ಪವರ್​ಪ್ಲೇ ದಾಳ ಕೈತಳಮಳ; ಡಿಕೆಶಿ ವಿಶೇಷ ಅಧಿಕಾರದ ಪ್ರಭಾವಳಿ ಕಳಚಲು ಸಿಎಂ ಟೀಮ್ ತಂತ್ರ

siddu dk
Published on

ಬೆಂಗಳೂರು: ಕಾಂಗ್ರೆಸ್​ನ ಆಂತರಿಕ ಬಣಜಗಳಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಒಗ್ಗಟ್ಟಿನ ಮದ್ದರೆದು ಹೋದ ಮರುದಿನವೇ ಮತ್ತೊಂದು ಸುತ್ತಿನ ತೆರೆಮರೆ ಸಮರ ಶುರುವಾಗಿದೆ. ಹೈಕಮಾಂಡ್​ಗೇ ಸೆಡ್ಡು ಹೊಡೆಯುವ ಸಂದೇಶ ಸಾರಿರುವ ಮತ್ತು ಹಲವು ಮಹತ್ವಾಕಾಂಕ್ಷೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ‘ಏಕಾಂಗಿ’ಯಾಗಿಸುವ ತಂತ್ರಗಾರಿಕೆಯ ದಾಳವೊಂದು ಪ್ರಯೋಗವಾಗಿದೆ.

ದಲಿತರ ಸಮಾವೇಶವನ್ನು ಅನಿಶ್ಚತತೆಗೆ ತಳ್ಳಿದ್ದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಹನೆ ಹೊರಹಾಕಿದ ಬೆನ್ನಿಗೇ, ಕೆಪಿಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರ ಅಗತ್ಯವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಎಸೆದಿರುವ ‘ಸೈಲೆಂಟ್ ಬಾಂಬ್’ ಭಾರೀ ಸದ್ದು ಮಾಡಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಗದ್ದುಗೆ ಗುದ್ದಾಟ ರೋಚಕ ತಿರುವು ಪಡೆಯುವ ಸಾಧ್ಯತೆ ದಟ್ಟೆ ೖಸುವಂತೆ ಮಾಡಿದೆ.

ಈ ಎಲ್ಲ ಬೆಳವಣಿಗೆ ಗಮನಿಸಿದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಲ್ಲಿರುವ ಕೆಪಿಸಿಸಿ ಅಧ್ಯಕ್ಷಗಾದಿ ‘ಪ್ರಭಾವಳಿ’ ಕಳಚಲು ಸಿಎಂ ಸಿದ್ದರಾಮಯ್ಯ ಆಪ್ತರ ಬಣ ದಾಳ ಉರುಳಿಸಿರುವ ಅನುಮಾನ ಮೂಡಿಸಿದೆ. ಸೋಮವಾರ ತಡರಾತ್ರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಇತರ ಐವರು ಸುರ್ಜೆವಾಲ ಅವರನ್ನು ಭೇಟಿ ಮಾಡಿ ಅಹವಾಲು ಮಂಡಿಸಿದೆ. ಹೈಕಮಾಂಡ್​ಗೆ ನೇರ ಸಂದೇಶವನ್ನೂ ಕಳಿಸುವ ಪ್ರಯತ್ನ ಮಾಡಿದ್ದರು.

ಮಂಗಳವಾರ ಸಿಎಂ ಭೇಟಿ ಮಾಡಿದ್ದ ಸತೀಶ್ ಜಾರಕಿಹೊಳಿ, ಸುರ್ಜೆವಾಲ ಜತೆಗಿನ ಚರ್ಚೆಯ ಮಾಹಿತಿಯನ್ನು ಬುಧವಾರ ಮಾಧ್ಯಮ ಪ್ರತಿನಿಧಿಗಳ ಎದುರು ಹಂಚಿಕೊಂಡರು. ಅವರ ಮಾತಿನ ಧಾಟಿ, ಸಾಲುಗಳ ಗೂಢಾರ್ಥ ಱಪವರ್​ಪ್ಲೇ’ ಆರಂಭಿಸಿದಂತೆಯೇ ಕಾಣಿಸಿದೆ.

ಲಾಭ-ನಷ್ಟ: ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವಷ್ಟು ಕಾಲ ದೆಹಲಿ ಮಟ್ಟದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುತ್ತಾರೆ ಮತ್ತು ಸರ್ಕಾರದ ಮಟ್ಟದಲ್ಲಾಗುವ ಎಲ್ಲ ತೀರ್ವನಗಳಲ್ಲೂ ಪ್ರಧಾನಪಾತ್ರ ವಹಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವಾಗ ಅವರು ಪ್ರತಿ ಜಿಲ್ಲೆಯಲ್ಲೂ ಹಿಡಿತ ಸಾಧಿಸಲು ಅವಕಾಶ ಇರುತ್ತದೆ.

