

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶ ಪಡೆಯದೆ ಇರುವುದು ಪಕ್ಷದಲ್ಲಿ ಆತಂಕದ ವಾತಾವರಣ ಸೃಷ್ಠಿಸಿದೆ. ಮೇಲ್ಮನೆಗೆ ನಡೆದ ಚುನಾವಣೆಯಲ್ಲಿಯೂ ಪಕ್ಷದ ಸಾಧನೆ ತೃಪ್ತಿದಾಯಕವಾಗಿರಲಿಲ್ಲ. ಇದೀಗ ಸ್ಥಳೀಯ ಸಂಸ್ಥೆಗಳಲ್ಲಿಯೂ ಹೆಚ್ಚಿನ ಸ್ಥಾನ ಗೆದ್ದಿಲ್ಲ. ಒಂದರ ಹಿಂದೆ ಒಂದು ಆಘಾತಗಳು ಪಕ್ಷಕ್ಕೆ ಪದೇಪದೆ ಎಚ್ಚರಿಕೆ ಗಂಟೆಯೇ ಆಗಿವೆ. ಯಾವುದೇ ಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ ಹೆಚ್ಚಿನ ಲಾಭವಾಗುತ್ತದೆ. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಗೆ ಯಾವುದೇ ಲಾಭವೇನು ಆಗಿಲ್ಲ. ಮತಾಂತರ ನಿಷೇಧ ಕಾಯ್ದೆಯಂತಹ ಭಾವನಾತ್ಮಕ ವಿಚಾರವೂ ಮತದಾರರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ.
ಪ್ರತಿಪಕ್ಷ ಕಾಂಗ್ರೆಸ್ಗಿಂತ ಕಡಿಮೆ ಸ್ಥಾನ ಪಡೆದಿರುವುದರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದ ಬಂಕಾಪುರ, ಸಚಿವ ಶ್ರೀರಾಮುಲು ಅವರ ಕ್ಷೇತ್ರದ ನಾಯಕನಹಟ್ಟಿ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ಹೊಸಪೇಟೆ, ಮುಜರಾಯಿ ಸಚಿವರ ಕ್ಷೇತ್ರದ ಚಿಕ್ಕೋಡಿ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕ್ಷೇತ್ರದ ಅಥಣಿ ಹೀಗೆ ಅನೇಕ ಸಚಿವರು, ಶಾಸಕರ ಕ್ಷೇತ್ರ ಹಾಗೂ ಜಿಲ್ಲೆಗಳಲ್ಲಿ ಪಕ್ಷ ಸ್ಥಳೀಯವಾಗಿ ಅಧಿಕಾರ ಹಿಡಿಯಲು ವಿಫಲವಾಗಿದೆ. ಸರ್ಕಾರ ಇರುವುದರಿಂದ ಸಹಜವಾಗಿಯೇ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆಂಬ ಅತಿಯಾದ ನಂಬಿಕೆ ಬಿಜೆಪಿಗೆ ಕೈಕೊಟ್ಟಿದೆ. 2023ರ ವಿಧಾನಸಭಾ ಚುನಾವಣೆ ಹಾಗೂ ಅದಕ್ಕೂ ಮೊದಲು ಎದುರಾಗುವ ಜಿಪಂ ಹಾಗೂ ತಾಪಂ ಚುನಾವಣೆಗಳನ್ನು ಇದೇ ನಿರ್ಲಕ್ಷ್ಯದಿಂದ ಎದುರಿಸಲಾಗದು, ಮತದಾರರನ್ನು ಸೆಳೆಯಲು ಅಭಿವೃದ್ಧಿಗೆ ಒತ್ತು ನೀಡುವುದು ಅಗತ್ಯವೆಂಬುದನ್ನು ಈ ಫಲಿತಾಂಶ ತೋರಿಸಿದೆ ಎಂದು ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ.
