ನಮ್ಮ ಸರ್ಕಾರ ಬಂದ್ರೆ ಒಂದೇ ಗಂಟೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ: ರಾಹುಲ್​ ಕೊಟ್ಟ ಭರವಸೆ ಹೀಗಿದೆ…

Rahul Gandhi
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ
Published on

ಉಡುಪಿ: ಕರ್ನಾಟಕದ ಬಿಜೆಪಿ ಸರ್ಕಾರ ತಾವು ಆರಿಸಿದ ಸರ್ಕಾರವಲ್ಲ, ಹಣದಿಂದ ಹಾಗೂ ಕಳ್ಳತನದಿಂದ ಅಧಿಕಾರ ಹಿಡಿದಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು.

ಉಡುಪಿಯಲ್ಲಿ ಇಂದು ಮಾತನಾಡಿದ ರಾಹುಲ್​ ಗಾಂಧಿ, ಬಡವರು ಹಾಗೂ ದುರ್ಬಲರಿಗೆ ಸಹಾಯ ಮಾಡುವುದು ಕಾಂಗ್ರೆಸ್‌ ಪಕ್ಷದ ಉದ್ದೇಶವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರವನ್ನು ಜನರು ಆಯ್ಕೆ ಮಾಡಿಲ್ಲ. ಈ ಸರ್ಕಾರ ಹಣದಿಂದ ಹಾಗೂ ಕಳ್ಳ ಮಾರ್ಗದಿಂದ ರಚಿಸಲಾಗಿದೆ. ಶಾಸಕರ ಖರೀದಿ ಮಾಡಿ ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲ ಮಾಡಲಾಯಿತು. 2500 ಕೋಟಿ ರೂಪಾಯಿಗೆ ಸಿಎಂ ಸೀಟು ಬಿಕರಿ ಇದೆ ಎಂದು ಅವರ ಪಕ್ಷದ ಶಾಸಕರೇ ಹೇಳಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಎಲ್ಲಿಗೆ ಹೋಗುತ್ತಿದೆ?

ಬಡವರ ಉದ್ಧಾರ ಮಾಡಬೇಕು ಅನ್ನುವುದು ಕಾಂಗ್ರೆಸ್ ಸರ್ಕಾರದ ಆಶಯವಾಗಿದೆ. ಬಿಜೆಪಿ ಹಣದಿಂದ ಹಾಗೂ ಕಳ್ಳತನದಿಂದ ಅಧಿಕಾರ ಹಿಡಿದಿದೆ ಎಂಬ ಸತ್ಯ ಕರ್ನಾಟಕದ ಜನರಿಗೆ ಗೊತ್ತಿದೆ. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ದಿಂಗಾಲೇಶ್ವರ ಸ್ವಾಮೀಜಿ ‌ಕೂಡ ಭ್ರಷ್ಟಾಚಾರ ಇದೆ ಎಂದು ಹೇಳಿದ್ದಾರೆ. ಧಾರ್ಮಿಕ ವ್ಯಕ್ತಿ ಎಂಬ ಕಾರಣಕ್ಕೆ ಅವರಿಂದ 30 ಪರ್ಸೆಂಟ್ ಕಮಿಷನ್​ ಪಡೆಯಲಾಗಿದೆ. ಪ್ರತಿ ನೇಮಕಾತಿಯಲ್ಲೂ ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆದಿದೆ. ಇದು ನಿಮ್ಮ ಕಿಸೆಯಿಂದ ತೆಗೆದ ಹಣ, ಆದರೆ ಅದು ಎಲ್ಲಿಗೆ ಹೋಗುತ್ತಿದೆ? ಎಂದು ರಾಹುಲ್​ ಪ್ರಶ್ನೆ ಮಾಡಿದರು.