ಒಂದೊಮ್ಮೆ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ಇತರ ಸಂಪುಟ ಸದಸ್ಯರಂತೆ ಅವರೂ ಒಬ್ಬರಷ್ಟೇ ಎಂಬುದು ಸಾಮಾನ್ಯ ಲೆಕ್ಕಾಚಾರ. ಇದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಹೊಂದಿರುವ ಪಕ್ಷದ ಅಧ್ಯಕ್ಷ ಸ್ಥಾನವೆಂಬ ವಿಶೇಷ ಅಧಿಕಾರವನ್ನು ಕಸಿಯುವ ಪ್ರಯತ್ನಕ್ಕೆ ಕೈಹಾಕಲಾಗಿದೆ. ಇನ್ನೊಂದೆಡೆ, ‘ನೀವು ಅಧ್ಯಕ್ಷರಾಗುತ್ತೀರಾ ಎಂದು ಯಾರೂ ನನ್ನನ್ನು ಕೇಳಿಲ್ಲ. ಚರ್ಚೆ ಆರಂಭವಾಗಲಿ ನೋಡೋಣ. ಅನೇಕರು ನ್ಯಾಚುರಲ್ ಆಗಿ ಅಹಿಂದ ವರ್ಗದವರು ಅಧ್ಯಕ್ಷರಾಗಬೇಕು, ನೀವು ಆಗಬೇಕು ಎಂದು ಹೇಳುತ್ತಾರೆ ಅಷ್ಟೇ’ ಎಂಬ ಸತೀಶ್ ಜಾರಕಿಹೊಳಿ ಮಾತಿನ ಹಿಂದೆ ಸಾಕಷ್ಟು ಗೂಢಾರ್ಥವೂ ಕಾಣಿಸಿದೆ.

ಎಐಸಿಸಿಗೇ ಸವಾಲು: ಸರ್ಕಾರ ರಚನೆಯಾದ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಅದರಲ್ಲಿ ಮುಂದಿನ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಏಕೈಕ ಉಪ ಮುಖ್ಯಮಂತ್ರಿ ಆಗಿರುತ್ತಾರೆ. ಲೋಕಸಭೆ ಚುನಾವಣೆವರೆಗೂ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆಂದು ಉಲ್ಲೇಖವಿತ್ತು. ಆ ಟಿಪ್ಪಣಿಯನ್ನೇ ಮುಂದಿಟ್ಟುಕೊಂಡು ಸತೀಶ್ ಜಾರಕಿಹೊಳಿ ಡಿ.ಕೆ.ಶಿವಕುಮಾರ್ ಅವರನ್ನು ಯಾವಾಗ ಬದಲಿಸುತ್ತೀರಿ? ಎಂದು ಹೈಕಮಾಂಡ್​ಗೆ ಆಂತರಿಕ ಹಾಗೂ ಬಹಿರಂಗವಾಗಿ ಪ್ರಶ್ನೆ ಹಾಕಿದ್ದಾರೆ. ಲೋಕಸಭೆ ಚುನಾವಣೆ ಮುಗಿದು ಆರು ತಿಂಗಳ ಮೇಲಾಯಿತು. ಅಂದು ಪ್ರಧಾನ ಕಾರ್ಯದರ್ಶಿ ಪ್ರಕಟಿಸಿದ ನಿರ್ಧಾರ ಜಾರಿಗೆ ತರಬೇಕಲ್ಲವೇ? ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷರು ಬೇಕೆನ್ನುವುದು ಎಲ್ಲರ ಅಭಿಪ್ರಾಯ ಎಂಬ ಸತೀಶ್ ಜಾರಕಿಹೊಳಿಯವರ ದನಿ ಹಿಂದಿನ ಶಕ್ತಿ ಬಲವಾಗಿದೆ ಎಂಬ ಅನುಮಾನ ಮೂಡಿದೆ.

