ಸಂಪಾದಕೀಯ| ಕನ್ನಡಕ್ಕೆ ಮೊದಲ ಪ್ರಾಶಸ್ತ್ಯವಿರಲಿ

bbmp pic
Published on

ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವುದು, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಮಾಲ್​ಗಳು ಹಾಗೂ ವಾಣಿಜ್ಯ ಮಳಿಗೆಗಳ ಮುಂಭಾಗ ಅಳವಡಿಸಿರುವ ಇಂಗ್ಲಿಷ್ ನಾಮಫಲಕಗಳನ್ನು ಧ್ವಂಸಗೊಳಿಸುವ ಸಂದರ್ಭದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಕನ್ನಡಪರ ಸಂಘಟನೆಗಳು ಹಲವು ವರ್ಷಗಳಿಂದ ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತಲೇ ಬಂದಿವೆ ಎಂಬುದು ಗಮನಾರ್ಹ. ರಾಜ್ಯದ ಬಹುತೇಕ ಕಡೆ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಬದಲು ಅನ್ಯಭಾಷೆಗೆ ಮಣೆ ಹಾಕುತ್ತಿರುವುದು ಅಕ್ಷಮ್ಯ. ನಾಮಫಲಕ ಅಳವಡಿಕೆ ವೇಳೆ 60:40 ಅನುಪಾತದಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿ ಇರಬೇಕೆಂದು ಆದೇಶವಿದೆ. ಆದರೆ, ಬೆಂಗಳೂರಿನ ಬಹುತೇಕ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳ ಮಾಲೀಕರು ಈ ನಿಯಮ ಪಾಲಿಸಿಲ್ಲ. ಅದರಲ್ಲೂ, ಹೊರರಾಜ್ಯದಿಂದ ಬಂದು ವ್ಯಾಪಾರ, ಉದ್ಯಮ ಮಾಡುತ್ತಿರುವವರು ಕನ್ನಡ ಬಳಕೆ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು, ಇಂಥ ಧೋರಣೆ ಸರಿಯಲ್ಲ.

ವಾಣಿಜ್ಯ ಮಳಿಗೆಗಳು ಹಾಗೂ ಮಾಲ್​ಗಳು ಫೆಬ್ರವರಿ 28ರೊಳಗೆ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಗಡುವು ಕೊಟ್ಟಿದೆ. ಇಂಥ ಆದೇಶ ಹೊರಡಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅಧಿಕಾರಿಗಳು ಕನ್ನಡ ಬಳಕೆಯ ಬಗ್ಗೆ ಸೂಚನೆ ಕೊಟ್ಟಿದ್ದರೂ, ಉದ್ದೇಶಪೂರ್ವಕವಾಗಿಯೇ ಅದನ್ನು ನಿರ್ಲಕ್ಷಿಸಿಕೊಂಡು ಬಂದಿದ್ದು ಏಕೆ? ಕರ್ನಾಟಕದ ಯಾವುದೇ ಭಾಗವಿರಲಿ ಅಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ಱ ಇರಲೇ ಬೇಕು. ಅನ್ನ ಕೊಡುವ ಈ ನೆಲದ ಕಾನೂನನ್ನು ಪಾಲಿಸಲು ಮೀನಮೇಷ ಎಣಿಸಬಾರದು. ಕನ್ನಡಪರ ಸಂಘಟನೆಗಳ ಆಗ್ರಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸ್ಪಂದಿಸಿದ್ದಾರೆ. ಇತ್ತೀಚೆಗೆ ಅವರು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದರು, ‘ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸಲು ಈ ನಿಯಮ ತರಲಾಗಿದೆ. ನಿಯಮ ಪಾಲನೆ ಮಾಡುವ ಮೂಲಕ ಹೆಮ್ಮೆಯ ಕನ್ನಡಿಗರೆನಿಸಿಕೊಳ್ಳಿ’ ಎಂದಿದ್ದಾರೆ. ಫೆಬ್ರವರಿ 28ರ ಗಡುವಿನೊಳಗೆ ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಳ್ಳದ ಅಂಗಡಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಕನ್ನಡ ಬಳಸದ ಅಂಗಡಿ ಮುಂಗಟ್ಟುಗಳನ್ನು ಕಾನೂನಿನ ಪ್ರಕಾರ ಅಮಾನತಿನಲ್ಲಿಟ್ಟು, ಪರವಾನಗಿ ರದ್ದುಗೊಳಿಸಲಾಗುವುದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ಇಲ್ಲಿ ಬೇಕಿರುವುದು ಇಚ್ಛಾಶಕ್ತಿಯಷ್ಟೇ. ಆ ಇಚ್ಛಾಶಕ್ತಿಯನ್ನು ಹೊರರಾಜ್ಯದವರೂ, ಕನ್ನಡಿಗರೂ ಪ್ರದರ್ಶಿಸಬೇಕಿದೆ. ‘ಹೇಗೂ ನಡೆಯುತ್ತದೆ’ ಎಂಬ ಉಡಾಫೆಯ ನೀತಿ ಭಾಷೆಯ ವಿಷಯದಲ್ಲಿ ಸಲ್ಲ. ಇನ್ನಾದರೂ, ಕನ್ನಡದ ಬಳಕೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನಗಳಾಗಬೇಕು, ಸಂಬಂಧಪಟ್ಟ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಬದ್ಧತೆ ತೋರಬೇಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net