ಸಚಿವ ಪ್ರಲ್ಹಾದ ಜೋಶಿ ನೇತೃತ್ವದ ಸಂಸದೀಯ ಸದ್ಭಾವನಾ ನಿಯೋಗದಿಂದ ಬ್ರೆಜಿಲ್​ ಭೇಟಿ

Joshi
Published on

ನವದೆಹಲಿ: ಭಾರತ ಮತ್ತು ಬ್ರೆಜಿಲ್ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವ ಸಲುವಾಗಿ ದೇಶ ಮಹತ್ವದ ಹೆಜ್ಜೆಯನ್ನಿರಿಸಿದೆ. ಆ ನಿಟ್ಟಿನಲ್ಲಿ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಸಂಸದೀಯ ಸದ್ಭಾವನಾ ನಿಯೋಗ ಬ್ರೆಜಿಲ್​ಗೆ ಭೇಟಿ ನೀಡಿದೆ. ಹತ್ತು ಸದಸ್ಯರನ್ನು ಒಳಗೊಂಡ ನಿಯೋಗ ಜೂ. 11ರಿಂದ 13ರ ವರೆಗೆ ಬ್ರೆಜಿಲ್​ನಲ್ಲಿತ್ತು.

ಭಾರತ ಮತ್ತು ಬ್ರೆಜಿಲ್ ನಡುವಿನ ರಾಜತಾಂತ್ರಿಕ ಬಾಂಧವ್ಯದ 75ನೇ ವರ್ಷಾಚರಣೆ ಅಂಗವಾಗಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರ ನಡುವೆ ಹಿರೋಷಿಮಾದಲ್ಲಿ ನಡೆದ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ನಡೆದ ಸಭೆಯ ಮುಂದುವರಿದ ಭಾಗವಾಗಿ ನಿಯೋಗ ಈ ಭೇಟಿಯನ್ನು ಹಮ್ಮಿಕೊಂಡಿತ್ತು.

ಇದು ಸಂಸತ್ತಿನ ಮೊದಲ ಸದ್ಭಾವನಾ ನಿಯೋಗವಾಗಿದೆ ಮತ್ತು 2006ರಿಂದ ಕಾರ್ಯತಂತ್ರದ ಪಾಲುದಾರ ಬ್ರೆಜಿಲ್ ಜತೆಗಿನ ಸಂಬಂಧಗಳಿಗೆ ಭಾರತ ನೀಡುವ ಹೆಚ್ಚಿನ ಪ್ರಾಮುಖ್ಯತೆಯನ್ನು ಈ ಭೇಟಿ ಒತ್ತಿ ಹೇಳುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಜಿ.ಶ್ರೀನಿವಾಸ್ ಹೇಳಿದರು.

ನಿಯೋಗವು ಬ್ರೆಜಿಲ್ ಸಂಸತ್ತಿನ ಮೇಲ್ಮನೆಯ ಫೆಡರಲ್ ಸೆನೆಟ್ ಅಧ್ಯಕ್ಷ ರೊಡ್ರಿಗೊ ಒಟಾವಿಯೊ ಸೊರೆಸ್ ಪಚೆಕೊ ಅವರೊಂದಿಗೆ ಜೂ. 13ರಂದು ಸಭೆ ನಡೆಸಿತು. ಭಾರತ ಮತ್ತು ಬ್ರೆಜಿಲ್ ನಡುವೆ ಬೆಳೆಯುತ್ತಿರುವ ವ್ಯೂಹಾತ್ಮಕ ಪಾಲುದಾರಿಕೆಗೆ ಈ ಸಭೆಯಲ್ಲಿನ ಪರಸ್ಪರ ತಿಳುವಳಿಕೆ ಮತ್ತು ಸಹಕಾರದ ಈ ಮಾತುಕತೆ ಸಾಕ್ಷಿಯಾಯಿತು. ಸಂಸದರ ನಿಯೋಗದ ನೇತೃತ್ವ ವಹಿಸಲು ಭಾರತಕ್ಕೆ ಭೇಟಿ ನೀಡುವಂತೆ ಸಚಿವ ಜೋಶಿ ಅವರ ಆಹ್ವಾನವನ್ನು ಪಚೆಕೊ ಅವರು ಸ್ವೀಕರಿಸಿ, ಧನ್ಯವಾದ ಸಲ್ಲಿಸಿದರು.