ಮದ್ವೆ ಆದ 25 ವರ್ಷದ ಮೇಲೆ ಕಾಂಗ್ರೆಸ್ಗೆ ಗಂಡು ಮಗು ಹುಟ್ಟಿದೆ. ಹೀಗಾಗಿ ಅವರು ಸಂಭ್ರಮಿಸುತ್ತಿದ್ದಾರೆ. ನಾಮಕರಣ ಮಾಡಿ ಒಳ್ಳೆಯ ಹೆಸರಿಟ್ಟರೆ ನಾನೂ ನಾಮಕರಣದಲ್ಲಿ ಭಾಗಿಯಾಗುತ್ತೇನೆ. 2022ರ ಮಾರ್ಚ್ ಒಳಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಿರೀಕ್ಷೆ ಇದೆ. | ಕೆ.ಎಸ್.ಈಶ್ವರಪ್ಪ ಸಚಿವ
ಬೆಂಗಳೂರು: ಪ್ರಾದೇಶಿಕ ಪಕ್ಷವಾಗಿ ಮತ್ತೆ ಪುಟಿದೇಳಬೇಕೆಂಬ ಜೆಡಿಎಸ್ ಕನಸಿಗೆ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೊಡಲಿ ಪೆಟ್ಟು ಕೊಟ್ಟಿದೆ. 2023 ವಿಧಾನಸಭೆಯಲ್ಲಿ 123 ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯುವ ಜೆಡಿಎಸ್ ನಾಯಕರ ಕನಸಿಗೆ ಕಲ್ಲು ಹಾಕಿದೆ. ಪಕ್ಷದ ವಿವಿಧ ಹಂತದ ಪದಾಧಿಕಾರಿಗಳ ಬದಲಾವಣೆ, ಶಾಸಕರು, ಮುಖಂಡರಿಗೆ ಜವಾಬ್ದಾರಿ ಹಂಚಿಕೆ, ಕ್ಷೇತ್ರ, ವಿಭಾಗವಾರು ಸಭೆ, ಪಕ್ಷದ ಎಲ್ಲ ಹಂತದ ಕಾರ್ಯಕರ್ತರ ಸಭೆ, ಸಮಾವೇಶ ಆಯೋಜಿಸಿ ಪಕ್ಷದ ಮುಖಚರ್ಯುಯನ್ನು ಬದಲು ಮಾಡಲು ಮುಂದಾಗಿರುವ ಪಕ್ಷ ಹೀನಾಯ ಸೋಲು ಕಂಡಿರುವುದು ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.
ಕಕ, ಕಿಕದಲ್ಲೇ ದೊಡ್ಡ ಏಟು: ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲೇ ಜೆಡಿಎಸ್ಗೆ ದೊಡ್ಡ ಏಟು ಬೀಳುತ್ತಿದೆ. ಇತ್ತೀಚಿನ ಯಾವುದೇ ಚುನಾವಣೆಯಲ್ಲಿ ಮಹತ್ವದ ಮೈಲುಗಲ್ಲನ್ನು ಇಲ್ಲಿ ಸಾಧಿಸಿದ್ದಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಲು ಜೆಡಿಎಸ್ ಬೆನ್ನೆಲುಬನ್ನೇ ಮುರಿದಿತ್ತು. ಆ ತರುವಾಯದ ಯಾವುದೇ ಚುನಾವಣೆಯಲ್ಲೂ ಜೆಡಿಎಸ್ ಮೈಕೊಡವಿ ಎದ್ದು ನಿಂತು ತನ್ನ ಸಾಮರ್ಥ್ಯ ತೋರಿಸಿದ್ದಿಲ್ಲ. ಕೆಲ ಕಡೆ ಅತಂತ್ರ ಸ್ಥಿತಿ ನಿರ್ವಣವಾಗಿದ್ದು, ಅಲ್ಲೆಲ್ಲ ಜೆಡಿಎಸ್ ಯಾವ ‘ಪಾತ್ರ’ ಹಾಕುತ್ತದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ‘ಕೆಲವು ಕಡೆ ನಮ್ಮ ಬೆಂಬಲವಿಲ್ಲದೆ ಯಾವ ಪಕ್ಷವೂ ಅಧಿಕಾರ ಮಾಡಲು ಸಾಧ್ಯವಿಲ್ಲ’ ಎಂದು ಈ ಚುನಾವಣೆ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಬೆಂಗಳೂರು: