ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ಹುಟ್ಟಿಕೊಂಡಿವೆ ನಕಲಿ ಆ್ಯಪ್​ಗಳು: ಯಾಮಾರಿದ್ರೆ ಬ್ಯಾಂಕ್​ ಖಾತೆಗೆ ಕನ್ನ

Gruhalakshmi yojana
Published on

ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಇನ್ನು ಅಧಿಕೃತವಾಗಿ ಜಾರಿಯಾಗಿಲ್ಲ. ಅಷ್ಟರಲ್ಲೇ ಈ ಯೋಜನೆ ಹೆಸರಿನಲ್ಲಿ ಹಲವು ನಕಲಿ ಆ್ಯಪ್​ಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಸಾರ್ವಜನಿಕರು ತುಂಬಾ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಒಂದು ವೇಳೆ ಗೊತ್ತಿಲ್ಲದೆ, ಈ ಆ್ಯಪ್​ಗಳನ್ನು ಡೌನ್‌ಲೋಡ್ ಮಾಡಿದರೆ ನಿಮ್ಮ ಬ್ಯಾಂಕ್​ ಖಾತೆಗೆ ಸೈಬರ್​ ಖದೀಮರು ಕನ್ನ ಹಾಕಲಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಬ್ಯಾಂಕ್​ ಖಾತೆಯ ವಿವರವನ್ನು ಮುಖ್ಯವಾಗಿ ಕೊಡಬೇಕಾಗಿದೆ. ಹೀಗಾಗಿ ನಕಲಿ ಆ್ಯಪ್​ ಸೃಷ್ಟಿ ಮಾಡಿರುವ ಸೈಬರ್​ ಕಿರಾತಕರಿಗೆ ಬ್ಯಾಂಕ್​ ಖಾತೆಗಳೇ ಮೊದಲ ಟಾರ್ಗೆಟ್ ಆಗಿವೆ.

ಯಾಮಾರಿದ್ರೆ ಖಾತೆಗೆ ಕನ್ನ

ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಭರದಲ್ಲಿ ನಕಲಿ ಆ್ಯಪ್​ಗಳನ್ನು ಡೌನ್‌ಲೋಡ್ ಮಾಡಿದರೆ ನಿಮಗೆ ಸಂಕಷ್ಟ ಖಚಿತ. ನಿಮ್ಮ ಬ್ಯಾಂಕ್ ಅಕೌಂಟ್​ಗೆ ನಿಮಗೇ ಗೊತ್ತಿಲ್ಲದೆ ಎಂಟ್ರಿ ಕೊಡುವ ಖದೀಮರು ಹಣ ಎಗರಿಸುವ ಸಾಧ್ಯತೆ ತುಂಬಾ ದಟ್ಟವಾಗಿದೆ.

ಐದಾರು ನಕಲಿ ಆ್ಯಪ್​ಗಳು

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅಪ್ಲೀಕೇಶನ್‌ಗೆ ಸರ್ಕಾರ ಅಸ್ತು ಎಂದಿದೆ. ಇದರ ಬೆನ್ನಲೆ ಪ್ಲೇ ಸ್ಟೋರ್​ನಲ್ಲಿ ನಕಲಿ ಆ್ಯಪ್​ಗಳ ಹಾವಳಿ ಹೆಚ್ಚಾಗಿದೆ. ಗೃಹಲಕ್ಷ್ಮಿ ಹೆಸರಿನ ಐದಾರು ನಕಲಿ ಆ್ಯಪ್​ಗಳು ಸೃಷ್ಟಿಯಾಗಿವೆ. ನೋಡೋಕೇ ಥೇಟ್ ಸರ್ಕಾರ ಸಿದ್ಧಪಡಿಸಿರುವ ಆ್ಯಪ್ ರೀತಿಯಲ್ಲೇ ನಕಲಿ ಆ್ಯಪ್‌ಗಳು ಇವೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಇನ್ನೂ ಜಾರಿಯಾಗಿಲ್ಲ

ಅಂದಹಾಗೆ ಗೃಹಲಕ್ಷ್ಮೀ ಯೋಜನೆಯು ಮನೆ ಯಜಮಾನಿಗೆ 2,000 ಸಹಾಯ ಧನ ನೀಡುವ ಯೋಜನೆ ಆಗಿದೆ. ವಂಚನೆಯನ್ನು ತಪ್ಪಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸುಲಭಗೊಳಿಸಲು ಸರ್ಕಾರ ಆ್ಯಪ್​ ಸಿದ್ಧಪಡಿಸಿದೆ. ಆದರೆ, ಈವರೆಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿಲ್ಲ. ಯಾವುದೇ ಸರ್ಕಾರಿ ವೆಬ್‌ಸೈಟ್‌ನಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net