ನಿಯೋಗವು ಭಾರತ-ಬ್ರೆಜಿಲ್ ಸ್ನೇಹ ರಂಗದ ಅಧ್ಯಕ್ಷ ಸೆನೆಟರ್ ನೆಲ್ಸನ್ ಟ್ರಾಡ್ ಮತ್ತು ಇತರ ಪ್ರಮುಖ ಸದಸ್ಯರನ್ನು ಭೇಟಿ ಮಾಡಿತು. ಈ ಸಂವಾದ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಗಾಢಗೊಳಿಸಲು ಅಡಿಪಾಯ ಹಾಕಿತು.

ಇದಾದ ಬಳಿಕ ಕಾಂಗ್ರೆಸ್​ನ ಉಪ ಅಧ್ಯಕ್ಷ ಮಾರ್ಕೋಸ್ ಪಿರೇರಾ ಮತ್ತು ಭಾರತ-ಬ್ರೆಜಿಲ್ ಸಂಸದೀಯ ಸ್ನೇಹ ಗುಂಪಿನ ಅಧ್ಯಕ್ಷ ಫೆಡರಲ್ ಡೆಪ್ಯೂಟಿ ವಿನಿಷಿಯಸ್ ಕಾರ್ವಾಲ್ಹೋ ಮತ್ತು ಅದರ ಹಲವಾರು ಸದಸ್ಯರೊಂದಿಗೆ ಫಲಪ್ರದ ಸಭೆ ನಡೆಯಿತು.

ಕಳೆದ ಎರಡು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರದಲ್ಲಿ ಆಗಿರುವ ಗಮನಾರ್ಹ ಹೆಚ್ಚಳದ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ಒಟ್ಟು ದ್ವಿಪಕ್ಷೀಯ ವ್ಯಾಪಾರವು 2020ರಲ್ಲಿ 7.05 ಬಿಲಿಯನ್ ಯುಎಸ್ ಡಾಲರ್​ನಿಂದ 2022ರಲ್ಲಿ 15.20 ಬಿಲಿಯನ್ ಯುಎಸ್ ಡಾಲರ್​​ಗೆ ಅಂದರೆ ಶೇ.115 ಏರಿಕೆಯಾಗಿದೆ. ಇದು ವ್ಯೂಹಾತ್ಮಕ ವ್ಯಾಪಾರ ವಿಸ್ತರಣೆಗೆ ಒತ್ತು ನೀಡುವುದು, ಪರಸ್ಪರ ಲಾಭದಾಯಕ ಪಾಲುದಾರಿಕೆ ರೂಪಿಸುವ, ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಎರಡೂ ರಾಷ್ಟ್ರಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಭಾರತೀಯ ಸಂಸತ್ತಿನ ಸದ್ಭಾವನಾ ನಿಯೋಗದ ಈ ಭೇಟಿಯು ಭಾರತ-ಬ್ರೆಜಿಲ್ ದ್ವಿಪಕ್ಷೀಯ ಸಂಬಂಧಗಳ ಶ್ರೀಮಂತ ಇತಿಹಾಸದಲ್ಲಿ ಮಹತ್ವದ ಹೆಜ್ಜೆ ಎಂದು ರಾಯಭಾರಿ ಸುರೇಶ್ ರೆಡ್ಡಿ ಉಲ್ಲೇಖಿಸಿದರು.

ನಿಯೋಗವು ಬ್ರೆಸಿಲಿಯಾ ಮತ್ತು ರಿಯೊ ಡಿ ಜನೈರೊ ನಗರದ ಉದ್ಯಾನವನಗಳ ಹೃದಯಭಾಗದಲ್ಲಿರುವ ಭಾರತ ಮತ್ತು ಬ್ರೆಜಿಲ್ ನಡುವಿನ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಶಾಂತಿಯ ಸಂಕೇತವಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಗಳಿಗೆ ಈ ಭೇಟಿಯ ಸಂದರ್ಭದಲ್ಲಿ ಗೌರವವನ್ನೂ ಸಲ್ಲಿಸಿತು. ರಿಯೋ ಡಿ ಜನೈರೊ ಮತ್ತು ಬ್ರೆಸಿಲಿಯಾ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದವರನ್ನು ಸಚಿವ ಜೋಶಿ ಭೇಟಿಯಾದರು. ಭಾರತದ ತ್ವರಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಬಗ್ಗೆ ಅವರಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net