ಶಾಸಕರ ಅಭಿಪ್ರಾಯ: ಬುಧವಾರ ಸತೀಶ್ ಜಾರಕಿಹೊಳಿ ಉರುಳಿಸಿದ ದಾಳದಲ್ಲಿ ಕಂಡುಬಂದ ಮತ್ತೊಂದು ಪ್ರಧಾನ ಅಂಶವೆಂದರೆ, ಕೆಪಿಸಿಸಿ ಅಧ್ಯಕ್ಷರ ನೇಮಕದ ವೇಳೆ ಎಲ್ಲ 140 ಶಾಸಕರ ಅಭಿಪ್ರಾಯ ಕೇಳಬೇಕೆಂಬ ವಾದ. ಸಾಮಾನ್ಯವಾಗಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕ ಆಗುವಾಗ ಹೈಕಮಾಂಡ್ ನಿರ್ಧಾರ ಅಂತಿಮವಾಗುತ್ತದೆ, ಆಯಾ ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯವಷ್ಟೇ ಮುಖ್ಯವಾಗಿರುತ್ತದೆ. ಈಗ ಜಾರಕಿಹೊಳಿ ಹೈಕಮಾಂಡ್ ಮುಂದೆ ಸಲ್ಲಿಸಿರುವ ಒತ್ತಾಯ ಮುಂದಿನ ದಿನಗಳಲ್ಲಿ ಆಗಬಹುದಾದ ನಾಯಕತ್ವ ಬದಲಾವಣೆಯಂತಹ ಪ್ರಮುಖ ತೀರ್ವನಗಳಲ್ಲೂ ಶಾಸಕರ ಅಭಿಪ್ರಾಯಕ್ಕೆ ಮಣೆ ಹಾಕಬೇಕೆಂಬ ಷರತ್ತು ವಿಧಿಸಲು ಮುನ್ನುಡಿ ಬರೆದಂತಿದೆ. ಹಾಗೊಂದು ವೇಳೆ ಶಾಸಕರ ಅಭಿಪ್ರಾಯ ಮುಖ್ಯವಾದರೆ ತೀರ್ವನಗಳು ಯಾವ ಸ್ವರೂಪದಲ್ಲಿ ಬರಬಹುದೆಂಬುದನ್ನು ಬಿಡಿಸಿ ಹೇಳಬೇಕಿಲ್ಲ ಎಂಬುದು ಕೈ ನಾಯಕರ ವಾದ.

ಡಿಸಿಎಂ ಮೌನಮಂತ್ರ: ಸತೀಶ್ ಜಾರಕಿಹೊಳಿ ಮಾತಿನ ಮರ್ಮವನ್ನು ಗ್ರಹಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಈ ವಿಚಾರವಾಗಿ ಮೌನಕ್ಕೆ ಶರಣಾಗಿದ್ದಾರೆ. ಜಾರಕಿಹೊಳಿ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ದೆಹಲಿಯಲ್ಲೇ ಇದ್ದ ಅವರು ಮಾಹಿತಿ ತರಿಸಿಕೊಂಡರೆಂದು ಮೂಲಗಳು ತಿಳಿಸಿವೆ.

ಸುರ್ಜೆವಾಲ ಮಾತಿಗಿಲ್ಲವೇ ಮಹತ್ವ?: ನಾಲ್ಕು ಗೋಡೆ ಒಳಗೆ ಚರ್ಚೆ ನಡೆಯಲಿ ಎಂದು ಸಲಹೆ ನೀಡಿದ ಬಳಿಕವೂ ನಾಲ್ವರು ಸಚಿವರು ಬಹಿರಂಗ ಹೇಳಿಕೆ ನೀಡುತ್ತಾರೆ ಎಂದರೆ, ಇದರರ್ಥ ಸುರ್ಜೆವಾಲಗೆ ಹೆಚ್ಚು ಮಹತ್ವ ನೀಡಲ್ಲ ಎಂದು ಸಾರುವ ಪ್ರಯತ್ನ ಎಂದು ವಿಶ್ಲೇಷಿಸಲಾಗಿದೆ.

ಮುಂದೇನು?: ಜ.26ರ ಬಳಿಕ ಸತೀಶ್ ಜಾರಕಿಹೊಳಿ ಮತ್ತು ಇತರ ಸಚಿವರು ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ದೆಹಲಿಯಲ್ಲಿ ಮುಕ್ತಾಯವಾಗಿರುವ ಕರ್ನಾಟಕ ಭವನದ ಹೊಸ ಕಟ್ಟಡದ ಕಾಮಗಾರಿ ಪರಿಶೀಲಿಸಲಿದ್ದಾರೆ. ಜತೆಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದಾರೆ. ತಾವು ಸುರ್ಜೆವಾಲ ಮೂಲಕ ಕಳಿಸಿದ ಅಭಿಪ್ರಾಯ-ಆಗ್ರಹವನ್ನು ನೆನಪಿಸ ಬಯಸಿದ್ದಾರೆ.

