More

    ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ

    • ರಜತ ಮಹೋತ್ಸವ ಸಂಭ್ರಮದಲ್ಲಿ ಕೊಚ್ಚಿಯ ಅಮೃತ ಆಸ್ಪತ್ರೆ ಘೋಷಣೆ
    • ಕೇಂದ್ರ ಗೃಹ ಸಚಿವ ಅಮಿತ್ ಷಾ ಉಪಸ್ಥಿತಿ, 2 ಸಂಶೋಧನಾ ಕೇಂದ್ರ ಉದ್ಘಾಟನೆ

    ಕೊಚ್ಚಿ: ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕೊಚ್ಚಿಯ ಅಮೃತ ಆಸ್ಪತ್ರೆಯು ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲಿಟ್ಟಿರುವುದಾಗಿ ಘೋಷಿಸಿದೆ. ಇಂದು ಕೊಚ್ಚಿಯಲ್ಲಿ ಆಯೋಜಿಸಿದ್ದ ರಜತ ಮಹೋತ್ಸವ ಸಂಭ್ರಮದಲ್ಲಿ ಆಸ್ಪತ್ರೆ ಈ ಘೋಷಣೆಯನ್ನು ಮಾಡಿದೆ.

    ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಉಪಸ್ಥಿತಿಯೊಂದಿಗೆ ರಜತ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಕೊಚ್ಚಿಯ 1,350 ಹಾಸಿಗೆಗಳ ಅಮೃತ ಆಸ್ಪತ್ರೆಯು ತನ್ನ ರಜತ ಮಹೋತ್ಸವ ಆಚರಣೆಯ ಭಾಗವಾಗಿ ಮುಂದಿನ ಒಂದು ವರ್ಷದಲ್ಲಿ 65 ಕೋಟಿ ರೂ. ದತ್ತಿ ಆರೈಕೆಯ ಬದ್ಧತೆಯನ್ನು ಘೋಷಣೆ ಮಾಡಿದೆ. ಈಗಾಗಲೇ ಪ್ರತಿವರ್ಷ ಉಚಿತ ಚಿಕಿತ್ಸೆಗಾಗಿ 40 ಕೋಟಿ ರೂ. ಖರ್ಚು ಮಾಡುತ್ತಿರುವ ಅಮೃತ ಆಸ್ಪತ್ರೆ, 25 ವರ್ಷಗಳು ಪೂರ್ಣಗೊಂಡ ಈ ಸಂದರ್ಭದಲ್ಲಿ ಉಚಿತ ಚಿಕಿತ್ಸೆಗೆಂದು ಹೆಚ್ಚುವರಿಯಾಗಿ 25 ಕೋಟಿ ರೂ. ಮೀಸಲಿರಿಸಿದೆ.

    ತಿಂಗಳಿಗೆ 240 ಹೆರಿಗೆಗಳೂ ಉಚಿತ: ಮಕ್ಕಳ ಹೃದ್ರೋಗ, ಮೂತ್ರಪಿಂಡ ಕಸಿ, ಮೊಣಕಾಲು ಬದಲಿ, ಅಸ್ಥಿಮಜ್ಜೆ ಕಸಿ, ಮಕ್ಕಳ ಪಿತ್ತಜನಕಾಂಗ ಕಸಿ ಮತ್ತು ಉಚಿತ ನಾರಿನ ಸ್ಕ್ಯಾನ್ ಸೇರಿದಂತೆ ಹಲವಾರು ವೈದ್ಯಕೀಯ ಸೇವೆಗಳನ್ನು ಈ ಖರ್ಚಿನಲ್ಲಿ ನೀಡಲಾಗುವುದು. ಅಲ್ಲದೆ ಅಮೃತ ಆಸ್ಪತ್ರೆಯು ಮುಂದಿನ ಒಂದು ವರ್ಷದಲ್ಲಿ ತಿಂಗಳಿಗೆ 240 ಹೆರಿಗೆಗಳನ್ನು ಕೂಡ ಉಚಿತವಾಗಿ ನಡೆಸಲಿದೆ ಎಂದು ಆಸ್ಪತ್ರೆ ಘೋಷಿಸಿದೆ.

