

Delhi Capitals : ಎಲ್ಲರ ಊಹೆ ನಿಜವಾಗಿದ್ದು, ಟೀಮ್ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಅಧಿಕೃತ ವೆಬ್ಸೈಟ್ ಮೂಲಕ ಅಕ್ಷರ್ ಪಟೇಲ್ ಅವರನ್ನು ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಿರುವುದಾಗಿ ಇಂದು (ಮಾ.14) ಘೋಷಿಸಿದೆ. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.
ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಪಂತ್, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದರಿಂದ ಡೆಲ್ಲಿ ತಂಡದ ನಾಯಕ ಯಾರಾಗುತ್ತಾರೆ ಎಂಬ ಸಹಜ ಪ್ರಶ್ನೆ ಇತ್ತು. ಆರಂಭದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಹೆಸರು ಕೇಳಿಬಂದಿತ್ತು. ಆದರೆ, ನಾಯಕತ್ವ ವಹಿಸಿಕೊಳ್ಳಲು ರಾಹುಲ್ ಒಲವು ತೋರಲಿಲ್ಲ. ಇದರ ನಡುವೆ ಅಕ್ಷರ್ ಪಟೇಲ್ ಹೆಸರು ಸಹ ಕೇಳಿಬಂತು. ಅಂತಿಮವಾಗಿ ಅಕ್ಷರ್ಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದ ಬಗ್ಗೆ ಅಕ್ಷರ್ ಪಟೇಲ್ ಪ್ರತಿಕ್ರಿಯಿಸಿದ್ದು, ತಂಡದ ನಾಯಕನಾಗಿ ಆಯ್ಕೆಯಾಗಿರುವುದು ದೊಡ್ಡ ಗೌರವ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಫ್ರಾಂಚೈಸ್ ಮ್ಯಾನೇಜ್ಮೆಂಟ್ ಮತ್ತು ಸಹಾಯಕ ಸಿಬ್ಬಂದಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಕ್ರಿಕೆಟಿಗನಾಗಿ ಮತ್ತು ದೆಹಲಿ ತಂಡದಲ್ಲಿ ಓರ್ವ ಉತ್ತಮ ವ್ಯಕ್ತಿಯಾಗಿ ಬೆಳೆದಿದ್ದೇನೆ. ದೆಹಲಿ ತಂಡವನ್ನು ಮುನ್ನಡೆಸಲು ನಾನು ಸಿದ್ಧನಿದ್ದೇನೆ ಎಂದು ಅಕ್ಷರ್ ಹೇಳಿದ್ದಾರೆ.
ನಮ್ಮ ಫ್ರಾಂಚೈಸಿ, ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ. ಸಮತೋಲಿತ ಮತ್ತು ಬಲವಾದ ತಂಡವನ್ನು ಕಟ್ಟಿದ್ದಾರೆ. ದೆಹಲಿ ತಂಡದಲ್ಲಿ ಅನೇಕ ನಾಯಕರಿರುವುದು ನನಗೆ ತುಂಬಾ ಉಪಯುಕ್ತವಾಗಿರಲಿದೆ. ತಂಡವನ್ನು ಸೇರಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಅಕ್ಷರ್ ಹೇಳಿದರು.
ಅಂದಹಾಗೆ ಅಕ್ಷರ್ ಪಟೇಲ್ ಅವರು ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಾವುದೇ ನಾಯಕತ್ವ ಅನುಭವ ಹೊಂದಿಲ್ಲ. ಆದಾಗ್ಯೂ, ಅವರು ಹಲವು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಒಟ್ಟು 150 ಐಪಿಎಲ್ ಪಂದ್ಯಗಳನ್ನು ಆಡಿರುವ ಅಕ್ಷರ್, 123 ವಿಕೆಟ್ಗಳನ್ನು ಕಬಳಿಸಿದ್ದಾರೆ ಮತ್ತು 1653 ರನ್ಗಳನ್ನು ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ಮೆಂಟ್ ಅಕ್ಷರ್ ಮೇಲಿನ ವಿಶ್ವಾಸದಿಂದ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿದೆ.
ಇತ್ತೀಚಿನ ದಿನಗಳಲ್ಲಿ ಅಕ್ಷರ್ ಪಟೇಲ್, ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 2025 ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಅಕ್ಷರ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಅಕ್ಷರ್ ಪಟೇಲ್ ಅವರನ್ನು 16.50 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತು. ನಾಯಕ, ಬೌಲರ್ ಮತ್ತು ಬ್ಯಾಟರ್ ಆಗಿ ಸರ್ವತೋಮುಖ ಪ್ರದರ್ಶನ ನೀಡಲು ಅವರು ಅಕ್ಷರ್ ಸಿದ್ಧರಾಗಿದ್ದಾರೆ. (ಏಜೆನ್ಸೀಸ್)