

Wasim Akram: ಇತ್ತೀಚೆಗಷ್ಟೇ ಮುಕ್ತಾಯಗೊಂಡ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು. ಬಹು ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ ಪಾಕಿಸ್ತಾನ ತಂಡವೇ ಟೂರ್ನಿಯಿಂದ ಬಹುಬೇಗನೇ ಗೇಟ್ಪಾಸ್ ಪಡೆದಿದ್ದು ಸದ್ಯ ಪಾಕ್ ಮಾಜಿ ಆಟಗಾರರು ಮತ್ತು ದಿಗ್ಗಜ ಕ್ರಿಕೆಟಿಗರಿಗೆ ಭಾರೀ ಮುಖಭಂಗ ಉಂಟಾಗಿದೆ.
ಚಾಂಪಿಯನ್ಸ್ ಟ್ರೋಫಿ ಶುಭಾರಂಭ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಎರಡನೇ ಪಂದ್ಯದಲ್ಲಿ ಭಾರತ ಎದುರು ಹೀನಾಯ ಸೋಲುಂಡ ಪಾಕ್, ಎರಡು ಸತತ ಸೋಲಿನಿಂದ ಟೂರ್ನಿಯಿಂದ ಹೊರಗುಳಿಯಿತು. ಈ ಮೂಲಕ ತಮ್ಮ ಟ್ರೋಫಿ ಕನಸನ್ನು ಛಿದ್ರ ಮಾಡಿಕೊಂಡಿತು. ಅತ್ಯಂತ ಕಳಪೆ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬಿದ್ದ ಪಾಕ್ ತಂಡದಲ್ಲಿ ಸದ್ಯ ಯಾವುದೂ ಸರಿಯಿಲ್ಲ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆ ಸ್ಪಷ್ಟ ಉದಾಹರಣೆ.
ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕ್ ತಂಡವನ್ನು ಟೀಕಿಸಿ, ಗುರಿಯಾಗಿಸಿದ ಮಾಜಿ ಹಿರಿಯ ಕ್ರಿಕೆಟಿಗ ವಾಸಿಮ್ ಅಕ್ರಂ ಮತ್ತು ಇತರೆ ಹಿರಿಯ ಆಟಗಾರರ ವಿರುದ್ಧ ಮೊಹಮ್ಮದ್ ಹಫೀಜ್ ತೀವ್ರ ಕಿಡಿಕಾರಿದ್ದರು. 90ರ ಕ್ರಿಕೆಟಿಗರು ನಮಗೆ ಅದ್ಭುತ ಗೆಲುವನ್ನು ಪರಿಚಯಿಸಲಿಲ್ಲ ಮತ್ತು ಟ್ರೋಫಿ ಗೆಲ್ಲುವ ಹುಮ್ಮಸ್ಸನ್ನು ತಂದುಕೊಡಲಿಲ್ಲ. ಹೀಗಿರುವಾಗ ಪ್ರಸ್ತುತ ತಂಡದ ಆಟಗಾರರ ಕಾಲೆಳೆದು ಟೀಕಿಸುವುದು ಸರಿಯಲ್ಲ ಎಂದು ಹಫೀಜ್, ಅಕ್ರಂ ವಿರುದ್ಧ ಪರೋಕ್ಷವಾಗಿ ಗುಡುಗಿದರು.
ಹಫೀಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಕ್ರಂ, "ಇಲ್ಲಿ ನಾನು ಸಾವಿರ ವಿಷಯಗಳನ್ನು ಹೇಳಬಹುದು. ಆದರೆ, ಆ ತಪ್ಪನ್ನು ಮಾಡಲು ಬಯಸುವುದಿಲ್ಲ. ಸುಖಾಸುಮ್ಮನೆ ಅವರಿಗೇಕೆ ನಾವು ಗಮನ ಕೊಡಬೇಕು? ಇವರೆಲ್ಲ ನನ್ನ ಜೀವನದಿಂದ ಹೊರಗುಳಿದಿದ್ದಾರೆ. ನನಗೆ ಯಾರ ಹೆಸರುಗಳನ್ನು ತೆಗೆದುಕೊಳ್ಳಲಯ ಇಷ್ಟವಿಲ್ಲ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ,(ಏಜೆನ್ಸೀಸ್).