ಸರ್ಕಾರ ಇದ್ದಾಗ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡು, 2019ರ ಲೋಕಸಭೆ ಚುನಾವಣೆಯಲ್ಲಿ ಮಕಾಡೆ ಮಲಗಿದ್ದ ಕಾಂಗ್ರೆಸ್ಗೆ ಈಗ ದಿನದಿಂದ ದಿನಕ್ಕೆ ಚೇತೋಹಾರಿಯಾಗಿ ಕಾಣಿಸಲು ಆರಂಭವಾಗಿದೆ. ಪ್ರತಿ ಚುನಾವಣೆಯಲ್ಲೂ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿರುವುದು ಆ ಪಕ್ಷದ ನಾಯಕರಿಗೂ ಅಚ್ಚರಿಯಾಗಿ ಕಾಣಿಸುತ್ತಿದೆಯಲ್ಲದೆ, ತಾವು ಸಾಗುತ್ತಿರುವ ದಾರಿಯಾಗಿದೆ ಎಂಬುದನ್ನು ಈ ಫಲಿತಾಂಶದ ಮುಖೇನ ಖಾತ್ರಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ತಕ್ಕಡಿ ಮೇಲೇಳುತ್ತಿಲ್ಲ ಎಂಬ ಲೋಕಸಭೆ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಅವರ ಅನೌಪಚಾರಿಕ ಹೇಳಿಕೆ ಪಕ್ಷದಲ್ಲಿ ಸಂಚಲನ ಸೃಷ್ಟಿಸಿತ್ತು. ಅನೇಕರು ಈ ವಾದ ನಿಜವೆಂದು ರ್ಚಚಿಸಿದ್ದರು. ಆದರೀಗ, ಪಕ್ಷ ಪಡೆಯುತ್ತಿರುವ ಫಲಿತಾಂಶಗಳು ಪ್ರಮುಖ ನಾಯಕರ ಸಮಪ್ರಮಾಣದ ಶ್ರಮಕ್ಕೆ ಫಲಿತಾಂಶ ಸಿಕ್ಕಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪಕ್ಷದ ತಕ್ಕಡಿ ಮೇಲೆಳುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಹೊಸ ಉತ್ಸಾಹವನ್ನು ಮೂಡಿಸಿದೆ. ಪಕ್ಷದ ಶಾಸಕರು ಇಲ್ಲದ ಕಡೆಗಳಲ್ಲೂ ಉತ್ತಮ ಸಾಧನೆಯಾಗಿದೆ. ಅಂದರೆ, ಬಿಜೆಪಿ ಶಾಸಕರಿರುವ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಗೆದ್ದಿರುವ ಉದಾಹರಣೆಗಳಿದ್ದು, ಇದು ಕೈ ನಾಯಕರಿಗೆ ಸಮಾಧಾನ ತಂದಿದೆ. ಅಂದಹಾಗೆ, ಸಿಎಂ ಬೊಮ್ಮಾಯಿ ಅವರಿಗೆ ತವರು ನೆಲದಲ್ಲಿ ಸತತ ಹಿನ್ನಡೆಯಾಗುತ್ತಿರುವುದು ಕಾಂಗ್ರೆಸ್ಗೆ ಖುಷಿ ತಂದಂತಿದೆ. ಸತತ ಸುಧಾರಣೆಯನ್ನು ವಿಶ್ಲೇಷಿಸುವುದಾದರೆ, ಮಸ್ಕಿ, ಹಾನಗಲ್ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಗಣನೀಯ ಗೆಲುವು, ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಿ 11 ಸ್ಥಾನ ಗಳಿಸಿದ್ದು, ಇದೀಗ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿರುವುದು ಆ ಪಕ್ಷದ ನಾಯಕರ ಹುರುಪು ಹೆಚ್ಚಿಸಿದೆ.
