Reels : ಈ ಮೊದಲು ಜನರ ನೆಚ್ಚಿನ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಆಗಿತ್ತು, ಈಗ ಇನ್ಸ್ಟಾಗ್ರಾಂ ಆ ಸ್ಥಾನವನ್ನು ಕಸಿದುಕೊಂಡಿದೆ. ಅನೇಕ ಜನರು ಐದು ನಿಮಿಷ ಬಿಡುವು ಸಿಕ್ಕರೆ ಸಾಕು ತಕ್ಷಣ ರೀಲ್‌ಗಳನ್ನು ನೋಡುತ್ತಾರೆ. ಮೂವತ್ತು ಸೆಕೆಂಡುಗಳ ಅಂತರದಲ್ಲಿ ಜನರ ಭಾವನೆಗಳೇ ರೀಲ್ಸ್ನಿಂದ ಬದಲಾಗಿಬಿಡುತ್ತದೆ. ನಿಮ್ಮನ್ನು ನಗಿಸುವ, ಅಳುವಂತೆ ಮಾಡುವ ಮತ್ತು ಕೋಪ ತರಿಸುವ ಅನೇಕ ರೀಲ್‌ಗಳು ಇಂದು ಟ್ರೆಂಡ್ ಆಗುತ್ತಿವೆ. ರೀಲ್ಸ್ ನೋಡುವ ಅಭ್ಯಾಸವು ಹಾನಿಕಾರಕವಲ್ಲ ಎಂದು ಅನಿಸಿದರು ಕೂಡ ಅದರಲ್ಲಿ ದೊಡ್ಡ ಅಪಾಯ ಅಡಗಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
ರೀಲ್ಸ್ ಮೇಲಿನ ನಿಮ್ಮ ಚಟವು ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಚೀನಾದ ಹೆಬೈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಅತಿಯಾದ ರೀಲ್ಸ್ ವೀಕ್ಷಣೆ, ವಿಶೇಷವಾಗಿ ತಡರಾತ್ರಿಯಲ್ಲಿ ರೀಲ್ಸ್ ನೋಡುವುದರಿಂದ ಯುವಜನರು ಮತ್ತು ಮಧ್ಯವಯಸ್ಕರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಸದ್ದಿಲ್ಲದೆ ಹೆಚ್ಚಾಗುತ್ತದೆ ಎಂದು ಅಧ್ಯಯನವು ಹೇಳಿದೆ. ಈ ಅಧ್ಯಯನದ ವರದಿ ಬಯೋಮೇಡ್ ಸೆಂಟ್ರಲ್ (BMC) ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಈ ಅಧ್ಯಯನವನ್ನು 2023ರ ಜನವರಿ ಮತ್ತು ಸೆಪ್ಟೆಂಬರ್ ನಡುವೆ ನಡೆಸಲಾಯಿತು. ಚೀನಾದಲ್ಲಿ ರೀಲ್ಸ್ ವ್ಯಸನಿಯಾಗಿದ್ದ 4,318 ಯುವ ಮತ್ತು ಮಧ್ಯವಯಸ್ಕ ವ್ಯಕ್ತಿಗಳ ಮೇಲೆ ನಡೆಸಲಾಯಿತು. ದೂರದರ್ಶನ ನೋಡುವುದು, ವಿಡಿಯೋ ಗೇಮ್‌ಗಳನ್ನು ಆಡುವುದು, ಮೊಬೈಲ್ ಬಳಕೆ ಮತ್ತು ಕಂಪ್ಯೂಟರ್‌ಗಳನ್ನು ಬಳಸುವ ಸಮಯದ ಬಗ್ಗೆ ಪ್ರಶ್ನಿಸಲಾಯಿತು. ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಸ್ಕ್ರೋಲಿಂಗ್ ರೀಲ್‌ಗಳು ಮಾನಸಿಕ ಪ್ರಚೋದನೆ ಮತ್ತು ಒತ್ತಡವನ್ನು ಉಂಟುಮಾಡುತ್ತದೆ ಎಂದು ಅಧ್ಯಯನವು ಕಂಡುಕೊಂಡಿದೆ.
ಒಂದು ರೀಲ್ ನಿಮಗೆ ಸಂತೋಷವನ್ನು ಉಂಟುಮಾಡಿದರೆ, ಇನ್ನೊಂದು ರೀಲ್ ದುಃಖಕರವಾಗಿರಬಹುದು. ನಿಮ್ಮಲ್ಲಿನ ಈ ತ್ವರಿತ ಬದಲಾವಣೆಯು ಮೆದುಳಿಗೆ ತುಂಬಾ ಹಾನಿಯುಂಟುಮಾಡುತ್ತದೆ. ಇನ್ನೊಂದು ಭಯಾನಕ ಸಂಗತಿ ಇದೆ. ಅದೇನೆಂದರೆ, ಮಲಗುವ ಮುನ್ನ ಒಂದು ಅಥವಾ ಎರಡು ಗಂಟೆಗಳ ಕಾಲ ಸ್ಕ್ರೀನ್ ನೋಡುವುದು ಸಹ ಅಧಿಕ ರಕ್ತದೊತ್ತಡದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಈ ಹಿಂದಿನ ಅಧ್ಯಯನಗಳು ಕಂಡುಕೊಂಡಿವೆ.
