

ಬೆಂಗಳೂರು: ಸಂವಿಧಾನವನ್ನು ಉಳಿಸಲು ಪತ್ರಿಕೋದ್ಯಮ ಸಹ ಮಹತ್ವದ ಮಾರ್ಗ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು. ಸಿಎಂ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಬೆಂಗಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಯುಡಬ್ಲ್ಯುಜೆ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ನನ್ನ ಉಸಿರು, ಅದು ಅನೇಕ ಮೌಲ್ಯಗಳನ್ನು ಕಲಿಸಿದೆ. ಸಮಾಜದಲ್ಲಿ ಜನಪರ ಬದಲಾವಣೆ ತರುವಲ್ಲಿ ಪತ್ರಿಕೋದ್ಯಮದ ಪಾತ್ರ ಮುಖ್ಯವಾದದ್ದು. ಹಾಗಾಗಿ ನನಗೆ ಪತ್ರಿಕೋದ್ಯಮದ ಘನತೆಯ ಬಗ್ಗೆ ಎಚ್ಚರ ಮತ್ತು ಪ್ರೀತಿ ಇದೆ ಎಂದರು.
ಪತ್ರಕರ್ತರು ತಮ್ಮ ವೃತ್ತಿಕ್ಷೇತ್ರದಲ್ಲಿ ಭಾರಿ ಸವಾಲನ್ನು ಎದುರಿಸುತ್ತಿದ್ದಾರೆ. ಏನೇ ಆದರೂ ಸದಾ ವೃತ್ತಿಬದ್ಧತೆ ಮೆರೆದರೆ ಮಾತ್ರ ಉತ್ತಮ ಪತ್ರಕರ್ತರಾಗಲು ಸಾಧ್ಯ ಎಂದರು.
ಪತ್ರಿಕೋದ್ಯಮ ವೃತ್ತಿಯಲ್ಲಿ ಉತ್ತಮ ಮಾರ್ಗದರ್ಶನ ದೊರೆತರೆ ಸ್ಥಾನಮಾನಗಳು ಪತ್ರಕರ್ತರನ್ನು ಹುಡುಕಿಕೊಂಡು ಬರುತ್ತವೆ, ಸಂವಿಧಾನದ ಆಶಯದ ಅನುಗುಣಕ್ಕೆ ಪತ್ರಕರ್ತರು ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಪ್ರಭಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರಾಗಿ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಪರಿಶ್ರಮದಿಂದ ಮೇಲೇರಿ ಬಂದ ಪ್ರಭಾಕರ್ ಅವರು ಸಂಯಮದ ನಡವಳಿಕೆಯಿಂದ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು. ಅಧಿಕಾರದ ಸ್ಥಾನದಲ್ಲಿದ್ದರೂ ಹಮ್ಮು-ಬಿಮ್ಮು ತೋರಿಸಲಿಲ್ಲ. ಮಾನವೀಯ ನೆಲೆಯಲ್ಲಿ ಸದಾ ಸ್ಪಂದಿಸುತ್ತ ಬಂದಿದ್ದಾರೆ. ಕೆಯುಡಬ್ಲ್ಯುಜೆ ಜತೆಗೆ ಅವಿನಾಭಾವ ಸಂಬಂಧವನ್ನು ಹಾಗೆಯೇ ಕಾಪಿಟ್ಟುಕೊಂಡಿರುವುದು ಅಭಿಮಾನದ ಸಂಗತಿ ಎಂದರು.
ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಅಧಿಕಾರದ ಹುದ್ದೆಯಲ್ಲಿದ್ದಾಗಲೂ ಪ್ರಭಾಕರ್ ಪತ್ರಕರ್ತರಾಗಿ ಉಳಿದಿದ್ದಾರೆ. ಅವರ ಪರಿಶ್ರಮ ಮತ್ತು ಸಮಚಿತ್ತದ ನಡೆ ಎತ್ತರಕ್ಕೆ ಬೆಳೆಸಿದೆ ಎಂದರು.
ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ ಅವರು ವಿಧಾನಸಭೆ ರೌಂಡ್ಸ್ನಲ್ಲಿ ಪ್ರಭಾಕರ್ ಜೊತೆಗಿದ್ದ ಒಡನಾಟ ನೆನಪಿಸಿಕೊಂಡರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಹಿರಿಯ ಪತ್ರಕರ್ತರಾದ ಗೋಪಿನಾಥ, ಕಂಕ ಮೂರ್ತಿ, ಚೆಲುವರಾಜು, ವೆಂಕಟಸಿಂಗ್, ಹರೀಶ್ ಡಿ.ಎಲ್., ರವಿನಾಕಲಗೂಡು, ಗಿರೀಶ್ ಕೋಟೆ, ಅರುಣಾ ಕುಣಿಗಲ್, ಗುರುರಾಜ ಹೂಗಾರ್, ಶಶಿಕಲಾ ಸೇರಿದಂತೆ ಹಲವರು ಪ್ರಭಾಕರ್ ಜೊತೆಗಿನ ಒಡನಾಟ ಸ್ಮರಿಸಿ ಶುಭ ಹಾರೈಸಿದರು.
ಕೆಯುಡಬ್ಲ್ಯುಜೆ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ ಮತ್ತು ಹಲವು ಜಿಲ್ಲೆಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷ ಕೆ. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ಮತ್ತಿತರ ಪದಾಧಿಕಾರಿಗಳು ಪ್ರಭಾಕರ್ ಅವರನ್ನು ಅಭಿನಂದಿಸಿದರು. ಹಲವು ಸಂಘ-ಸಂಸ್ಥೆಗಳು ಪ್ರಭಾಕರ್ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಿದವು. ಕೆಯುಡಬ್ಲ್ಯುಜೆ ಸಭಾಂಗಣದಲ್ಲಿ ಪ್ರಭಾಕರ್ ಅವರಿಗೆ ಸನ್ಮಾನ ಗೌರವ ಅಭಿಮಾನದ ಹೊಳೆಯೇ ಹರಿಯಿತು.