Rohit Sharma : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಈ ಬಾರಿ ಪಾಕಿಸ್ತಾನ ವಹಿಸಿದೆ. ಈ ಮೆಗಾ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ರೋಹಿತ್ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
1996ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಏಕದಿನ ಮಾದರಿಯ ಚಾಂಪಿಯನ್ಸ್ ಟ್ರೋಫಿಯನ್ನು ಕೊನೆಯದಾಗಿ 2017ರಲ್ಲಿ ನಡೆಸಲಾಗಿತ್ತು, ಆಗ ಪಾಕಿಸ್ತಾನ ಜಯಗಳಿಸಿತು. ಹಾಲಿ ಚಾಂಪಿಯನ್ ಆಗಿ ಪಾಕಿಸ್ತಾನ ಐಸಿಸಿ ಟೂರ್ನಮೆಂಟ್‌ಗೆ ನೇರವಾಗಿ ಅರ್ಹತೆ ಪಡೆದಿದ್ದು, ಆತಿಥ್ಯದ ಹಕ್ಕುಗಳನ್ನು ಸಹ ಗೆದ್ದುಕೊಂಡಿತು.
ಆತಿಥೇಯ ಪಾಕಿಸ್ತಾನದ ಜೊತೆಗೆ ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ರನ್ನರ್ ಅಪ್ ತಂಡ ಭಾರತ, ಹಾಗೆಯೇ ಅಗ್ರ 7ರಲ್ಲಿ ಸ್ಥಾನ ಪಡೆದ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳು ಕೂಡ ಈ ಪಂದ್ಯಾವಳಿಗೆ ಅರ್ಹತೆ ಪಡೆದಿವೆ.
ಇನ್ನು ಭದ್ರತಾ ಕಾರಣಗಳಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿತು. ಪಾಕಿಸ್ತಾನ ಬಿಟ್ಟು ಬೇರೆ ಸ್ಥಳದಲ್ಲಿ ಅಂದರೆ ದುಬೈನಲ್ಲಿ ಪಂದ್ಯಗಳನ್ನು ಆಡಲು ಅವಕಾಶ ನೀಡುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿತು. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆರಂಭದಲ್ಲಿ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿತು. ಈ ವೇಳೆ ಐಸಿಸಿ ಮಧ್ಯಪ್ರವೇಶಿಸಿದ ನಂತರ ಪಾಕ್ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿತು. ಭಾರತದಲ್ಲಿ ಯಾವುದಾದರೂ ಐಸಿಸಿ ಟೂರ್ನಮೆಂಟ್ ನಡೆದರೆ, ನಮಗೂ ಕೂಡ ಬೇರೆ ಸ್ಥಳದಲ್ಲಿ ಆಡಲು ಅವಕಾಶ ನೀಡಬೇಕೆಂಬ ಷರತ್ತಿನ ಮೇಲೆ ಹೈಬ್ರಿಡ್ ವಿಧಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸಿಕೊಡಲು ಪಾಕಿಸ್ತಾನ ಒಪ್ಪಿಕೊಂಡಿತು. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ಅಂದಹಾಗೆ ಚಾಂಪಿಯನ್ಸ್ ಟ್ರೋಫಿ-2025 ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 16 ಅಥವಾ 17 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಪ್ರದಾಯದ ಪ್ರಕಾರ, ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ತಂಡಗಳ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕಾಗುತ್ತದೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಕೂಡ ಭಾಗವಹಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲು ಪಿಸಿಬಿ ನಿರ್ಧರಿಸಿದೆ. ಭಾರತೀಯ ತಂಡದ ನಾಯಕ ಕೂಡ ಇದರಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಬರಲಿದ್ದಾರೆ. 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಕಾರ್ಯಕ್ರಮ ನಡೆಯಲಿದ್ದು, ಅದನ್ನು ಯಶಸ್ವಿಗೊಳಿಸಲು ಪಿಸಿಬಿ ದೃಢನಿಶ್ಚಯವನ್ನು ಹೊಂದಿದೆ ಎಂದು ಪಾಕಿಸ್ತಾನ ಮಂಡಳಿಯ ಮೂಲಗಳು ಸುದ್ದಿ ಸಂಸ್ಥೆ ಐಎಎನ್ಎಸ್ಗೆ ತಿಳಿಸಿವೆ. ಆದರೆ, ಬಿಸಿಸಿಐ ರೋಹಿತ್ ಶರ್ಮ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತದೆಯೇ? ಅಥವಾ ಇಲ್ಲವೇ? ಎಂಬುದು ಸದ್ಯ ಚರ್ಚೆಯ ವಿಷಯವಾಗಿದೆ.
ಚಾಂಪಿಯನ್ಸ್ ಟ್ರೋಫಿಯು ಕರಾಚಿಯಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಮತ್ತೊಂದೆಡೆ, ಟೀಮ್ ಇಂಡಿಯಾ ಫೆಬ್ರವರಿ 20ರಂದು ದುಬೈನಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಆದರೆ, ಈ ಪಂದ್ಯಕ್ಕಿಂತ ಫೆಬ್ರವರಿ 23ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ಟಿ20 ವಿಶ್ವಕಪ್-2024 ರ ಭಾಗವಾಗಿ ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. (ಏಜೆನ್ಸೀಸ್)
ಯುವಕನ ಇನ್ಸ್ಟಾಗ್ರಾಂ ಖಾತೆ ನೋಡಿ ದಂಗಾದ ಪೊಲೀಸರು! ಪರಿಚಿತ ಮಹಿಳೆಯರಿಗೆ ಶುರುವಾಯ್ತು ನಡುಕ | Cyber Crime
ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ರೀಲ್ಸ್ ನೋಡ್ಬೇಡಿ… ಗಂಭೀರ ಕಾಯಿಲೆ ಬರುತ್ತೆ ಎಚ್ಚರ! Reels