

ಪಾಟನಾ: ಬಿಹಾರದ ಪಾಟ್ನಾ ರೈಲು ನಿಲ್ದಾಣದಲ್ಲಿ ಅಳವಡಿಸಿದ್ದ ಟಿ.ವಿ. ಪರದೆಯಲ್ಲಿ ಮೂರು ನಿಮಿಷಗಳ ಕಾಲ ನೀಲಿ ಚಿತ್ರ ಪ್ರದರ್ಶನಗೊಂಡ ಘಟನೆ ನಿನ್ನೆ (ಮಾ.19) ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ. ಈ ಘಟನೆಯಿಂದ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮುಜುಗರಕ್ಕೊಳಗಾದ ಸನ್ನಿವೇಶ ಎದುರಾಗಿದೆ.
ರೈಲ್ವೇ ನಿಲ್ದಾಣದ ಟಿ.ವಿ.ಯಲ್ಲಿ ನೀಲಿಚಿತ್ರ ಪ್ರದರ್ಶನವಾಗುತ್ತಿದ್ದಂತೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)ಗೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ದೂರು ದಾಖಲಿಸಿಕೊಂಡ ಆರ್‌ಪಿಎಫ್ ಅಧಿಕಾರಿಗಳು, ಟಿ.ವಿಯಲ್ಲಿ ಜಾಹೀರಾತು ಪ್ರದರ್ಶಿಸುವ ಜವಾಬ್ದಾರಿ ವಹಿಸಿಕೊಂಡ ದತ್ತಾ ಕಮ್ಯುನಿಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ ನೀಲಿ ಚಿತ್ರ ಪ್ರದರ್ಶನವಾಗುತ್ತಿರುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ರೈಲ್ವೇ ಅಧಿಕಾರಿಗಳು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್ಐಆರ್ ದಾಖಲಿಸಿ, ದಂಡ ವಿಧಿಸಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೇ ಅಧಿಕಾರಿಗಳು, ನಿಲ್ದಾಣದಲ್ಲಿ ಟಿ.ವಿ ಪರದೆಯ ಮೇಲೆ ಜಾಹೀರಾತುಗಳನ್ನು ಪ್ರಸಾರ ಮಾಡಲು ಏಜೆನ್ಸಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)