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳನ್ನು ಗೆಲ್ಲಲು ಐದು ಕಾರಣಗಳನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುರುತಿಸಿದ್ದಾರೆ. 1 ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಗೆಲ್ಲುತ್ತೇವೆಂದು ಬಿಜೆಪಿಯವರು ಜಂಭದಿಂದ ವರ್ತಿಸುತ್ತಾರೆ, ಆದರೆ ಬರೀ ಹಣವೊಂದೇ ಚುನಾವಣೆಯಲ್ಲಿ ಗೆಲ್ಲಲು ಸಾಕಾಗಲ್ಲ. ಜನರ ಪರವಾಗಿ ಕೆಲಸ ಮಾಡಬೇಕು, ಪ್ರಾಮಾಣಿಕ ಆಡಳಿತ ಕೊಡಬೇಕು. ಆಗ ಜನ ಮತ ನೀಡುತ್ತಾರೆ. 2 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ನಾನು ಯಾವಾಗಲೂ ಮುಂದಿನ ಚುನಾವಣೆಗಳ ದಿಕ್ಸೂಚಿ ಎಂದು ಹೇಳಲ್ಲ. ಆದರೆ ಇದರಿಂದ ಜನರ ಒಲವು ಯಾರ ಕಡೆಗಿದೆ ಎಂದು ತಿಳಿಯುತ್ತೆ. 3 ಪಕ್ಷ ಇಂದು ಪ್ರಬಲ ಸಂಘಟನೆಯಾಗಿ ಬೆಳೆಯುತ್ತಿದೆ. ಇದನ್ನು ನಾವು ಹೀಗೆಯೇ ಮುಂದುವರಿಸಿಕೊಂಡು ಹೋಗುತ್ತೇವೆ. ಜತೆಗೆ ಕಾಂಗ್ರೆಸ್ ಪಕ್ಷ ನಮಗೆ ಬೇಕು ಎಂದು ಜನರೇ ಬಯಸುತ್ತಿದ್ದಾರೆ. 4 ರಾಜ್ಯ ಸರ್ಕಾರದ ದುರಾಡಳಿತದಿಂದ ಜನ ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಜನರ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. 5 ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 11 ಸ್ಥಾನ ಗೆದ್ದಿದ್ದರೂ ಶೇಕಡಾವಾರು ಮತಗಳ ಪ್ರಮಾಣ ನಮಗೆ ಹೆಚ್ಚು ಬಂದಿದೆ. ನಮಗೆ ಶೇ.48 ಮತ ಬಂದಿದ್ದರೆ, ಬಿಜೆಪಿಗೆ ಶೇ.41 ಬಂದಿತ್ತು.
