

Indian Rupee : ಪ್ರಸಕ್ತ 2025-26ರ ರಾಜ್ಯ ಬಜೆಟ್ನಲ್ಲಿ ತಮಿಳುನಾಡು ಸರ್ಕಾರ ಹಿಂದಿಯಲ್ಲಿರುವ ₹ ಚಿಹ್ನೆಯನ್ನು ಕೈಬಿಟ್ಟು, ತಮಿಳುನಾಡಿನ (TN) ಆಡಳಿತ ಭಾಷೆ ರೂ. ಅಕ್ಷರವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಮತ್ತೊಮ್ಮೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿತು. ಈ ವಿಷಯವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಜನತೆಗೆ ಟ್ವೀಟ್ ಮಾಡಿ ಬಹಿರಂಗಪಡಿಸಿದ್ದೇ ತಡ ಇದು ವಿವಾದಕ್ಕೆ ಕಾರಣವಾಗಿದೆ.
ಭಾರತೀಯ ಚಿಹ್ನೆಯನ್ನು ತಮಿಳಿನ ರೂ. ಅಕ್ಷರದಿಂದ ಬದಲಿಸಿದ ಎಂ.ಕೆ. ಸ್ಟಾಲಿನ್ ಸರ್ಕಾರ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ವಿರೋಧಿಸಿದೆ. ತ್ರಿಭಾಷಾ ಸೂತ್ರವನ್ನು ಹೇರುವ ಪ್ರಯತ್ನದಲ್ಲಿರುವ ಕೇಂದ್ರದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ಎನ್ಇಪಿಯನ್ನು ಜಾರಿಗೊಳಿಸುವುದಿಲ್ಲ. 10 ಕೋಟಿ ರೂ. ಹಣ ಕೊಟ್ಟರೂ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರ ಜಾರಿಯಾಗುವುದಿಲ್ಲ ಎಂದು ಕೇಂದ್ರಕ್ಕೆ ತಿರುಗೇಟು ನೀಡಿದ್ದರು. ಸದ್ಯ ಇದೊಂದು ಭಾಷಾ ಸಮರಕ್ಕೆ ತಿರುಗಿದೆ.
ತಮಿಳುನಾಡಿನ ರಾಜ್ಯ ಬಜೆಟ್ ಮಂಡನೆಗೂ ಮುನ್ನ ಭಾರತೀಯ ಚಿಹ್ನೆಯನ್ನು ರೂ. ಅಕ್ಷರದಿಂದ ಬದಲಿಸಿದ ತಮಿಳುನಾಡು ಸರ್ಕಾರ, ಈ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ. ಸ್ಟಾಲಿನ್ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ ನಾಯಕರು, ಭಾರತೀಯ ರೂಪಾಯಿ ಚಿಹ್ನೆಯನ್ನೇ ಅದಲು-ಬದಲು ಮಾಡಿದ ತಮಿಳುನಾಡು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿವಾದಕ್ಕೆ ಕಾರಣವಾಗಿರುವ ಈ ಚಿಹ್ನೆಯನ್ನು ಅಸಲಿಗೆ ವಿನ್ಯಾಸಗೊಳಿಸಿದ್ದೇ ಓರ್ವ ತಮಿಳಿಗ ಎಂಬ ಸಂಗತಿ ಸದ್ಯ ಹಲವರ ಹುಬ್ಬೇರಿಸಿದೆ.
ಸಿಎಂ ಸ್ಟಾಲಿನ್ ವಿವಾದಾತ್ಮಕ ನಡೆಗೆ ಬಿಜೆಪಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವರದಿಗಳ ಪ್ರಕಾರ, ಪ್ರಸ್ತುತ ಕೈಬಿಡಲಾದ ರೂಪಾಯಿ ಚಿಹ್ನೆಯನ್ನು ತಮಿಳಿಗ ಡಿ. ಉದಯ ಕುಮಾರ್ ವಿನ್ಯಾಸಗೊಳಿಸಿದ್ದಾರೆ. ಇದು ಬಹುತೇಕರಿಗೆ ತಿಳಿದೇ ಇಲ್ಲ. ಅಸಲಿಗೆ ಯಾರೀ ಉದಯ್ ಕುಮಾರ್? ಇವರು ಎಲ್ಲಿಯವರು? ಈಗ ಮಾಡುತ್ತಿರುವ ಕೆಲಸವೇನು? ಎಂಬ ಹಲವು ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.
