಯಾಟ್ ಬೀಸಿದ್ದಾರೆ. ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ನಂತರ ಹಾರ್ದಿಕ್ ಪಾಂಡ್ಯಾ ಬೆಸ್ಟ್ ಆಲ್ರೌಂಡರ್ ಆಟಗಾರ ಎಂದಿದ್ದಾರೆ. ಹಾರ್ದಿಕ್ ಪಾಂಡ್ಯಾ ತಮ್ಮ ಸಾಮರ್ಥ್ಯ ಏನು ಎಂಬುವುದನ್ನು ಈಗಾಗಲೇ ಮೈದಾನಲ್ಲಿ ತೋರಿಸಿದ್ದಾರೆ. ಮಿಡಲ್ ಆರ್ಡರ್ ಬ್ಯಾಟಿಂಗ್ ಜತೆಗೆ ಬೌಲಿಂಗ್ ಮೂಲಕವೂ ತಂಡಕ್ಕೆ ನೆರವಾಗಬಲ್ಲರು ಎಂದಿದ್ದಾರೆ.
ಐಪಿಎಲ್ನಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡು, ಅದೇ ವರ್ಷ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದಾರೆ. ಈ ಮೂಲಕ ತಾನು ಕ್ಯಾಪ್ಟನ್ ಆಗಿಯೂ ಸಮರ್ಥ ಎಂಬುವುದನ್ನು ಪಾಂಡ್ಯಾ ನಿರೂಪಿಸಿದ್ದಾರೆ. ಜತೆಗೆ ಟಿ-20 ಕ್ರಿಕೆಟ್ ಮಾದರಿಗೆ ಹೇಳಿ ಮಾಡಿಸಿದ ಆಟಗಾರ.
ಪ್ರಸ್ತುತ ಹಾರ್ದಿಕ್ ಪಾಂಡ್ಯಾ ತನ್ನ ಕೆರಿಯರ್ನ ಉತ್ತುಂಗದಲ್ಲಿದ್ದಾರೆ. ಮೈದಾನದಲ್ಲಿ ಅವರ ಆಟ ವೀಕ್ಷಿಸುವುದೇ ಸೊಗಸು. ನಾನು ವೇಗದ ಬೌಲಿಂಗ್ ಮಾಡುವ ಆಲ್ರೌಂಡರ್ಗಳ ಆಟ ವೀಕ್ಷಿಸಲು ಹೆಚ್ಚು ಇಷ್ಟಪಡುತ್ತೇನೆ. ಹಾರ್ದಿಕ್ ಪಾಂಡ್ಯಾ ಒಬ್ಬ ಅದ್ಭುತ ಆಟಗಾರ. ತನ್ನ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್ಗಳ ಮೇಲೆ ಒತ್ತಡ ಹೇರಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಶೇನ್ ವ್ಯಾಟ್ಸನ್ ಅಭಿಪ್ರಾಯ ಪಟ್ಟಿದ್ದಾರೆ.
ಟಿ-20 ಕ್ರಿಕೆಟ್ ಮಾದರಿಯಲ್ಲಿ ಬೆನ್ಸ್ಟೋಕ್ಸ್ಗಿಂತ ಹಾರ್ದಿಕ್ ಪಾಂಡ್ಯಾ ಮುಂದಿದ್ದಾರೆ. ಟಿ-20 ಕ್ರಿಕೆಟ್ನ ಒತ್ತಡದ ಸಮಯದಲ್ಲಿ ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ನನ್ನ ದೃಷ್ಟಿಯಲ್ಲಿ ಹಾರ್ದಿಕ್ ಪಾಂಡ್ಯಾ, ಬೆನ್ ಸ್ಟೋಕ್ಸ್ಗಿಂತ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.