ಅಭಿವೃದ್ಧಿ ಕೆಲಸಗಳನ್ನು ಕೈಬಿಟ್ಟು, ಆಡಳಿತ ಯಂತ್ರ ನಿಷ್ಕ್ರಿಯಗೊಳಿಸಿರುವ ಅಕ್ರಮ ಮತ್ತು ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ಕಾಯುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. | ರಣದೀಪ್ ಸಿಂಗ್ ಸುರ್ಜೆವಾಲಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾನು ಅಧ್ಯಕ್ಷನಾದ ಮೇಲೆ ಮಾತ್ರ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತಿಲ್ಲ. ಪಕ್ಷ ಗೆಲ್ಲುವುದರ ಹಿಂದೆ ಜನರ ಅಭಿಪ್ರಾಯ ಅಡಗಿದೆ. ಬಿಜೆಪಿ ಆಡಳಿತ ಪಕ್ಷವಾಗಿದ್ದರೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತದಾರರು ನಿಂತಿದ್ದಾರೆ. ಇದು ಜನರ ಭಾವನೆ ಏನಿದೆ ಎಂಬುದಕ್ಕೆ ಸಾಕ್ಷಿ. | ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಗಳನ್ನು ಬೆಂಬಲಿಸಿದ ಮತದಾರರು, ಗೆದ್ದ ಅಭ್ಯರ್ಥಿಗಳು, ನಾಯಕರು, ಪದಾಧಿಕಾರಿಗಳು, ನಿಷ್ಠಾವಂತ ಕಾರ್ಯಕರ್ತರಿಗೆ ಅಭಿನಂದನೆಗಳು. | ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಗ್ರಾಮ ಪಂಚಾಯತ್ ಕಣದಲ್ಲಿ ಅತ್ತೆಗೆ ಗೆಲುವು: ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾಮ ಪಂಚಾಯಿತಿ 2ನೇ ವಾರ್ಡ್ ಉಪ ಚುನಾವಣೆ ಕಣದಲ್ಲಿದ್ದ ಅತ್ತೆ-ಸೊಸೆ ಪೈಪೋಟಿಯಲ್ಲಿ ಅತ್ತೆ ಮೇಲುಗೈ ಸಾಧಿಸಿದ್ದಾರೆ. ಪಾರ್ವತಮ್ಮ ಅವರು ಸೊಸೆ ಲಕ್ಷ್ಮಮ್ಮ ಅವರನ್ನು ಪರಾಭವಗೊಳಿಸಿ ಗೆಲುವು ಒಲಿಸಿಕೊಂಡರು. ಪಾರ್ವತಮ್ಮ 502 ಮತ ಪಡೆದರೆ, ಲಕ್ಷ್ಮಮ್ಮಗೆ 411 ಮತ ಸಿಕ್ಕಿವೆ.
ಚಾಲಕನ ಪತ್ನಿಗೆ ಒಲಿದ ಅದೃಷ್ಟ: ಚಿಕ್ಕಮಗಳೂರು ನಗರಸಭೆ ವಾಹನ ಚಾಲಕ ರವಿನಾಯ್ಕ ಅವರ ಪತ್ನಿ ಲಲಿತಾಬಾಯಿ 35ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲá-ವಿನ ನಗೆ ಬೀರಿದ್ದಾರೆ.
ಜಯ ಸಾಧಿಸಿದ ದಂಪತಿ: ಚಿಕ್ಕಮಗಳೂರು ನಗರಸಭೆಗೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ದಂಪತಿ ಗೆಲá-ವಿನ ನಗೆ ಬೀರಿದ್ದಾರೆ. 33ನೇ ವಾರ್ಡ್ನಿಂದ ಲಕ್ಷ್ಮಣ ಹಾಗೂ 34ನೇ ವಾರ್ಡ್ನಿಂದ ಅವರ ಪತ್ನಿ ಕೆ.ಆರ್.ಮಂಜುಳಾ ಸ್ಪರ್ಧೆ ಮಾಡಿದ್ದರು. ಬಾಗಲಕೋಟೆ ಜಿಲ್ಲೆ ಕಮತಗಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ದೇವಿಪ್ರಸಾದ ದಂಪತಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ವಿುಸಿದ್ದಾರೆ. ದೇವಿಪ್ರಸಾದ 7ನೇ ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರೆ, ಅವರ ಪತ್ನಿ ನೇತ್ರಾವತಿ 15ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಪಂ ಪ್ರವೇಶ ಮಾಡಿದ್ದಾರೆ. ಜಿಗಣಿ ಪುರಸಭೆಯ ವಾರ್ಡ್ 15 ಮತ್ತು 16ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಹೋಗಿದ್ದ ಪ್ರಹ್ಲಾದ್ ರೆಡ್ಡಿ ಹಾಗೂ ಪತ್ನಿ ಅರುಣಾ ಕುಮಾರಿ ಗೆಲುವು ಸಾಧಿಸಿದ್ದಾರೆ.