    59 ಲಕ್ಷ ರೋಗಿಗಳಿಗೆ ಉಚಿತ/ಸಬ್ಸಿಡಿ ಚಿಕಿತ್ಸೆ: 1998ರಲ್ಲಿ ಸ್ಥಾಪನೆ ಆದಾಗಿನಿಂದ ಅಮೃತ ಆಸ್ಪತ್ರೆಯು ಜನರಿಗೆ ಉಚಿತ ವೈದ್ಯಕೀಯ ಆರೈಕೆ ಒದಗಿಸಲು 816 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದೆ. ಆಸ್ಪತ್ರೆಯಲ್ಲಿ ಈವರೆಗೆ ಚಿಕಿತ್ಸೆ ಪಡೆದ 1.96 ಕೋಟಿ ರೋಗಿಗಳಲ್ಲಿ, 59 ಲಕ್ಷ ರೋಗಿಗಳಿಗೆ ಉಚಿತ ಅಥವಾ ಸಬ್ಸಿಡಿ ಚಿಕಿತ್ಸೆ ನೀಡಲಾಗಿದೆ ಎಂದೂ ತಿಳಿಸಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಗೃಹಸಚಿವ ಅಮಿತ್ ಷಾ, ಬಡವರ ಸೇವೆ ಮತ್ತು ಜನಸಾಮಾನ್ಯರ ಆಧ್ಯಾತ್ಮಿಕ ಉನ್ನತಿಗಾಗಿ ಮಾತಾ ಅಮೃತಾನಂದಮಯಿ ಅವರ ಕೊಡುಗೆಯನ್ನು ಉಲ್ಲೇಖಿಸಿದರು. ನಾನು ಅಮ್ಮನನ್ನು ಭೇಟಿಯಾದಾಗಲೆಲ್ಲ ಹೊಸ ಶಕ್ತಿ, ಪ್ರಜ್ಞೆ ಮತ್ತು ಚೈತನ್ಯದಿಂದ ಹಿಂದಿರುಗುತ್ತೇನೆ ಎಂದರು. ಗುಜರಾತ್​ನಲ್ಲಿ 2001ರ ಭೂಕಂಪದ ಬಳಿಕ ಅಮ್ಮ ಅವರ ಆಶ್ರಮವು 1200 ಮನೆಗಳನ್ನು ನಿರ್ಮಿಸಿತು. ಆ ಗ್ರಾಮಗಳನ್ನು ಸ್ಥಳೀಯವಾಗಿ ಅಮ್ಮನ ಹಳ್ಳಿಗಳು ಎಂದು ಕರೆಯಲಾಗುತ್ತದೆ. ಅಗತ್ಯದ ಸಮಯದಲ್ಲಿ ಅವರು ನೀಡಿದ ಸಹಾಯಕ್ಕಾಗಿ ಜನರು ಕೃತಜ್ಞತೆ ತೋರುತ್ತಿದ್ದಾರೆ ಎಂದೂ ಅಮಿತ್ ಷಾ ಹೇಳಿದರು.
    ಅಮೃತ ವಿಶ್ವವಿದ್ಯಾಪೀಠಂನ ಅಮೃತಪುರಿ (ಕೊಲ್ಲಂ) ಕ್ಯಾಂಪಸ್​ನಲ್ಲಿನ ಅತ್ಯಾಧುನಿಕ ಸಂಶೋಧನಾ ಕೇಂದ್ರ ಮತ್ತು ಕೊಚ್ಚಿಯ ಅಮೃತ ಆಸ್ಪತ್ರೆಯ ಪಕ್ಕದಲ್ಲಿರುವ ಮತ್ತೊಂದು ಸಂಶೋಧನಾ ಸೌಲಭ್ಯವನ್ನು ಅಮಿತ್ ಷಾ ಆನ್​ಲೈನ್​ ಮೂಲಕ ಉದ್ಘಾಟಿಸಿದರು.

    ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ
    ಗೃಹಸಚಿವ ಅಮಿತ್ ಷಾ ಅವರಿಗೆ ಮಾತಾ ಅಮೃತಾನಂದಮಯಿ ಮಠದ ಉಪಾಧ್ಯಕ್ಷ ಮತ್ತು ಅಮೃತ ವಿಶ್ವವಿದ್ಯಾಪೀಠದ ಉಪಾಧ್ಯಕ್ಷ ಸ್ವಾಮಿ ಅಮೃತಸ್ವರೂಪಾನಂದ ಪುರಿ ಅವರಿಂದ ಸ್ಮರಣಿಕೆ

    ಕಳೆದ 9 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಮೂಲಸೌಕರ್ಯ ಗಣನೀಯವಾಗಿ ಸುಧಾರಿಸಿದೆ. 2013-14ರಲ್ಲಿ ಭಾರತದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. ಇದೇ ಅವಧಿಯಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 51,000ದಿಂದ 99,000ಕ್ಕೆ ಮತ್ತು ಪಿಜಿ ಸೀಟುಗಳ ಸಂಖ್ಯೆ 31,000ದಿಂದ 64,000ಕ್ಕೆ ಏರಿದೆ. ಅಲ್ಲದೆ, ದೇಶಾದ್ಯಂತ 22 ಹೊಸ ಏಮ್ಸ್​​ಗಳನ್ನು ತೆರೆಯಲಾಗಿದೆ. ಕರೊನಾ ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರವು 130 ಕೋಟಿ ಭಾರತೀಯರಿಗೆ ಸ್ವದೇಶಿ ಲಸಿಕೆ ನೀಡಿದ್ದನ್ನು ಜಗತ್ತು ವಿಸ್ಮಯದಿಂದ ನೋಡಿದೆ ಎಂದು ಅಮಿತ್ ಷಾ ಹೇಳಿದರು.

    ಅಮೃತ ಆಸ್ಪತ್ರೆ ಆಶ್ರಯ, ಸಾಂತ್ವನ, ಭರವಸೆಯ ಸ್ಥಳ

    ಈ ಆಸ್ಪತ್ರೆ ಪ್ರಾರಂಭವಾಗಿ 25 ವರ್ಷಗಳಾಗಿವೆ. ಈ ಅವಧಿಯಲ್ಲಿ ವೈದ್ಯರು, ದಾದಿಯರು ಮತ್ತು ಇತರ ಎಲ್ಲರೂ ಪ್ರಾಮಾಣಿಕವಾಗಿ ಮತ್ತು ಸಂಪೂರ್ಣ ಸಮರ್ಪಣೆಯಿಂದ ಸೇವೆ ಸಲ್ಲಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆ ತಿಳಿಸಲು ಪದಗಳು ಸಾಲುವುದಿಲ್ಲ. ರೋಗವು ತೀವ್ರ ದುಃಖದ ಸ್ಥಿತಿ ತರುತ್ತದೆ. ರೋಗಿಗಳನ್ನು ಅತ್ಯಂತ ತಾಳ್ಮೆ-ಪ್ರೀತಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಈ ಆಸ್ಪತ್ರೆ ಅಂಥ ರೋಗಿಗಳ ಆಶ್ರಯ, ಸಾಂತ್ವನ ಮತ್ತು ಭರವಸೆಯ ಸ್ಥಳವಾಗಿದೆ ಎಂದು ಶ್ರೀ ಮಾತಾ ಅಮೃತಾನಂದಮಯಿ (ಅಮ್ಮ) ಅವರು ವಿಡಿಯೋ ಮೂಲಕ ತಮ್ಮ ಸಂದೇಶ ತಿಳಿಸಿದರು.

    5 ಕೋಟಿ ಮಂದಿಗೆ ಚಿಕಿತ್ಸೆ ಗುರಿ: ಅಮೃತ ಆಸ್ಪತ್ರೆಯು ಇಲ್ಲಿಯವರೆಗೆ 1.96 ಕೋಟಿ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ಇದನ್ನು 5 ಕೋಟಿಗೆ ತಲುಪುವುದು ನಮ್ಮ ಗುರಿ ಎಂದು ಮಾತಾ ಅಮೃತಾನಂದಮಯಿ ಮಠದ ಉಪಾಧ್ಯಕ್ಷ ಮತ್ತು ಅಮೃತ ವಿಶ್ವವಿದ್ಯಾಪೀಠದ ಉಪಾಧ್ಯಕ್ಷ ಸ್ವಾಮಿ ಅಮೃತಸ್ವರೂಪಾನಂದ ಪುರಿ ಹೇಳಿದರು. ಆರೋಗ್ಯ ರಕ್ಷಣೆ ವಿಚಾರದಲ್ಲಿ ಆರ್ಥಿಕ ಮುಗ್ಗಟ್ಟು ಅಡ್ಡಿ ಆಗಬಾರದು ಎಂಬುದು ನಮ್ಮ ಧ್ಯೇಯ ಎಂದೂ ಅವರು ತಿಳಿಸಿದರು.

