ಪರಭಾಷೆಗಳಲ್ಲಿ ಕನ್ನಡತಿಯರ ಪಾರಮ್ಯ

Sandalwood
Published on

ಹರ್ಷವರ್ಧನ್ ಬ್ಯಾಡನೂರು

ಕನ್ನಡದ ನಟಿಯರಿಗೆ ಈಗ ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಿದೆ. ಅದಕ್ಕೆ ಯಾವುದೇ ದೂರಿಲ್ಲದೆ ಎಂತಹ ಸವಾಲಿನ ಪಾತ್ರವಿದ್ದರೂ ಮಾಡುತ್ತಾರೆ, ಅವರ ಲುಕ್ಸ್ ಪ್ಯಾನ್ ಇಂಡಿಯಾಗೆ ಒಪು್ಪತ್ತದೆ, ಸಂಭಾವನೆ ಕಡಿಮೆ ಎಂದು ಹಲವು ಕಾರಣಗಳಿವೆ. ಹಿಂದೆ ಮಾಲಾಶ್ರೀ, ಸೌಂದರ್ಯ ಸೇರಿದಂತೆ ಹಲವು ಕನ್ನಡದ ನಟಿಯರು ಪರಭಾಷೆಗಳಲ್ಲಿ ಸ್ಟಾರ್ ಮಟ್ಟಕ್ಕೇರಿದ್ದರು. ಈಗಾಗಲೇ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜತೆಗೆ ಸಂಯುಕ್ತಾ ಹೆಗ್ಡೆ, ಆಶಿಕಾ ರಂಗನಾಥ್, ಶಾನ್ವಿ ಶ್ರೀವಾಸ್ತವ್, ರೋಷಿನಿ ಪ್ರಕಾಶ್, ಇತಿ ಆಚಾರ್ಯ, ಸಂಜನಾ ಆನಂದ್, ಅನುಷಾ ರೈ, ಪ್ರಿಯಾಂಕಾ ತಿಮ್ಮೇಶ್ ಮುಂತಾದವರು ಪರಭಾಷೆಗಳಲ್ಲಿ ನಟಿಸುತ್ತಿದ್ದಾರೆ.

ಬೇರೆ ಕಡೆ ಒಳ್ಳೆಯ ಅಭಿಪ್ರಾಯವಿದೆ

2019ರಲ್ಲಿ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಸಂಜನಾ ಆನಂದ್, ನಂತರ ‘ಸಲಗ’, ‘ಕುಷ್ಕ’, ‘ವಿಂಡೋಸೀಟ್’ ಸೇರಿದಂತೆ ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ತೆರೆಗೆ ಬಂದ ‘ನೇನು ಮೀಕು ಬಾಗ ಕವಾಳಸಿನವಾದಿನಿ’ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟ ಅವರು, ಅದರ ಬೆನ್ನಲ್ಲೇ ಮತ್ತೊಂದು ಟಾಲಿವುಡ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ‘ಮೊದಲ ತೆಲುಗು ಚಿತ್ರದ ಟ್ರೇಲರ್, ಹಾಡುಗಳನ್ನು ನೋಡಿ, ‘ಫುಲ್ ಬಾಟಲ್’ ಎಂಬ ಮತ್ತೊಂದು ತೆಲುಗು ಚಿತ್ರದಲ್ಲಿ ಅವಕಾಶ ಕೊಟ್ಟರು. ಈಗ ಅದು ಕೂಡ ಪೂರ್ಣಗೊಂಡಿದೆ. ‘ಕೆಜಿಎಫ್’, ‘ವಿಕ್ರಾಂತ್ ರೋಣ’ ‘777 ಚಾರ್ಲಿ’ ಚಿತ್ರಗಳ ಬಳಿಕ ಕನ್ನಡದ ಪ್ರತಿಭೆಗಳನ್ನು ಪರಭಾಷೆಗಳಲ್ಲಿ ನೋಡುವ ರೀತಿಯೇ ಬದಲಾಗಿದೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ತೆಲುಗು ಚಿತ್ರದ ಸೆಟ್​ನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲ ಪ್ರಾರಂಭವಾಗಿದ್ದು ‘ಕೆಜಿಎಫ್’ ಚಿತ್ರದಿಂದ. ಪರಭಾಷಾ ಚಿತ್ರರಂಗಗಳಲ್ಲಿ ನಮ್ಮ ಕನ್ನಡ ಇಂಡಸ್ಟ್ರಿ ಬಗ್ಗೆ ತುಂಬ ಒಳ್ಳೆಯ ಅಭಿಪ್ರಾಯವಿದೆ’ ಎನ್ನುತ್ತಾರೆ ಸಂಜನಾ ಆನಂದ್.

