ವಿಶ್ವ ಕ್ರಿಕೆಟ್​ನಲ್ಲಿ ಭಾರತ ತಂಡದಿಂದ ಮಾತ್ರ ಇದು ಸಾಧ್ಯ; ಕೆ.ಎಲ್​. ರಾಹುಲ್​ ಕೊಂಡಾಡಿದ ಮಿಚೆಲ್​ ಸ್ಟಾರ್ಕ್​ | Mitchell Starc

ವಿಜಯವಾಣಿ - 2025-03-13T151235.485
Published on

Mitchell Starc: ಇತ್ತೀಚೆಗಷ್ಟೇ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್​ ವಿರುದ್ಧದ ಫೈನಲ್ ಪಂದ್ಯದಲ್ಲಿ 4 ವಿಕೆಟ್​ಗಳಿಂದ ಗೆದ್ದ ಭಾರತ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿತು. ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್​ ಗೆದ್ದಿದ್ದ ಟೀಮ್ ಇಂಡಿಯಾ, ಈ ವರ್ಷ ಕ್ಯಾಪ್ಟನ್ ರೋಹಿತ್ ಶರ್ಮ ಮುಂದಾಳತ್ವದಲ್ಲಿ ಐಸಿಸಿ ಏಕದಿನ ಚಾಂಪಿಯನ್ಸ್​ ಟ್ರೋಫಿಯನ್ನೂ ಗೆದ್ದು ಬೀಗಿತು. ಇದು ಭಾರತಕ್ಕೆ ಅಭೂತಪೂರ್ವ ಗೆಲುವನ್ನು ತಂದುಕೊಟ್ಟಿತು.

ಇನ್ನು ಭಾರತ ತಂಡವನ್ನು ಇಡೀ ದೇಶವೇ ಕೊಂಡಾಡುತ್ತಿರುವಾಗ ಇತ್ತ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಟೀಮ್ ಇಂಡಿಯಾ ಕುರಿತು ಗುಣಗಾನ ಮಾಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಚಾಂಪಿಯನ್ಸ್ ಟ್ರೋಫಿಯಿಂದ ದೂರ ಉಳಿದಿದ್ದ ಸ್ಟಾರ್ಕ್, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ಭಾರತೀಯ ಕ್ರಿಕೆಟ್ ತಂಡ ಮತ್ತು ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್. ರಾಹುಲ್​ರನ್ನು ಮೆಚ್ಚಿ ಮಾತನಾಡಿದ್ದಾರೆ.

"ಒಂದೇ ದಿನದಲ್ಲಿ ಮೂರು ಫಾರ್ಮೆಟ್​ನಲ್ಲಿಯೂ ಮೂರು ವಿಭಿನ್ನ ತಂಡಗಳನ್ನು ಆಡಿಸಬಹುದಾದ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಪ್ರಸ್ತುತ ಏಕೈಕ ತಂಡವಾಗಿ ಉಳಿದಿದೆ ಎಂದರೆ ಖಂಡಿತ ತಪ್ಪಾಗಲಾರದು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ, ಇಂಗ್ಲೆಂಡ್ ವಿರುದ್ಧ ಏಕದಿನದಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ ಭಾರತ ತಂಡ ನೀಡಿರುವ ಸ್ಪರ್ಧೆಯನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು. ವಿಶ್ವ ಕ್ರಿಕೆಟ್‌ನಲ್ಲಿ ಭಾರತವನ್ನು ಹೊರತುಪಡಿಸಿದರೆ ಯಾವುದೇ ದೇಶವು ಒಂದೇ ದಿನದಲ್ಲಿ ಮೂರು ವಿಭಿನ್ನ ತಂಡಗಳನ್ನು ಆಡಿಸುವ ಸಾಮರ್ಥ್ಯ ಹೊಂದಿಲ್ಲ" ಎಂದು ಹೇಳಿದರು.

"ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆ.ಎಲ್​. ರಾಹುಲ್ ಅವರ ಪ್ರದರ್ಶನ ಅದ್ಭುತವಾಗಿತ್ತು. ಟೀಮ್ ಇಂಡಿಯಾಗೆ ಅವರು ಮಿಸ್ಟರ್ ಫಿಕ್ಸಿಟ್‌ನಂತೆ. ಭಾರತ ತಂಡದ ಗೆಲುವಿಗೆ ಹೋರಾಡುವಲ್ಲಿ ಅವರು ಸಮರ್ಥರು ಹಾಗೂ ಕೊನೆತನಕ ಗೆಲುವಿಗಾಗಿ ಪೈಪೋಟಿ ಕೊಡುವ ಆಟಗಾರ. ರಾಹುಲ್ ಯಾವುದೇ ಪಾತ್ರ ಕೊಟ್ಟರು ನಿರ್ವಹಿಸುತ್ತಾರೆ. ಅದು ಓಪನರ್ ಆಗಲಿ, ಮಧ್ಯಮ ಕ್ರಮಾಂಕ, ಆರನೇ ಕ್ರಮಾಂಕ, ವಿಕೆಟ್ ಕೀಪಿಂಗ್, ಬ್ಯಾಟರ್​ ಅಥವಾ ಫೀಲ್ಡರ್​. ಯಾವುದೇ ಕೊಟ್ಟರೂ ಅದಕ್ಕೆ ರಾಹುಲ್ ಸೈ ಎನ್ನುತ್ತಾರೆ" ಎಂದರು.

"2025ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾ ಗೆಲುವಿನಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸುತ್ತಾರೆ. ರಾಹುಲ್‌ ಅವರಂತಹ ಬಹುಮುಖ ಪ್ರತಿಭೆ ಆಟಗಾರನೊಂದಿಗೆ ಆಡಲು ನಾನು ಉತ್ಸುಕನಾಗಿದ್ದೇನೆ" ಎಂದು ಮಿಚೆಲ್​ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net