

ಚೆನ್ನೈ: ಇಡಿಯಿಂದ ಬಂಧನಕ್ಕೆ ಒಳಗಾಗಿರುವ ತಮಿಳುನಾಡು ಡಿಎಂಕೆ ಪಕ್ಷದ ನಾಯಕ ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯಪಾಲ ಆರ್.ಎನ್. ರವಿ ಅವರು ಸಚಿವ ಸ್ಥಾನದಿಂದ ವಜಾಗೊಳಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯದ ಸಲಹೆ ಮೇರೆಗೆ ತಮ್ಮ ಆದೇಶವನ್ನು ತಡೆಹಿಡಿದಿದ್ದು, ರಾಜ್ಯಪಾಲ ನಾಟಕೀಯ ಕ್ರಮ ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು ತಮ್ಮ ಆದೇಶವನ್ನು ತಡೆಹಿಡಿದಿರುವುದಾಗಿ ತಿಳಿಸಿದ್ದಾರೆ. ವಜಾಗೊಳಿಸುವ ಮುನ್ನ ಅಟಾರ್ನಿ ಜನರಲ್ ಅವರಿಂದ ಕಾನೂನು ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಗೃಹ ಸಚಿವಾಲಯ ಸಲಹೆ ನಿಡಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 14ರಂದು ಬಾಲಾಜಿ ಅವರ ಬಂಧನವಾದಾಗಿನಿಂದ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕದೇ ಖಾತೆಯನ್ನು ಮಾತ್ರ ಹಿಂಪಡೆದು ಕೇವಲ ಸಚಿವರಾಗಿ ಡಿಎಂಕೆ ಸರ್ಕಾರ ಉಳಿಸಿಕೊಂಡಿದೆ. ಬಾಲಾಜಿ ಅವರಿಗೆ ನೀಡಲಾಗಿದ್ದ ಇಂಧನ ಖಾತೆಯನ್ನು ಹಣಕಾಸು ಸಚಿವ ತಂಗಂ ತೆನ್ನರಸು ಅವರಿಗೆ ಮತ್ತು ಅಬಕಾರಿ ಖಾತೆಯನ್ನು ವಸತಿ ಸಚಿವ ಮುತ್ತುಸಾಮಿ ಅವರಿಗೆ ಹಂಚಲಾಗಿದೆ.
ಅಟಾರ್ನಿ ಜನರಲ್ ಅವರ ಕಾನೂನು ಅಭಿಪ್ರಾಯ ಬರುವವರೆಗೂ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಮೊದಲು ರಾಜ್ಯಪಾಲರು ಬಾಲಾಜಿ ಅವರನ್ನು ವಜಾಗೊಳಿಸಿ ಆದೇಶಿಸಿದ್ದರು. ಗುರುವಾರ ರಾಜಭವನ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ, ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸುವುದರಿಂದ ನ್ಯಾಯಯುತ ತನಿಖೆ ಸೇರಿದಂತೆ ಕಾನೂನಿನ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಉಲ್ಲೇಖಿಸಲಾಗಿತ್ತು.
ಬಾಲಾಜಿ ಅವರ ವಿರುದ್ಧ ಉದ್ಯೋಗ ನೀಡಲು ಲಂಚ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಿವೆ. ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಕಾನೂನು ಹಾಗೂ ನ್ಯಾಯದ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ರಾಜ್ಯಪಾಲರು ಪ್ರಕಟಣೆಯಲ್ಲಿ ತಿಳಿಸಿ, ಬಾಲಾಜಿ ಅವರನ್ನು ವಜಾಗೊಳಿಸಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವಾಲಯ ಸಲಹೆ ನೀಡಿದ ಬೆನ್ನಲ್ಲೇ ರಾಜ್ಯಪಾಲರು ಆದೇಶವನ್ನು ಹಿಂಪಡೆದಿದ್ದಾರೆ.
ರಾಜ್ಯಪಾಲರ ನಾಟಕೀಯ ಕ್ರಮಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, ಸಚಿವರನ್ನು ಸಂಪುಟದಿಂದ ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಮತ್ತು ಡಿಎಂಕೆ ಸರ್ಕಾರವು ಈ ನಿರ್ಧಾರವನ್ನು ಕಾನೂನುಬದ್ಧವಾಗಿ ಪ್ರಶ್ನಿಸಲಿದೆ ಎಂದು ಹೇಳಿದ್ದರು. ಇದೀಗ ವಜಾ ಆದೇಶವನ್ನು ರಾಜ್ಯಪಾಲರೇ ತಡೆಹಿಡಿದಿದ್ದಾರೆ. (ಏಜೆನ್ಸೀಸ್)