ಮೊಬೈಲ್​ನಲ್ಲಿ ಮಾತನಾಡ್ತಿದ್ದ ಮಹಿಳೆಗೆ ಮುತ್ತಿಟ್ಟು ಪರಾರಿಯಾಗಿದ್ದ ನಟೋರಿಯಸ್​ ಸೀರಿಯಲ್​ ಕಿಸ್ಸರ್ ಅಂದರ್​!

Serial Kisser
Published on

ಪಟನಾ: ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಮಹಿಳೆಯ ಬಳಿ ಬಂದು ಆಕೆಯನ್ನು ಹಿಡಿದು ಎಳೆದುಕೊಂದು ಚುಂಬಿಸಿದ್ದ ನಟೋರಿಯಸ್​ "ಸೀರಿಯಲ್​ ಕಿಸ್ಸರ್​"ನನ್ನು ಕೊನೆಗೂ ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನ್ನು ಮೊಹಮ್ಮದ್​ ಅಕ್ರಂ ಎಂದು ಗುರುತಿಸಲಾಗಿದೆ. ಸಿಕ್ಕ ಸಿಕ್ಕ ಮಹಿಳೆಯರಿಗೆ ಬಲವಂತವಾಗಿ ಮುತ್ತು ಕೊಟ್ಟು ಪರಾರಿಯಾಗುವುದೇ ಈತನ ಖಯಾಲಿಯಾಗಿತ್ತು ಎಂದು ತಿಳಿದುಬಂದಿದೆ.

ಸಿಕ್ಕಿಬಿದ್ದಿದ್ದು ಹೇಗೆ?

ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿತ್ತು.. ಮಹಿಳೆಯೊಬ್ಬಳು ಮೊಬೈಲ್​ ಮಾತನಾಡುತ್ತಾ ನಿಂತಿರುವಾಗ ಹಿಂದಿನಿಂದ ಬರುವ ಯುವಕನೊಬ್ಬ ಮಹಿಳೆಯನ್ನು ಹಿಡಿದುಕೊಂಡು ಬಲವಂತವಾಗಿ ತುಟಿ ಚುಂಬಿಸುವ ದೃಶ್ಯ ವೈರಲ್​ ವಿಡಿಯೋದಲ್ಲಿತ್ತು. ಯುವಕ ವರ್ತನೆಗೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿ, ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದರು.

ಇದಾದ ಬಳಿಕ ಯುವಕನ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸ್​ ಮೂಲಗಳ ಪ್ರಕಾರ ಈ ಘಟನೆ ಬಿಹಾರದ ಜಮುಯಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಾರ್ಚ್​ 10ರಂದು ಈ ಘಟನೆ ನಡೆದಿದೆ. ಮಹಿಳೆಯು ಆರೋಗ್ಯ ಕಾರ್ಯಕರ್ತೆಯಾಗಿದ್ದು, ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾಗ ಹಿಂಬದಿಯಿಂದ ಬಂದ ಯುವಕ ಹಿಡಿದೆಳೆದು ತಬ್ಬಿಕೊಂದು ಬಲವಂತವಾಗಿ ತುಟಿಗೆ ಚುಂಬಿಸಿದ್ದ. ಬಳಿಕ ಅಲ್ಲಿಂದ ಪರಾರಿಯಾಗಿದ್ದ.

ಈ ಘಟನೆಯ ಬೆನ್ನಲ್ಲೇ ಸಂತ್ರಸ್ತೆ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು. ಈ ಬಗ್ಗೆ ಮಾತನಾಡಿದ್ದ ಸಂತ್ರಸ್ತೆ ಆತ ಯಾರು ಎಂಬುದು ನನಗೆ ತಿಳಿದಿಲ್ಲ. ಆತ ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಆಸ್ಪತ್ರೆಯ ಕಾಪೌಂಡ್​ ಗೋಡೆ ಜಿಗಿದು ಬಂದು ಈ ಕೃತ್ಯ ಎಸಗಿದ್ದಾನೆ. ನನ್ನ ಜೊತೆ ಅನುಚಿತವಾಗಿ ವರ್ತಿಸಿದಾಗ ತಕ್ಷಣ ನಾನು ತಡೆದೆ. ನಾನು ಆಸ್ಪತ್ರೆಯ ಸಿಬ್ಬಂದಿಯನ್ನು ಕೂಗಿಕೊಂಡಾಗ ಆತ ಅಲ್ಲಿಂದ ಕಾಲ್ಕಿತ್ತ ಎಂದು ಹೇಳಿದರು..

ಆತನನ್ನು ಬಂಧಿಸಿ, ಕಠಿಣ ಕ್ರಮವನ್ನು ಜರುಗಿಸಬೇಕು. ಆಸ್ಪತ್ರೆಯ ಕಾಪೌಂಡ್​ ಗೋಡೆ ತುಂಬಾ ಚಿಕ್ಕದಾಗಿದೆ. ಗೋಡೆಯ ಮೇಲೆ ತಂತಿ ಬೇಲಿಯನ್ನು ಅಳವಡಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಯ ಬಳಿ ಮನವಿ ಮಾಡಿದ್ದೇನೆ ಎಂದು ಸಂತ್ರಸ್ತೆ ಮಾಧ್ಯಮದ ಮುಂದೆ ತಿಳಿಸಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಅಕ್ರಂಗಾಗಿ ಹುಡುಕಾಟ ಆರಂಭಿಸಿದ್ದರು. ಅಕ್ರಂನ ಅಡಗುತಾಣದ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ ಆತನ ನಾಲ್ವರು ಸಹಚರರೊಂದಿಗೆ ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net