

ರಮಲ್ಲಾಹ್: ಕೋವಿಡ್ -19 ವೈರಸ್ ಮನುಷ್ಯ ಬದುಕಿಗೆ ಎಂಥೆಂಥಾ ಪಾಠವನ್ನೆಲ್ಲ ಕಲಿಸಿತು, ಕಲಿಸುತ್ತಿದೆ ಎಂಬುದನ್ನು ಅವಲೋಕಿಸಿದರೆ ಕಣ್ಣಾಲಿಗಳು ತೇವಗೊಳ್ಳುವುದಂತೂ ಖಚಿತ. ಅಂಥದ್ದೊಂದು ಸನ್ನಿವೇಶ ಟ್ವಿಟರ್ ಮೂಲಕ ಬಹಿರಂಗವಾಗಿದೆ.
ಪ್ಯಾಲೆಸ್ತೈನ್ ನ ವ್ಯಕ್ತಿಯೊಬ್ಬ ಹಾಸ್ಪಿಟಲ್ನ ಗೋಡೆ ಮೇಲೇರಿ ಕಿಟಕಿ ಬಳಿ ಕುಳಿತು ಕೋವಿಡ್-19ಗೆ ಬಲಿಯಾದ ತನ್ನ ತಾಯಿಯನ್ನು ನಿತ್ಯವೂ ನೋಡುತ್ತ ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯವದು. ಮೊಹಮ್ಮದ್ ಸಫಾ ಎಂಬುವವರು ಈ ಫೋಟೋ ಮತ್ತು ಕ್ಯಾರಿಕೇಚರ್ ಅನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
ಟ್ವೀಟ್ನಲ್ಲಿ ಅವರು ಹೇಳಿದ್ದಿಷ್ಟು - ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ ತನ್ನ ತಾಯಿಯನ್ನು ನೋಡುವುದಕ್ಕಾಗಿ ಪ್ಯಾಲೆಸ್ತೈನ್ನ ಈ ವ್ಯಕ್ತಿ ಪ್ರತಿ ನಿತ್ಯ ರಾತ್ರಿ ಈ ರೀತಿ ಆಸ್ಪತ್ರೆಯ ಗೋಡೆ ಏರುತ್ತ ಸಾಗಿ ಕಿಟಿಕಿಯಲ್ಲಿ ಕೆಲ ಹೊತ್ತು ಕುಳಿತುಬಿಡುತ್ತಿದ್ದ. ಈ ರೀತಿ ತಾಯಿ ಕೊನೆಯುಸಿರೆಳೆಯುವ ತನಕವೂ ಮಾಡಿದ್ದ.
ಮಾಧ್ಯಮ ವರದಿಗಳ ಪ್ರಕಾರ, ಆ ರೀತಿ ಕುಳಿತ ವ್ಯಕ್ತಿಯ ಹೆಸರು ಜಿಹಾದ್ ಅಲ್-ಸುವೈಟಿ. ಮೂವತ್ತು ವರ್ಷ ವಯಸ್ಸಿನ ಆತ ವೆಸ್ಟ್ಬ್ಯಾಂಕ್ನ ಬೈಟ್ ಅವಾ ಪಟ್ಟಣದ ನಿವಾಸಿ. ಹೆಬ್ರೋನ್ ಸ್ಟೇಟ್ ಹಾಸ್ಪಿಟಲ್ನ ಐಸಿಯು ಕಿಟಕಿ ಅದು. ಐಸಿಯುನಲ್ಲಿದ್ದ ಸುವೈಟಿ ತಾಯಿಯ ಹೆಸರು ರಸ್ಮಿ ಸುವೈಟಿ. ಅವರಿಗೆ 73 ವರ್ಷ ವಯಸ್ಸಾಗಿತ್ತು.ಗುರುವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಅಷ್ಟರಲ್ಲಾಗಲೇ ಅವರ ಮಗ ಕಿಟಕಿಯಲ್ಲಿ ಕುಳಿತು ನೋಡಿ ಹಿಂದಿರುಗಿದ್ದ!ಜಿಹಾದ್ ಅಲ್ ಸುವೈಟಿಗೂ ಕರೊನಾ ಸೋಂಕು ತಗುಲಿದೆ. ಇನ್ನು ಈ ಟ್ವೀಟ್ ಮಾಡಿದ ಮೊಹಮ್ಮದ ಸಫಾ ಮಾನವ ಹಕ್ಕು ಕಾರ್ಯಕರ್ತರಾಗಿದ್ದು, ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿಯೂ ಆಗಿದ್ದಾರೆ. (ಏಜೆನ್ಸೀಸ್)