ಖರ್ಗೆಗೆ ಡಿಕೆಶಿ ದೂರು: ಎಐಸಿಸಿ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮದ ನಿಮಿತ್ತ ದೆಹಲಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಬುಧವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ವಿಸõತ ಚರ್ಚೆ ಮಾಡಿದ್ದಾರೆ. ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಬಗ್ಗೆ ಇಲ್ಲಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಪಕ್ಷ ಹಾಗೂ ಸರ್ಕಾರದ ಆಗುಹೋಗುಗಳ ಮೇಲೆ ಪರಿಣಾಮ ಬೀರಲಿದೆ ಎಂದು ಖರ್ಗೆ ಎದುರು ಡಿಕೆಶಿ ಹೇಳಿಕೊಂಡಿದ್ದಾರೆಂದು ಗೊತ್ತಾಗಿದೆ. ‘ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ನಾನು ಎಲ್ಲೂ ಹೇಳಿಲ್ಲ, ಆದರೆ ಅನವಶ್ಯಕವಾಗಿ ಗೊಂದಲ ಸೃಷ್ಟಿಸುವ ಕೆಲಸ ನಡೆದಿದೆ. ಪಕ್ಷ ಸೋತು ಸೊರಗಿದಾಗ ದುಡಿದಿದ್ದೇನೆ, ಶ್ರಮಹಾಕಿದ್ದೇನೆ, ಹೋರಾಟ ಮಾಡಿದ್ದೇನೆ. ಈಗ ನನ್ನ ವಿರುದ್ಧ ಇಲ್ಲಸಲ್ಲದ ಅಭಿಪ್ರಾಯ ರೂಪಿಸುವ ಕೆಲಸ ನಡೆದಿದೆ’ ಎಂದು ಬೇಸರಿಸಿದ್ದಾರೆ. ಕರ್ನಾಟಕದ ಬೆಳವಣಿಗೆ ಬಗ್ಗೆ ದೆಹಲಿಯಲ್ಲಿ ಒಂದು ಮುಕ್ತ ಸಭೆ ನಡೆಯಲಿ, ಎಲ್ಲ ಸಂಗತಿಯೂ ಚರ್ಚೆಯಾಗಲಿ ಎಂದು ಡಿಕೆಶಿ ಬೇಡಿಕೆ ಇಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

ಜಾರಕಿಹೊಳಿ ಕಿಡಿನುಡಿ

  • ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷರು ಬೇಕೆಂಬುದು ಎಲ್ಲರ ಅಭಿಪ್ರಾಯ
  • ನಾವೆಲ್ಲ ಮಂತ್ರಿಗಳಾದ ಮೇಲೆ ಪಕ್ಷಕ್ಕೆ ಟೈಮ್ ಕೊಡಲು ಆಗುತ್ತಿಲ್ಲ
  • ಮತ ಸೆಳೆಯುವ ಹಾಗೂ ಪಾಪ್ಯುಲರ್ ಇರುವವರು ಅಧ್ಯಕ್ಷರಾಗಲಿ
  • ಈಗಿರುವವರು ಮುಂದುವರಿಯಬೇಕೇ, ಬೇಡವೇ ಎಂಬ ಗೊಂದಲ ಇದೆ
  •  ಪಕ್ಷದ ಸಂಘಟನೆ ಕೆಲಸ ವೀಕ್ ಆಗಿದೆ, ತಕ್ಷಣ ಅಧ್ಯಕ್ಷರ ನೇಮಕವಾಗಲಿ

ಸಿಎಂ ಕುರ್ಚಿಗಾಗಿ ಯಾವ ರೇಸೂ ನಡೀತಿಲ್ಲ, ಸಿಎಂ ಕುರ್ಚಿ ಮೇಲೆ ಸಿದ್ದರಾಮಯ್ಯ ಗಟ್ಟಿಯಾಗಿ ಕುಳಿತಿದ್ದಾರೆ. ರೇಸ್‌ಗಳೆಲ್ಲ ಮುಗಿದಿವೆ, 2028ರವರೆಗೆ ಸಿಎಂ ಕುರ್ಚಿ ಭದ್ರವಾಗಿದೆ.

| ಎಚ್‌.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

సీఎం ಬದಲಾವಣೆ ವಿಚಾರದ ಕುರಿತು ಯಾರೂ ಮಾತನಾಡ ಬಾರದೆಂದು ಹೈಕಮಾಂಡ್ ಪ್ರತಿನಿಧಿ ಹೇಳಿ ದ್ದಾರೆ. ಹೀಗಾಗಿ ಅದರ ಬಗ್ಗೆ ಕಡಿಮೆ ಮಾತನಾಡುತ್ತೇನೆ.

| ಜಿ.ಪರಮೇಶ್ವರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net