ಯುವಕನ ಇನ್​ಸ್ಟಾಗ್ರಾಂ ಖಾತೆ ನೋಡಿ ದಂಗಾದ ಪೊಲೀಸರು​! ಪರಿಚಿತ ಮಹಿಳೆಯರಿಗೆ ಶುರುವಾಯ್ತು ನಡುಕ | Cyber Crime

Cyber Crime
Published on

Cyber Crime : ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರು ಮತ್ತು ಯುವತಿಯರಿಗೆ ಗೊತ್ತಾಗದಂತೆ ರಹಸ್ಯವಾಗಿ ಅವರ ಫೋಟೋಗಳನ್ನು ತೆಗೆದು, ಅವುಗಳನ್ನು ಮಾರ್ಫ್ ಮಾಡಿ, ಇನ್​ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಖತರ್ನಾಕ್​​ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಆಘಾತಕಾರಿ ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ಇದೀಗ ಚರ್ಚೆಯ ವಿಷಯವಾಗಿದೆ. ಬಂಧಿತ ಆರೋಪಿಯನ್ನು ಶ್ರವಣ್​ ಭಂಡಾರಿ ಎಂದು ಗುರುತಿಸಲಾಗಿದೆ. ಈತ ಜಿಲ್ಲೆಯ ಬುಗ್ಗರಾಮ್ ಮಂಡಲದ ಗೋಪುಲಾಪುರ ಗ್ರಾಮದ ನಿವಾಸಿ. ಈತ ಹಲವು ದಿನಗಳ ಕಾಲ ದುಬೈನಲ್ಲಿದ್ದ.

ದುಬೈನಲ್ಲಿರುವಾಗ ತಂತ್ರಜ್ಞಾನದ ಜ್ಞಾನವನ್ನು ಬೆಳೆಸಿಕೊಂಡ ಶ್ರವಣ್​, ಇತ್ತೀಚೆಗಷ್ಟೇ ತನ್ನ ಊರಿಗೆ ಮರಳಿದ್ದ. ಜಗಿತ್ಯಾಲದಲ್ಲಿ ಸೆಲ್ ಪಾಯಿಂಟ್ ನಡೆಸುತ್ತಿರುವ ಈತ, ಟೈಸ್ ಎನ್ ಲೆಗ್ಗಿಂಗ್ಸ್ ಹೆಸರಿನಲ್ಲಿ ಇನ್​ಸ್ಟಾಗ್ರಾಂ ಖಾತೆಯನ್ನು ತೆರೆದು ಮಹಿಳೆಯರು ಮತ್ತು ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಪೋಸ್ಟ್​ ಮಾಡುತ್ತಿದ್ದ. ತನಗೆ ಗೊತ್ತಿರುವ ಕೆಲವು ಮಹಿಳೆಯರಿಗೆ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಇತ್ತೀಚೆಗೆ ಸಂತ್ರಸ್ತೆಯ ಸ್ನೇಹಿತರಿಗೆ ಇನ್​ಸ್ಟಾಗ್ರಾಂನಲ್ಲಿ ಆಕೆಯ ಆಕ್ಷೇಪಾರ್ಹ ಫೋಟೋ ಕಾಣಿಸಿಕೊಂಡಿದೆ. ಈ ಬಗ್ಗೆ ಸಂತ್ರಸ್ತೆಯನ್ನು ವಿಚಾರಿಸಿದಾಗ ಆಕೆ ಇನ್‌ಸ್ಟಾಗ್ರಾಂ ನೋಡಿ ಒಂದು ಕ್ಷಣ ಗಾಬರಿಯಾದಳು. ಬಳಿಕ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶ್ರವಣ್‌ನ ಇನ್‌ಸ್ಟಾಗ್ರಾಂ ಖಾತೆಯನ್ನು ಆಧರಿಸಿ ಅವನನ್ನು ಪತ್ತೆಹಚ್ಚಿ, ವಶಕ್ಕೆ ಪಡೆದು ತನಿಖೆ ಆರಂಭಿಸಿದರು.

ಪೊಲೀಸರು ಶ್ರವಣ್ ಅವರ ಇನ್​ಸ್ಟಾಗ್ರಾಂ ಖಾತೆ ಪರಿಶೀಲಿಸಿದಾಗ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದವು. ಆರೋಪಿ ಶ್ರವಣ್​, ಅನೇಕ ಮಹಿಳೆಯರು ಮತ್ತು ಯುವತಿಯರ ಫೋಟೋಗಳನ್ನು ಮಾರ್ಫಿಂಗ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಕೃತ್ಯಕ್ಕೆ ಶ್ರವಣ್ ಬಳಸಿದ್ದ ಹಾರ್ಡ್ ಡಿಸ್ಕ್‌ಗಳು, ಪೆನ್​ಡ್ರೈವ್‌ಗಳು ಮತ್ತು ಡಿವಿಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ, ಬುಗ್ಗರಾಮ್ ಮಂಡಲದ ಹಲವಾರು ಹಳ್ಳಿಗಳಲ್ಲಿ ಶ್ರವಣ್​ ಪರಿಚಯವಿರುವ ಮಹಿಳೆಯರು ಮತ್ತು ಯುವತಿಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಶ್ರವಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜಗಿತ್ಯಾಲ ಪಟ್ಟಣ ಸಿಐ ವೇಣುಗೋಪಾಲ್ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net