

ಬೆಂಗಳೂರು: ಬಿಡುಗಡೆಯಾಗಿ ಒಂದು ವಾರ ಸಮೀಪಿಸುತ್ತಿರುವ ಕಾಂತಾರ ಸಿನಿಮಾ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾದ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ಈ ಮೂಲಕ ವರ್ಷದ ಹಿಟ್ ಸಿನಿಮಾ ಸಾಲಿಗೆ ಕಾಂತಾರ ಸಿನಿಮಾ ಸೇರಿಕೊಂಡಿದೆ.
ಇದು ಕನ್ನಡ ಸಿನಿಮಾ. ವಿಶ್ವದಾದ್ಯಂತ ಜನರು ಕನ್ನಡ ಭಾಷೆಯಲ್ಲೇ ಸಿನಿಮಾ ನೋಡಬೇಕು ಎಂಬ ಉದ್ದೇಶ ನಿರ್ದೇಶಕ ರಿಷಬ್ ಶೆಟ್ಟಿ ಹೊಂದಿದ್ದರು. ಹೀಗಾಗಿ ಬೇರೆ ಯಾವುದೇ ಭಾಷೆಗೆ ಡಬ್ ಮಾಡದೆ ನೇರವಾಗಿ ಕನ್ನಡ ಭಾಷೆಯಲ್ಲಿ ಚಿತ್ರ ಬಿಡುಗಡೆ ಹೊಂದಿತ್ತು. ಸಬ್ಟೈಟಲ್ ಮೂಲಕ ಪರಭಾಷಾ ಚಿತ್ರಪ್ರೇಮಿಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
ಸಿನಿಮಾ ಬಿಡುಗಡೆಯ ವೇಳೆ ಮುಂದಿನ ದಿನಗಳಲ್ಲಿ ಬೇರೆ ಭಾಷೆಗೆ ಡಬ್ಬಿಂಗ್ ಮಾಡಲಾಗುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಇದೀಗ ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲ್ಮ್ಸ್ನ ಕಾರ್ತಿಕ್ ಗೌಡ ಈ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ.
ಕಾಂತಾರ ಸಿನಿಮಾ ಹಿಂದಿ ಭಾಷೆಗೆ ಡಬ್ಬಿಂಗ್ ಆಗಿದೆ. ಅ.9 ರಂದು ಬೆಳಗ್ಗೆ 9.10ಕ್ಕೆ ಹಿಂದಿ ಭಾಷೆಗೆ ಡಬ್ಬಿಂಗ್ ಆಗಿರುವ ಕಾಂತಾರ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಹಿಂದಿ ಅವತರಣಿಕೆಯ ಕಾಂತಾರ ಸಿನಿಮಾವನ್ನು AAFilmsIndia ವಿತರಣೆ ಮಾಡಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.