ಸಂಭಾವನೆ ಬಗ್ಗೆ ತಕರಾರಿಲ್ಲ

‘ನಾನು ಕನ್ನಡದ ಜತೆಗೆ ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರೂ ಕನ್ನಡದ ಮೇಲೆ ವಿಶೇಷ ಪ್ರೀತಿ, ಅಭಿಮಾನ’ ಎನ್ನುತ್ತಾರೆ ನಟಿ ಇತಿ ಆಚಾರ್ಯ. ‘ಮೊದಲೆಲ್ಲಾ ತೆಲುಗು, ತಮಿಳು ನಂತರ ಕನ್ನಡ ಹಾಗೂ ಮಲಯಾಳಂ ಚಿತ್ರಗಳು ಎಂಬಂತೆ ರ‍್ಯಾಂಕಿಂಗ್ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕನ್ನಡ ಎಲ್ಲ ಚಿತ್ರರಂಗಗಳಿಗೆ ಸರಿಸಮನಾಗಿ ನಿಂತಿದೆ. ಮೊದಲು ಸಂಭಾವನೆ ವಿಷಯದಲ್ಲೂ ಚರ್ಚೆಗಳಾಗುತ್ತಿತ್ತು. ಆದರೆ ಬೇರೆ ಭಾಷೆಗಳಲ್ಲಿ ನಾವು ನಿರೀಕ್ಷಿಸುವ ಸಂಭಾವನೆ ಕೊಟ್ಟು ಅವಕಾಶ ನೀಡುತ್ತಾರೆ. ನಾನು ಈ ಬಾರಿ ಕಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೋಗಿದ್ದೆ. ಆಗ ನಾನು ಭಾರತೀಯಳು, ಕನ್ನಡದ ನಟಿ ಎಂದಿದ್ದಕ್ಕೆ ವಿದೇಶಿ ಚಿತ್ರರಂಗದವರು ರಾಕಿ ಭಾಯ್ ಯಶ್, ‘ಕೆಜಿಎಫ್’ ಅಂತೆಲ್ಲ ಮಾತನಾಡುತ್ತಿದ್ದರು. ಬೇರೆ ಭಾಷೆಗಳಿಂದ ನನಗೆ ಅವಕಾಶಗಳೇನೋ ಬರುತ್ತಿವೆ. ಆದರೆ ಸದ್ಯ ‘ಲಕ್ಷ್ಮೀಪುತ್ರ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಜತೆಗೆ ನಿರ್ವಣಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಖುಷಿಯಿಂದ ಮಾತನಾಡುತ್ತಾರೆ ಇತಿ ಆಚಾರ್ಯ.

ಕನ್ನಡದವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ

‘ರೈಡರ್’, ‘ಖಡಕ್’, ‘ವೀರಪುತ್ರ’ ಸೇರಿದಂತೆ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅನುಷಾ ರೈ ಕೂಡ ಈಗ ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ‘‘ನೆಲ್ಸನ್’ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸಾಯಿ ಸುನಲ್ ನಿರ್ದೇಶನದ ಈ ಚಿತ್ರದಲ್ಲಿ ಜಯಂತ್ ನಾಯಕನಾಗಿದ್ದು, ಅವರಿಗೆ ನಾನು ನಾಯಕಿಯಾಗಿದ್ದೇನೆ. ಈಗಾಗಲೇ ಒಂದು ಶೆಡ್ಯುಲ್ ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಎರಡನೆ ಶೆಡ್ಯುಲ್ ಪ್ರಾರಂಭವಾಗಲಿದೆ. ‘ಕೆಜಿಎಫ್’ ಚಿತ್ರದ ಸಕ್ಸಸ್ ಬಳಿಕ, ರಶ್ಮಿಕಾ ಮಂದಣ್ಣ ಅವರಂತಹ ನಟಿಯರ ಬೆಳವಣಿಗೆಯ ನಂತರ ಕನ್ನಡದ ಪ್ರತಿಭೆಗಳಿಗೆ