ಪ್ರಸ್ತುತ ಐಐಟಿ ಗುವಾಹಟಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಿ. ಉದಯ ಕುಮಾರ್, 2010ರಲ್ಲಿ ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಭಾರತೀಯ ರೂ. ಚಿಹ್ನೆಯನ್ನು ವಿನ್ಯಾಸಗೊಳಿಸಿದರು. ತಮಿಳುನಾಡಿನ ಋಷಿವಂಡಿಯಂ ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಡಿಎಂಕೆ ಶಾಸಕ ಎನ್. ಧರ್ಮಲಿಂಗಂ ಅವರ ಪುತ್ರ ಉದಯ ಕುಮಾರ್ ಎಂಬುದು ಇಲ್ಲಿ ಗಮನಾರ್ಹ.
ದೇಶಾದ್ಯಂತ ಸಲ್ಲಿಸಲಾದ 3,000 ಡಿಸೈನ್ಗಳ ಪೈಕಿ ಕುಮಾರ್ ನೀಡಿದ್ದ ಡಿಸೈನ್ ಅನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿತು. ಈ ಡಿಸೈನ್ಗಾಗಿ ಅವರಿಗೆ 2.5 ಲಕ್ಷ ರೂ. ಬಹುಮಾನವನ್ನೂ ನೀಡಲಾಯಿತು. ರೂಪಾಯಿ ಚಿಹ್ನೆಯು ಭಾರತೀಯ ಮತ್ತು ರೋಮನ್ ಅಕ್ಷರಗಳ ಮಿಶ್ರಣವಾಗಿದೆ. ದೊಡ್ಡಕ್ಷರ 'R' ಮತ್ತು ರೂಪಾಯಿ ಪ್ರತಿನಿಧಿಸುವ ದೇವನಾಗರಿ 'ರಾ'. ಇದು ಮೇಲ್ಭಾಗದಲ್ಲಿ ಎರಡು ಅಡ್ಡ ಪಟ್ಟೆಗಳನ್ನು ಹೊಂದಿದ್ದು, ರಾಷ್ಟ್ರಧ್ವಜ ಮತ್ತು "ಸಮಾನ" ಚಿಹ್ನೆಯನ್ನು ಸಂಕೇತಿಸುತ್ತದೆ.
ಕೇಂದ್ರ ಸರ್ಕಾರ ಜುಲೈ 15, 2010ರಂದು ಅಧಿಕೃತವಾಗಿ ರೂಪಾಯಿ ಚಿಹ್ನೆಯನ್ನು ಅಳವಡಿಸಿಕೊಂಡಿತು. ಪ್ರಸ್ತುತ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವಿನ ಭಾಷಾ ವಿವಾದ ಹಾಗೂ ಚಿಹ್ನೆ ಅದಲು-ಬದಲು ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರ್, "ನನ್ನ ಡಿಸೈನ್ ಬಗ್ಗೆ ನನಗೆ ಹೆಮ್ಮೆಯಿದೆ. ಒಬ್ಬ ವಿನ್ಯಾಸಕನು ತನ್ನ ಕೆಲಸದಲ್ಲಿ ಇಂತಹ ಅನೇಕ ಸವಾಲುಗಳನ್ನು ಎದುರಿಸಲು ಸಿದ್ಧನಾಗಿರಬೇಕು. ಹೀಗಾಗಿ ರಾಜ್ಯ ಸರ್ಕಾರದ ಈ ನಿರ್ಧಾರವು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಹೇಳಿದರು.
"ನಾವು ಮಾಡಿದ್ದೆಲ್ಲ ಯಶಸ್ವಿಯಾಗಲ್ಲ ಅಥವಾ ಮೆಚ್ಚುಗೆ ಗಳಿಸುವುದಿಲ್ಲ. ಟೀಕೆಗಳು ವ್ಯಕ್ತವಾಗಬಹುದು. ಒಬ್ಬ ಡಿಸೈನರ್ ಆದ ಮೇಲೆ ನೀವು ಯಾವಾಗಲೂ ಮೆಚ್ಚುಗೆ ಮತ್ತು ಟೀಕೆ ಎರಡನ್ನೂ ಸಮನಾಗಿ ಸ್ವೀಕರಿಸುವುದನ್ನು ಕಲಿಯಬೇಕು. ಇಲ್ಲಿ ಕಲಿಯಬೇಕು ಮತ್ತು ಮುಂದುವರಿಯುತ್ತಿರಬೇಕು. ಈ ನಡೆ ಅಗೌರವ ಅಥವಾ ನನ್ನ ಕೆಲಸದ ನಿರ್ಲಕ್ಷ್ಯವೆಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದರು,(ಏಜೆನ್ಸೀಸ್).