ಈ ಅಧ್ಯಯನದ ಮಾಹಿತಿಯನ್ನು ಬೆಂಗಳೂರಿನ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಅವರು ಎಕ್ಸ್ನಲ್ಲಿ ಹಂಚಿಕೊಂಡ ನಂತರ ಮತ್ತಷ್ಟು ಚರ್ಚೆ ನಡೆದಿದೆ. ರೀಲ್ಸ್ ನೋಡುವ ವ್ಯಸನವು ಯುವ ಮತ್ತು ಮಧ್ಯವಯಸ್ಕ ಜನರಲ್ಲಿ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದೆ. ಇದು ಅನ್ ಇನ್ಸ್ಟಾಲ್ ಮಾಡುವ ಸಮಯ ಎಂಬ ಶೀರ್ಷಿಕೆಯೊಂದಿಗೆ ಕೃಷ್ಣಮೂರ್ತಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಅಧ್ಯಯನದ ವರದಿಯು ಜನರು ತಮ್ಮ ಸ್ಕ್ರೋಲಿಂಗ್ ಅಭ್ಯಾಸವನ್ನು ಮರುಪರಿಶೀಲಿಸಲು ಪ್ರೇರೇಪಿಸಿದೆ.
Apart from being a major distraction and waste of time, reel addiction is also associated with high #BloodPressure in young and middle-aged people. Time to #UnInsta!! #DoomScrolling #MedTwitter pic.twitter.com/Kuahr4CZlB
— Dr Deepak Krishnamurthy (@DrDeepakKrishn1) January 11, 2025
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ 30 ರಿಂದ 79 ವರ್ಷ ವಯಸ್ಸಿನ 1.3 ಶತಕೋಟಿ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇದರ ಜೊತೆಗೆ ಅಕಾಲಿಕ ಮರಣಕ್ಕೂ ಪ್ರಮುಖ ಕಾರಣವಾಗಿದೆ. ತಡರಾತ್ರಿಯಲ್ಲಿ ಸಿನಿಮಾಗಳನ್ನು ನೋಡುವುದು ಕೂಡ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಪರದೆಗಳಿಂದ ಹೊರಸೂಸುವ ನೀಲಿ ಬೆಳಕು ಮೆಲಟೋನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮಗೆ ವಿಶ್ರಾಂತಿ ನಿದ್ರೆಯನ್ನು ಪಡೆಯುವುದನ್ನು ತಡೆಯುತ್ತದೆ. ಇದಲ್ಲದೆ, ಅನೇಕ ಸಿನಿಮಾಗಳು ನಮ್ಮ ಮನಸ್ಸನ್ನು ತೊಂದರೆಗೊಳಿಸಬಹುದು. ಚಲನಚಿತ್ರಗಳನ್ನು ನೋಡಿದ ನಂತರವೂ ನಾವು ಅವುಗಳ ಬಗ್ಗೆ ಯೋಚಿಸುತ್ತಲೇ ಇರುತ್ತೇವೆ. ಇದು ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಕಷ್ಟು ನಿದ್ರೆ ಪಡೆಯದಿರುವುದು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.
ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
ಮಲಗುವ ಕನಿಷ್ಠ ಎರಡು ಗಂಟೆಗಳ ಮೊದಲು ನಿಮ್ಮ ಫೋನ್ ಅನ್ನು ದೂರವಿಡಿ. ರಾತ್ರಿಯಲ್ಲಿ ನಿಮ್ಮ ಮೊಬೈಲ್ ಪರದೆಯ ಬೆಳಕನ್ನು ಸರಿಹೊಂದಿಸುವ ನೀಲಿ ಬೆಳಕಿನ ಫಿಲ್ಟರ್‌ಗಳು ಅಥವಾ ಅಪ್ಲಿಕೇಶನ್‌ಗಳನ್ನು ಬಳಸಲು ಪ್ರಯತ್ನಿಸಿ. ಮಲಗುವ ಮುನ್ನ ನಿಮ್ಮ ಫೋನ್ ಬಳಸುವ ಬದಲು ನೀವು ಓದಬಹುದು ಅಥವಾ ಧ್ಯಾನ ಮಾಡಬಹುದು. ಮಲಗುವ ಕೋಣೆಯನ್ನು ಶಾಂತ ರೀತಿಯಲ್ಲಿ ಹಾಗೂ ಸ್ವಚ್ಛವಾಗಿ ಇರಿಸಲು ಪ್ರಯತ್ನಿಸಿ. (ಏಜೆನ್ಸೀಸ್)
ಕೊಹ್ಲಿ ರೆಸ್ಟೋರೆಂಟ್ನಲ್ಲಿ ಬೇಯಿಸಿದ ಜೋಳಕ್ಕೆ ಇಷ್ಟೊಂದು ಬೆಲೆನಾ? ವಿದ್ಯಾರ್ಥಿನಿ ಟ್ವೀಟ್ ವೈರಲ್! Virat Kohli
ನೀವು ಆಗಾಗ ಪಾನಿಪುರಿ ತಿಂತಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್ನ್ಯೂಸ್! Panipuri