ಮಹಾ ಕುಂಭಮೇಳದಲ್ಲಿ ವಿಶೇಷ ಗಮನಸೆಳೆದ ಸಾಧ್ವಿ: ಮಾಡೆಲ್​ ಆಗಿದ್ದ ಸುಂದರಿ ಸನ್ಯಾಸಿನಿ ಆಗಿದ್ದೇಕೆ? Harsha Richarya

Harsha Richarya
Published on

Harsha Richarya : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಸ್ತುತ ಮಹಾ ಕುಂಭಮೇಳ ನಡೆಯುತ್ತಿದೆ. ಇದು 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಉತ್ಸವವಾಗಿದೆ. ಜಗತ್ತಿನ ಅತಿದೊಡ್ಡ ಧಾರ್ಮಿಕ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಕೋಟ್ಯಂತರ ಜನರು ಪ್ರತಿನಿತ್ಯ ಬರುತ್ತಿದ್ದಾರೆ. ಪವಿತ್ರ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡಲು ಭಕ್ತರು ಮತ್ತು ಸಂತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಇದೆಲ್ಲವೂ ಒಂದೆಡೆಯಾದರೆ, ಇತ್ತೀಚೆಗೆ, ಒಬ್ಬ ಮಹಿಳಾ ಸಾಧ್ವಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಆಕೆ ಕುತ್ತಿಗೆಯಲ್ಲಿ ರುದ್ರಾಕ್ಷಿ ಹಾರ, ಹೂವಿನ ಹಾರ ಮತ್ತು ಹಣೆಯ ಮೇಲೆ ತಿಲಕವನ್ನು ಧರಿಸಿದ್ದಾರೆ. ಅಲ್ಲದೆ, ಆಕೆಯನ್ನು ನೋಡಿದವರು ಅವಳ ಸೌಂದರ್ಯಕ್ಕೆ ಮಾರುಹೋಗಿದ್ದಾರೆ. ಇದರ ನಡುವೆ ಅನೇಕ ಮಂದಿ ಆಕೆಯ ಸಂದರ್ಶನಗಳಿಗಾಗಿ ಸಾಲುಗಟ್ಟಿ ನಿಂತಿದ್ದಾರೆ.

ಆಕೆಯ ಹೆಸರು ಹರ್ಷ ರಿಚಾರ್ಯ. 1994 ಮಾರ್ಚ್ 26ರಂದು ಮಧ್ಯಪ್ರದೇಶದಲ್ಲಿ ಜನಿಸಿದರು. ಮಾಡೆಲ್, ಆ್ಯಂಕರ್ ಮತ್ತು ಮದುವೆ ಹಾಗೂ ವಿಶೇಷ ಸಮಾರಂಭಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಅನೇಕ ಆಧ್ಯಾತ್ಮಿಕ ಆಲ್ಬಮ್‌ಗಳಲ್ಲಿಯೂ ನಟಿಸಿದ್ದಾರೆ. ಆದರೆ, ಎರಡು ವರ್ಷಗಳ ಹಿಂದೆ, ಅದನ್ನೆಲ್ಲ ಬಿಟ್ಟು ಆಧ್ಯಾತ್ಮಿಕ ಹಾದಿಯಲ್ಲಿ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ.

ಸದ್ಯ ಹರ್ಷ ರಿಚಾರ್ಯಗೆ 30 ವರ್ಷ ವಯಸ್ಸು. ಎರಡು ವರ್ಷಗಳಿಂದ ಸಾಧ್ವಿಯಾಗಿ ಬದುಕುತ್ತಿದ್ದೇನೆ ಎಂದು ಹೇಳಿದ್ದಾರೆ. ನಿರಂಜನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಶ್ರೀ ಕೈಲಾಸಾನಂದಗಿರಿ ಮಹಾರಾಜ್ ಅವರ ಶಿಷ್ಯೆ ಎಂದು ತಿಳಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತಮ್ಮ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.

ಹರ್ಷ ರಿಚಾರ್ಯ ಅವರ ಇನ್‌ಸ್ಟಾಗ್ರಾಮ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ತಮ್ಮ ಪ್ರೊಫೈಲ್‌ನಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಕೋಲ್ಕತ್ತದ ಆಸ್ಪತ್ರೆಯಲ್ಲಿ ನಡೆದ ಘಟನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಫೋಟೋಗಳನ್ನು ಸಹ ರಿಚಾರ್ಯ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net