ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

omicron
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಜತೆಗೆ ದಿನೇದಿನೆ ಮತ್ತಷ್ಟು ದೇಶಗಳಿಗೆ ಪ್ರವೇಶಿಸುತ್ತ ತನ್ನ ಕಬಂಧ ಬಾಹುಗಳನ್ನು ಆವರಿಸಿಕೊಳ್ಳುತ್ತಿರುವ ರೂಪಾಂತರಿ ವೈರಸ್ ಒಮಿಕ್ರಾನ್ ದಿನದಿಂದ ದಿನಕ್ಕೂ ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಲೇ ಇದೆ.

ಹೊಸ ರೂಪಾಂತರಿ ವೈರಸ್ ಒಮಿಕ್ರಾನ್​ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೂ ಅದು ತೀವ್ರವಾಗಿ ಹರಡಬಲ್ಲುದಾದ್ದರಿಂದ ವೇಗವಾಗಿ ವ್ಯಾಪಿಸುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಈ ಹಿಂದೆ ಕಾಣಿಸಿಕೊಂಡಿರುವ ಡೆಲ್ಟಾ ವೇರಿಯಂಟ್​ಗಿಂತಲೂ ಒಮಿಕ್ರಾನ್​ ಹರಡುವಿಕೆ ಮೂರು ಪಟ್ಟು ಅಧಿಕ.

ಈ ಮಧ್ಯೆ ಒಮಿಕ್ರಾನ್​ನ ಪ್ರಮುಖ ರೋಗಲಕ್ಷಣ ಏನು ಎಂಬ ಬಗ್ಗೆ ದಕ್ಷಿಣ ಆಫ್ರಿಕದ ವೈದ್ಯಕೀಯ ಪರಿಣತರು ಮತ್ತಷ್ಟು ಮಾಹಿತಿ ಹೊರಹಾಕಿದ್ದಾರೆ. ದಕ್ಷಿಣ ಆಫ್ರಿಕದಲ್ಲಿನ ಒಮಿಕ್ರಾನ್​ ಅಸ್ತಿತ್ವವನ್ನು ಮೊದಲು ಗುರುತಿಸಿದವರಲ್ಲಿ ಒಬ್ಬರಾದ ಡಾ.ಆ್ಯಂಜೆಲಿಕ್​ ಕೊಯೆಟ್ಜೆ ಅದರ ಪ್ರಮುಖ ರೋಗಲಕ್ಷಣಗಳನ್ನು ತಿಳಿಸಿದ್ದಾರೆ.

ಒಮಿಕ್ರಾನ್ ತೀರಾ ವಿಶಿಷ್ಟವಾದ ರೋಗಲಕ್ಷಣಗಳನ್ನು ಹೊಂದಿದ್ದು, ಅದು​ ಫ್ಲೂ ಥರದ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಈ ಸೋಂಕಿನಿಂದಾಗಿ ವಾಸನಾ ಶಕ್ತಿ ಕೂಡ ಕಳೆದುಹೋಗಿರುವುದಿಲ್ಲ. ಉಳಿದಂತೆ ಸಣ್ಣಜ್ವರ, ಸುಸ್ತು, ಗಂಟಲು ಕೆರೆತವೂ ಇರಬಹುದು. ಆದರೆ ಒಮಿಕ್ರಾನ್​​ಗೆ ಸಂಬಂಧಿಸಿದಂತೆ ಎಲ್ಲಕ್ಕಿಂತಲೂ ಮುಖ್ಯವಾದ ರೋಗಲಕ್ಷಣವೆಂದರೆ ರಾತ್ರಿಯ ಹೊತ್ತಿನಲ್ಲಿ ವಿಪರೀತ ಮೈಕೈನೋವು ಬಂದು ಬೆವರುವುದು. ಇದರ ಜೊತೆಗೆ ಉಸಿರಾಟದ ಸಮಸ್ಯೆ, ಎದೆನೋವು, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕುಸಿತ ಕಂಡುಬಂದರೆ ತಕ್ಷಣ ಮುಂಜಾಗ್ರತೆ ವಹಿಸಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net