710 ಕೋಟಿ ರೂಪಾಯಿ ಲಾಟರಿ ಗೆದ್ರೆ ನೀವೇನು ಮಾಡ್ತಿದ್ರಿ?- ಆದ್ರೆ ಗೆದ್ದವನು ಮಾಡಿದ್ದೇನು ನೋಡಿ!

Darth2
Published on

ಕಿಂಗ್​ಸ್ಟನ್​: ಒಮ್ಮಿಂದೊಮ್ಮೆಗೆ 710 ಕೋಟಿ ರೂಪಾಯಿಗೂ ಅಧಿಕ ಮೊತ್ತ ಲಾಟರಿ ಬಹುಮಾನ ನಿಮ್ಮದಾದರೆ ನೀವೇನು ಮಾಡ್ತಿದ್ರಿ? - ಸಂತೋಷ, ಸಂಭ್ರಮಗಳಿಂದ ಕಿರುಚಿ, ಕೂಗಾಡಿ ಸುತ್ತಮುತ್ತ ಇದ್ದವರಿಗೆಲ್ಲ ಹೇಳಿ ಕುಣಿದು ಕುಪ್ಪಳಿಸ್ತಿದ್ರಿ ಅಲ್ವಾ? ಆದರೆ, ನಿಜವಾಗಿಯೂ 95 ದಶಲಕ್ಷ ಡಾಲರ್ (ಅಂದಾಜು 710 ಕೋಟಿ ರೂಪಾಯಿಗೂ ಹೆಚ್ಚು) ಗೆದ್ದ ವ್ಯಕ್ತಿ ನಡೆದುಕೊಂಡ ರೀತಿ ಜಗತ್ತಿನ ಗಮನಸೆಳೆದಿದೆ.

ಲೊಟ್ಟೊ ಲಾಟರಿ ಗೆದ್ದು 710 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಗೆದ್ದ ವ್ಯಕ್ತಿಯೊಬ್ಬ ಗುರುತು ಮರೆಮಾಚಿ ಬಹುಮಾನದ ಚೆಕ್​ ಸ್ವೀಕರಿಸಿ ಗಮನಸೆಳೆದಿದ್ದಾರೆ! ಜಮೈಕಾದ ಸುಪ್ರೀಂ ವೆಂಚರ್ಸ್ ಗ್ರೂಪ್​ ತನ್ನ ಫೇಸ್​ಬುಕ್ ಪೇಜ್​ನಲ್ಲಿ ಈ ಬಹುಮಾನ ವಿತರಣೆ ಕಾರ್ಯಕ್ರಮದ ಫೋಟೊಗಳನ್ನೂ ಅಪ್ಲೋಡ್ ಮಾಡಿದೆ.

ಆ ವ್ಯಕ್ತಿಯ ಹೆಸರು ಡಬ್ಲ್ಯು ಬ್ರೌನ್​. ಜಮೈಕಾದ ಪ್ರಜೆಯೇ. ಬ್ರೌನ್ ಈ ತಿಂಗಳ ಆರಂಭದಲ್ಲಿ ಮೇ ಪೆನ್​ನಲ್ಲಿರುವ ಡಿ ಎಂಡ್ಸ್​ ಸ್ಪೋರ್ಟ್​ ಬಾರ್​ನಿಂದ ಲೊಟ್ಟೊ ಟಿಕೆಟ್ ಖರೀದಿಸಿದ್ದರು. ಆ ಟಿಕೆಟ್​ಗಳ ನಂಬರ್ 08,09,10, 19,27 ಮತ್ತು 30 ಆಗಿತ್ತು. ಇದರಲ್ಲೊಂದು ಟಿಕೆಟ್​ಗೆ ಬಹುಮಾನ ಬಂದಿತ್ತು.

ಬಹುಮಾನದ ಹಣ ಸಾರ್ವಜನಿಕವಾಗಿ ತೆಗೆದುಕೊಳ್ಳುವಾಗ ಗುರುತು ಬಹಿರಂಗವಾದರೆ ತೊಂದರೆಯಾದೀತು ಎಂದು ಆತ ಡಾರ್ತ್​ ವಡೆರ್​ ಉಡುಪು ಧರಿಸಿ ವೇದಿಕೆಗೆ ಬಂದ. ಸಾಮಾನ್ಯನೊಬ್ಬ ದಿಢೀರ್ ಶ್ರೀಮಂತನಾದಾಗ ಉಂಟಾಗಬಹುದಾದ ತೊಂದರೆಗಳನ್ನು ಮೊದಲೇ ಊಹಿಸಿಕೊಂಡ ಕಾರಣ ಈ ರೀತಿ ನಡೆದುಕೊಂಡೆ ಎಂದು ಬ್ರೌನ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net