ಬೇರೆ ಭಾಷೆಗಳಲ್ಲಿ ಮನ್ನಣೆ ದೊರೆಯುತ್ತಿದೆ. ಕನ್ನಡದವರು ಅಂದರೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇನ್ನೂ ಎರಡು, ಮೂರು ತೆಲುಗು ಚಿತ್ರಗಳ ಕಥೆ ಕೇಳಿದ್ದೇನೆ, ಚರ್ಚೆ ನಡೆಯುತ್ತಿದೆ’ ಎಂದು ಟಾಲಿವುಡ್ ಪಯಣದ ಬಗ್ಗೆ ಹೇಳಿ ಕೊಳ್ಳುತ್ತಾರೆ ಅನುಷಾ.

ಅಣ್ಣಾವ್ರ ಕಾಲದ ಗತವೈಭವ ಮರುಕಳಿಸಿದೆ

ತೆಲುಗು ಮೂಲಕ ಬಣ್ಣ ಹಚ್ಚಿದರೂ ಕನ್ನಡದಲ್ಲೇ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಇಲ್ಲೇ ಸೆಟಲ್ ಆಗಿರುವ ನಟಿ ಶಾನ್ವಿ ಶ್ರೀವಾಸ್ತವ್. ‘ಮುಂಚೆ ಕನ್ನಡ ಚಿತ್ರರಂಗ ಅಂದರೆ ಮಾರುಕಟ್ಟೆ ಚಿಕ್ಕದು, ಸಣ್ಣ ಇಂಡಸ್ಟ್ರಿ ಅಂತಂದುಕೊಂಡಿದ್ದರು. ಆದರೆ ಈಗ ಆ ಆಲೋಚನೆ ಬದಲಾಗಿದೆ. ಜತೆಗೆ ಕನ್ನಡ ಚಿತ್ರರಂಗದ ಮೇಲಿನ ಜವಾಬ್ದಾರಿ ಕೂಡ ಹೆಚ್ಚಿದೆ. ಕಮರ್ಷಿಯಲ್ ಜತೆ ವಿಷಯಾಧಾರಿತ ಚಿತ್ರಗಳನ್ನೂ ಹೆಚ್ಚೆಚ್ಚು ಮಾಡಬೇಕಿದೆ. ಅದೇ ಕಾರಣಕ್ಕೆ ‘ಕೆಜಿಎಫ್’ ಹಿಟ್ ಆಗಿದ್ದು. ಇದು ಇಲ್ಲಿಗೇ ನಿಲ್ಲಬಾರದು. ಸ್ಯಾಂಡಲ್​ವುಡ್ ಮೇಲೆ ಈಗ ನಿರೀಕ್ಷೆ ಹೆಚ್ಚಿದೆ. ‘ಕೆಜಿಎಫ್’ ಬಗ್ಗೆ ಯಶ್ ಸೇರಿದಂತೆ ಹಲವರಿಗೆ ಅದರ ಕ್ರೆಡಿಟ್ ಸಲ್ಲಬೇಕು. ಡಾ. ರಾಜಕುಮಾರ್ ಅವರ ಸಮಯದಲ್ಲಿ ಬೇರೆ ಚಿತ್ರರಂಗದವರು ಕನ್ನಡ ಚಿತ್ರಗಳ ಬಗ್ಗೆ ಮಾತನಾಡುತ್ತಿದ್ದರಂತೆ. ಅದೇ ರೀತಿ ಈಗ ಮತ್ತೆ ಮಾತನಾಡುತ್ತಿದ್ದಾರೆ. ನನಗಂತೂ ಹೆಮ್ಮೆಯಿದೆ. ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಬೇರೆ ಭಾಷೆಗಳಲ್ಲೂ ನಟಿಸುತ್ತಿದ್ದೇನೆ. ಆದರೆ ಇದೇ ನನ್ನ ಮನೆ. ಬೇರೆ ಎಲ್ಲಿಗೆ ಹೋದರೂ ನಾನು ಕನ್ನಡ ಚಿತ್ರಗಳ ಬಗ್ಗೆ ಮಾತನಾಡುತ್ತೇನೆ. ಸದ್ಯ ಮರಾಠಿ, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಒಂದು ಬಾಲಿವುಡ್ ಪ್ರಾಜೆಕ್ಟ್ ಕೂಡ ಇದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ನಟಿ ಶಾನ್ವಿ ಶ್ರೀವಾಸ್ತವ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net