ಬಡವರಿಗಂತೂ ಪ್ರಯೋಜನವಾಗಿಲ್ಲ

ಜನರ ಹಣ ಜನರ ಶಿಕ್ಷಣ, ಆಸ್ಪತ್ರೆಗೆ ಹೋಗುತ್ತಿದೆಯಾ ಆಲೋಚಿಸಿ. ಬಡವರಿಗಾಗಲಿ, ಮೀನುಗಾರರು ಹಾಗೂ ಕಾರ್ಮಿಕರಿಗಾಗಲಿ ತೆರಿಗೆ ಹಣ ಹೋಗುತ್ತಿಲ್ಲ. ನಿಮ್ಮ ಶಿಕ್ಷಣ ಮತ್ತು ಆರೋಗ್ಯ ಯಾವುದಕ್ಕೂ ಈ ಹಣ ವಿನಿಯೋಗ ಆಗುತ್ತಿಲ್ಲ. ಬಡವರಿಗಂತೂ ಇವರ ಹಣದಿಂದ ಪ್ರಯೋಜನವಾಗಿಲ್ಲ. ಒಂದು ಕಡೆ ಭ್ರಷ್ಟಾಚಾರ ಮಿತಿ ಮೀರಿದೆ ಮತ್ತು ಬೆಲೆ ಏರಿಕೆ ಆಗಿದೆ. ಸರ್ಕಾರ ಡೀಸೆಲ್ ಹಾಗೂ ಪೆಟ್ರೋಲ್​ನಿಂದ ಕೋಟ್ಯಾಂತರ ರೂಪಾಯಿ ಹಣ ಸಂಪಾದಿಸಿದೆ ಎಂದು ಹೇಳಿದರು.

ಒಂದೇ ಗಂಟೆಯಲ್ಲಿ ತೀರ್ಮಾನ

ಬಡ ಜನರು ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಆದರೆ, ಶ್ರೀಮಂತರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಹೀಗಾಗಿ ಕಾಂಗ್ರೆಸ್ ನಾಲ್ಕು ಗ್ಯಾರೆಂಟಿ ಸ್ಕೀಮ್ ಅನ್ನು ಜಾರಿಗೆ ತರಲಿದೆ. ಈ ಭರವಸೆ ಈಡೇರಿಕೆಗೆ ನಾವು ನಾಲ್ಕೈದು ವರ್ಷ ಕಾಯುವುದಿಲ್ಲ. ನಮ್ಮ ಸರ್ಕಾರ ಬಂದರೆ, ಒಂದೇ ಗಂಟೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಮೊದಲ ಕ್ಯಾಬಿನೆಟ್​ನಲ್ಲೇ ನಮ್ಮ ಭರವಸೆ ಈಡೇರಿಸುತ್ತೇವೆ ಎಂದರು.

ನಾವು ಹೇಳಿದ್ದನ್ನು ಮಾಡುತ್ತೇವೆ

ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತರುತ್ತೇವೆ. ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿ ಅಕೌಂಟ್ ಸೇರಲಿದೆ. ಪ್ರಳಯವಾದರೂ ಪ್ರತಿ ತಿಂಗಳು ಮಹಿಳೆಯರ ಅಕೌಂಟಿಗೆ ಹಣ ಹೋಗುತ್ತದೆ. ಇದರೊಂದಿಗೆ ಮನೆ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತೇವೆ ಮತ್ತು ಅನ್ನ ಭಾಗ್ಯದ ಮೂಲಕ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡುತ್ತೇವೆ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3000 ರೂ. ನೀಡಲಾಗುವುದು. ಡಿಪ್ಲೊಮಾ ಪದವೀಧರರಿಗೆ ಒಂದೂವರೆ ಸಾವಿರ ರೂಪಾಯಿ ನೀಡಲಾಗುತ್ತದೆ. ಈ 4 ಸ್ಕೀಮ್ ಮೊದಲನೇ ಕ್ಯಾಬಿನೆಟ್​ನಲ್ಲೇ ನಿರ್ಣಯವಾಗುತ್ತದೆ. ಈಗಾಗಲೇ ಛತ್ತೀಸ್​ಗಢ ಹಾಗೂ ಹಿಮಾಚಲ ಪ್ರದೇಶದಲ್ಲಿ ನಮ್ಮ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. ನಾವು ಹೇಳಿದ್ದನ್ನು ಮಾಡುತ್ತೇವೆ. ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಎಂದು ವಾಗ್ದಾನ ಮಾಡಿದರು.

ಪ್ರಧಾನಿ ಮೋದಿ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಅಂದಿದ್ದರು. ಅವರ ತರ ನಾವು ಸುಳ್ಳು ಭರವಸೆ ಕೊಡಲ್ಲ ಎಂದು ಬಿಜೆಪಿಗೆ ರಾಹುಲ್​ ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net