    ಅಸಾಧ್ಯವಾದುದನ್ನು ಸಾಧಿಸಲು 25 ವರ್ಷಗಳ ಕಾಲ ನಮ್ಮನ್ನು ಮುನ್ನಡೆಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಅಮೃತ ಆಸ್ಪತ್ರೆಯ ಸಮೂಹ ವೈದ್ಯಕೀಯ ನಿರ್ದೇಶಕ ಡಾ.ಪ್ರೇಮ್ ನಾಯರ್ ಹೇಳಿದರು.

    ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೃಷಿ ಸಚಿವ ಪಿ. ಪ್ರಸಾದ್, ಎರ್ನಾಕುಲಂ ಸಂಸದ ಹಿಬಿ ಈಡನ್, ಕೊಚ್ಚಿ ಮೇಯರ್ ಎಂ. ಅನಿಲ್ ಕುಮಾರ್, ಶಾಸಕ ಟಿ.ಜೆ.ವಿನೋದ್ ಮತ್ತಿತರ ಗಣ್ಯರು ರಜತ ಮಹೋತ್ಸವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ
    ಕೊಚ್ಚಿಯಲ್ಲಿ ಅಮೃತ ಆಸ್ಪತ್ರೆಯ ರಜತ ಮಹೋತ್ಸವ ಆಚರಣೆ

    1998ರಲ್ಲಿ ವಾಜಪೇಯಿ ಅವರಿಂದ ಉದ್ಘಾಟನೆ

    ಕೊಚ್ಚಿಯ ಅಮೃತ ಆಸ್ಪತ್ರೆಯನ್ನು 1998ರ ಮೇ 17ರಂದು ಅಟಲ್ ಬಿಹಾರಿ ವಾಜಪೇಯಿ ಅವರು ಉದ್ಘಾಟಿಸಿದ್ದರು. ಅಂದು 125 ಹಾಸಿಗೆಗಳಿಂದ ಪ್ರಾರಂಭವಾದ ಅಮೃತ ಆಸ್ಪತ್ರೆ ಈಗ 1350 ಹಾಸಿಗೆಗಳ ಅತ್ಯಂತ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಭಾರತದಲ್ಲೇ ಮೊದಲ ಬಾರಿಗೆ ಹ್ಯಾಂಡ್​ ಟ್ರಾನ್ಸ್​​​ಪ್ಲಾಂಟೇಷನ್​​, ಮೈಕ್ರೋ ಬ್ಲಡ್ ಸ್ಟೆಮ್​ಸೆಲ್ ಟ್ರಾನ್ಸ್​ಪ್ಲಾಂಟೇಷನ್ ನಡೆಸಿರುವ ಖ್ಯಾತಿಗೆ ಒಳಗಾಗಿರುವ ಈ ಆಸ್ಪತ್ರೆ, ಅತ್ಯಧಿಕ ರೋಬೋಟಿಕ್ ಪಿತ್ತಜನಕಾಂಗ ಕಸಿ ಮಾಡಿದ ಭಾರತದ ಮೊದಲ ಆಸ್ಪತ್ರೆ ಮತ್ತು ಭಾರತದ ಮೊದಲ 3ಡಿ ಪ್ರಿಂಟಿಂಗ್ ಲ್ಯಾಬ್ ಹೊಂದಿದ ಮೊದಲ ಆಸ್ಪತ್ರೆ ಎಂಬ ಪ್ರಸಿದ್ಧಿಯನ್ನೂ ಪಡೆದಿದೆ.

    ಶಾಪಿಂಗ್​ಗೆ ಹೋಗುವಾಗ ಪ್ರಾಣ ಕಳ್ಕೊಂಡ ಮಹಿಳೆ; ಪತಿ-ಪುತ್ರಿಯ ಕಣ್ಣೆದುರೇ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts