

ನವದೆಹಲಿ: ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ದುರಂತದಲ್ಲಿ ಸುಮಾರು 300 ಮಂದಿ ಸಾವಿಗೀಡಾಗಿದ್ದು, ಅಂದಾಜು 800 ಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಕಾಲು ಕಳೆದುಕೊಂಡ ಎಲ್ಲರಿಗೂ ಉಚಿತವಾಗಿ ಕೃತಕ ಕಾಲು ಜೋಡಣೆ ಮಾಡಲು ಸಂಸ್ಥೆಯೊಂದು ಮುಂದೆ ಬಂದಿದೆ.
ಜೈಪುರ್ ಫುಟ್ ಉಪಕ್ರಮದಡಿ ಕೃತಕ ಕಾಲುಗಳನ್ನು ಒದಗಿಸುತ್ತಿರುವ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿ (ಬಿಎಂವಿಎಸ್ಎಸ್) ಇಂಥದ್ದೊಂದು ಕಾರ್ಯಕ್ಕೆ ಸಜ್ಜಾಗಿದೆ. ಬಿಎಂವಿಎಸ್ಎಸ್ನ ಸಂಸ್ಥಾಪಕ ಹಾಗೂ ಅಧ್ಯಕ್ಷರೂ ಆಗಿರುವ ಡಿ.ಆರ್. ಮೆಹತಾ ಈ ಕುರಿತು ಘೋಷಣೆ ಮಾಡಿದ್ದಾರೆ.
ಒಡಿಶಾ ರೈಲು ದುರಂತದಲ್ಲಿ ಕಾಲು ಕಳೆದುಕೊಂಡ ಎಲ್ಲರಿಗೂ ಉಚಿತವಾಗಿ ಕೃತಕ ಕಾಲುಗಳನ್ನು ಒದಗಿಸುವುದಲ್ಲದೆ, ಅವರಿಗೆ ಭುವನೇಶ್ವರದಲ್ಲಿರುವ ಖ್ರೋಡಾ ಸೆಂಟರ್ನಲ್ಲಿ ಉಚಿತವಾಗಿ ಕೃತಕ ಕಾಲುಗಳನ್ನು ಜೋಡಣೆ ಕೂಡ ಮಾಡಿಕೊಡಲಾಗುವುದು ಎಂದು ಮೆಹತಾ ಅವರು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಕಾಲು ಕಳೆದುಕೊಂಡವರ ಗಾಯ ಗುಣವಾಗಲು ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಅಗತ್ಯ ಇರುವ ಅಂಥ ಎಲ್ಲರಿಗೂ ಮೂರು ತಿಂಗಳ ಬಳಿಕ ಕೃತಕ ಕಾಲುಗಳನ್ನು ಜೋಡಣೆ ಮಾಡಿಕೊಡಲಾಗುವುದು. ಖ್ರೋಡಾ ಸೆಂಟರ್ನ ಮೊಬೈಲ್ ವರ್ಕ್ಶಾಪ್ ಮೂಲಕ ಒಡಿಶಾ ವಿವಿಧ ನಗರ ಹಾಗೂ ಗ್ರಾಮಗಳಲ್ಲಿ ಕೃತಕ ಕಾಲುಗಳನ್ನು ಜೋಡಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರೋಗಿಗಳು ಬೇರೆ ರಾಜ್ಯಗಳಲ್ಲಿದ್ದರೆ ಅಲ್ಲಿರುವ ನಮ್ಮ ಶಾಶ್ವತ ಕೇಂದ್ರಗಳಲ್ಲಿ ಮತ್ತು ಮೊಬೈಲ್ ವರ್ಕ್ಶಾಪ್ಗಳಲ್ಲಿ ಕೃತಕ ಕಾಲುಗಳನ್ನು ಜೋಡಣೆ ಮಾಡಲಾಗುವುದು. ದೇಶಾದ್ಯಂತ ಇರುವ ಇಂಥ 33 ಕೇಂದ್ರಗಳಲ್ಲಿ ಉಚಿತವಾಗಿ ಕಾಲು ಜೋಡಿಸಲಾಗುವುದು ಎಂದು ತಿಳಿಸಿದ್ದಾರೆ. -ಏಜೆನ್ಸೀಸ್