ಭ್ರಷ್ಟರಿಗೆ 'ಕರೊನಾ ಶಾಕ್'?: ಶೀಘ್ರವೇ ಕೋವಿಡ್​ ಅವಧಿಯ ಟೆಂಡರ್​ಗಳ ಮರು ಪರಿಶೀಲನೆ

Corona (1)
Published on

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಕರೊನಾ ಕಾಲದಲ್ಲಿನ ಕೆಲವು ಸಂಗತಿಗಳು ಭ್ರಷ್ಟರಿಗೆ ಆಘಾತಕಾರಿ ಆಗಿ ಪರಿಣಮಿಸುವ ಸಾಧ್ಯತೆಗಳು ಗೋಚರಿಸಿವೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ನಿಟ್ಟಿನಲ್ಲಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯಿಂದ ಆಗಲಿರುವ ಕೆಲವು ಮಹತ್ವದ ತನಿಖೆಗಳ ಕುರಿತು ಮಾಹಿತಿ ಬಹಿರಂಗಪಡಿಸಿದರು.

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಮುಂದಾದ ಸರ್ಕಾರ ಇದನ್ನು ಎರಡು ಇಲಾಖೆಗಳ ಸಮನ್ವಯದಲ್ಲಿ ನಡೆಸಲು ನಿರ್ಧರಿಸಿದೆ. ಪ್ರಕರಣ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವುದರಿಂದ ಎರಡೂ ಇಲಾಖೆಗಳ ಸಮನ್ವಯದಲ್ಲಿ ತನಿಖೆ ನಡೆಯಲಿದೆ. ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿದ್ದರೂ ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ ನಾವು ಮರು ತನಿಖೆಗೆ ಮುಂದಾಗಿದ್ದು, ಆ ಕುರಿತ ವಿಸ್ತೃತ ಕಾರ್ಯ ಯೋಜನೆ ಕೂಡ ಸಿದ್ಧವಾಗಿದೆ ಎಂದರು.

ಅಲ್ಲದೆ ಕೋವಿಡ್ ಅವಧಿಯ ಟೆಂಡರ್​ಗಳ ಮರು ಪರಿಶೀಲನೆಯನ್ನೂ ಮಾಡಲಾಗುವುದು. ಹೆಚ್ಚು ಬಿಡ್​ ಮಾಡಿರುವ ಹಾಗೂ ಅನುಮಾನ ಮೂಡಿಸುವಂಥ ಕೆಲವು ಟೆಂಡರ್​ಗಳನ್ನು ಮರು ಪರಿಶೀಲನೆಗೆ ಒಳಪಡಿಸಲಾಗುವುದು ಎಂದೂ ದಿನೇಶ್ ಗುಂಡೂರಾವ್ ತಿಳಿಸಿದರು. ಜಿವಿಕೆ ಸಂಸ್ಥೆ ಮೇಲೆ ಆರೋಪ ಬಂದಿರುವುದರಿಂದ 108 ಆ್ಯಂಬುಲೆನ್ಸ್​​ ಮತ್ತು ಡಯಾಲಿಸಿಸ್ ಸೆಂಟರ್​ ಬಗ್ಗೆಯೂ ಮರು ಟೆಂಡರ್​ ಕರೆಯಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net