ಬಂಕಾಪುರ ಪುರಸಭೆಯ 8ನೇ ವಾರ್ಡ್ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮವ್ವ ಮಾಳಗಿಮನಿ ಅವರು ಕೇವಲ ಒಂದು ಮತದ ಅಂತರದಿಂದ ವಿಜಯ ಶಾಲಿಯಾದರು. ಪ್ರತಿಸ್ಪರ್ಧಿ ಕಾಂಗ್ರೆಸ್ನ ಫೈರೋಜಾಬಾನು ಹಿಪ್ಪರಗಿ 242 ಮತಗಳನ್ನು ಪಡೆದರೆ, ಲಕ್ಷ್ಮವ್ವ ಮಾಳಗಿಮನಿ 243 ಮತ ಪಡೆದು ಗೆಲುವು ಸಾಧಿಸಿದರು. ಕಾರಟಗಿ ಪುರಸಭೆಯ ಮೊದಲ ಅಧ್ಯಕ್ಷೆ ಪುತ್ರ ಬಿಜೆಪಿಯ ರಂಗನಾಥಬೂದಿ ಕಾಂಗ್ರೆಸ್ನ ಬಿ.ದೊಡ್ಡಪ್ಪ ವಿರುದ್ಧ ಒಂದೇ ಮತದ ಅಂತರದಿಂದ ಸೋತಿದ್ದಾರೆ. ತಾವರಗೇರಾ ಪಪಂನಲ್ಲಿ ಒಂದನೇ ವಾರ್ಡ್ನಲ್ಲಿ ಬಿಜೆಪಿಯ ದಶರಥಸಿಂಗ್ ಹಾಗೂ ಕಾಂಗ್ರೆಸ್ನ ಹನುಮಾನಸಿಂಗ್ ತಲಾ 242 ಮತ ಪಡೆದು ಸಮಬಲ ಸಾಧಿಸಿದರು. ಬಳಿಕ ಟಾಸ್ ಮಾಡಿದಾಗ ಬಿಜೆಪಿಯ ದಶರಥಸಿಂಗ್ಗೆ ಅದೃಷ್ಟ ಒಲಿದಿದೆ. 15ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ದುರುಗವ್ವ ಶರವಕಟ್ಟಿ ಕೇವಲ ಎರಡು ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಸಿರವಾರ ಪಟ್ಟಣ ಪಂಚಾಯಿತಿ ಐದನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಿ 249 ಮತಗಳನ್ನು ಪಡೆದರೆ, ಕಾಂಗ್ರೆಸ್ನ ಶೈಲಜಾ ಕುಲಕರ್ಣಿ 248 ಮತಗಳನ್ನು ಪಡೆದು, ಕೇವಲ ಒಂದೇ ಮತದ ಅಂತರದಿಂದ ಪರಾಭವಗೊಂಡಿದ್ದಾರೆ. ಭಾಗ್ಯನಗರ ಪಪಂನಲ್ಲಿ 3ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ವಾಸುದೇವ ಮೇಘರಾಜ ನಾಲ್ಕು ಮತಗಳಿಂದ ಗೆದ್ದಿದ್ದಾರೆ. ಕೆಂಭಾವಿ ಪುರಸಭೆಯ ವಾರ್ಡ್-5ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯ ರಾಘವೇಂದ್ರ ದೇಶಪಾಂಡೆ ಬಿಜೆಪಿಯ ಭಾಗ್ಯಶ್ರೀ ಸೊನ್ನದ್ ವಿರುದ್ಧ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುವ ಪರುಶುರಾಮ ಗೋವಿಂಧರ್ ಕಕ್ಕೇರಾ ಪುರಸಭೆಯ ವಾರ್ಡ್-6ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಕನಕಗಿರಿ ಪಪಂನಲ್ಲಿ 7ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಶ ಚುನಾವಣೆಗಾಗಿ ಮದುವೆ ಮುಂದೂಡಿದ್ದು, 318 ಮತ ಡೆದು ಅತಿಹೆಚ್ಚು ಅಂತರದಿಂದ ಗೆಲುವು ದಾಖಲಿಸಿದ್ದಾರೆ.