

ಪಟನಾ: ಬಿಹಾರ ರಾಜಧಾನಿ ಪಟನಾದ ರೈಲು ನಿಲ್ದಾಣದಲ್ಲಿ ತನ್ನ ಪೋರ್ನ್ ವಿಡಿಯೋ ವೈರಲ್ ಆಗಿರುವುದು ನೀಲಿತಾರೆ ಕೇಂದ್ರ ಲಸ್ಟ್ ಗಮನಕ್ಕೆ ಬಂದಿದ್ದು, ಘಟನೆಯ ಬಗ್ಗೆ ನಿಗೂಢ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇಂಡಿಯಾ ಎಂದು ಇಂಗ್ಲಿಷ್ನಲ್ಲಿ ಬರೆದು ನೇರಳೆ ಬಣ್ಣದ ಟಾಪ್ ಧರಿಸಿರುವ ಫೋಟೋ ಪೋಸ್ಟ್ ಮಾಡಿ ಬಿಹಾರ ರೈಲ್ವೆ ನಿಲ್ದಾಣ (#BiharRailwayStation) ಎಂದು ಹ್ಯಾಷ್ಟ್ಯಾಗ್ ಹಾಕಿ ನಿಗೂಢವಾಗಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಲಸ್ಟ್ ಮಾಡಿರುವ ಟ್ವೀಟ್ ಅನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 14 ಸಾವಿರ ಮಂದಿ ಟ್ವಿಟ್ ಅನ್ನು ಲೈಕ್ಸ್ ಮಾಡಿದ್ದು, ಸಾವಿರಕ್ಕೂ ಅಧಿಕ ಮಂದಿ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಸುಮಾರು 600ಕ್ಕೂ ಅಧಿಕ ಮಂದಿ ಲಸ್ಟ್ ಅವರು ಟ್ವೀಟ್ಗೆ ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.
ಘಟನೆ ಹಿನ್ನೆಲೆ ಏನು?
ಬಿಹಾರದ ಪಟನಾ ರೈಲು ನಿಲ್ದಾಣದಲ್ಲಿ ಅಳವಡಿಸಿದ್ದ ಟಿ.ವಿ. ಪರದೆಯಲ್ಲಿ ಮೂರು ನಿಮಿಷಗಳ ಕಾಲ ನೀಲಿ ಚಿತ್ರ ಪ್ರದರ್ಶನಗೊಂಡ ಘಟನೆ ಮಾ.19ರ ಬೆಳಗ್ಗೆ 9.30ರ ಸುಮಾರಿಗೆ ನಡೆಯಿತು. ಈ ಘಟನೆಯಿಂದ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮುಜುಗರಕ್ಕೊಳಗಾದರು. ಟಿವಿಯಲ್ಲಿ ನೀಲಿಚಿತ್ರ ಪ್ರದರ್ಶನವಾಗುತ್ತಿದ್ದಂತೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಅಧಿಕಾರಿಗಳು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)ಗೆ ದೂರು ಸಲ್ಲಿಸಿದರು.
ದೂರು ದಾಖಲಿಸಿಕೊಂಡ ಆರ್‌ಪಿಎಫ್ ಅಧಿಕಾರಿಗಳು, ಟಿ.ವಿಯಲ್ಲಿ ಜಾಹೀರಾತು ಪ್ರದರ್ಶಿಸುವ ಜವಾಬ್ದಾರಿ ವಹಿಸಿಕೊಂಡ ದತ್ತಾ ಕಮ್ಯುನಿಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ ನೀಲಿ ಚಿತ್ರ ಪ್ರದರ್ಶನವಾಗುತ್ತಿರುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ರೈಲ್ವೇ ಅಧಿಕಾರಿಗಳು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್ಐಆರ್ ದಾಖಲಿಸಿ, ದಂಡ ವಿಧಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೇ ಅಧಿಕಾರಿಗಳು, ನಿಲ್ದಾಣದಲ್ಲಿ ಟಿ.ವಿ ಪರದೆಯ ಮೇಲೆ ಜಾಹೀರಾತುಗಳನ್ನು ಪ್ರಸಾರ ಮಾಡಲು ಏಜೆನ್ಸಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)