ರಾಯಚೂರು: ನಿರ್ಲಕ್ಷೃಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದು ಕೇಂದ್ರ ಸಚಿವ ಅರ್ಜುನ್ ಮುಂಡಾ ಹೇಳಿದರು.
ಮೋದಿ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ
ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ದಲಿತ ಸಮುದಾಯಕ್ಕೆ ಸೇರಿದ ರಾಮನಾಥ ಕೋವಿಂದ ಹಾಗೂ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ. ದೇಶದ ತಳ ಸಮುದಾಯದ ಜನರು ಬದುಕು ಕಟ್ಟಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದ್ದು, ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ರಾಜ್ಯದಲ್ಲಿನ ಬಿಜೆಪಿ ಸರ್ಕಾರವೂ ಉತ್ತಮ ಕಾರ್ಯ ಮಾಡಿದೆ ಎಂದರು.
ಇದನ್ನೂ ಓದಿ: ಬಿಜೆಪಿ ಸರ್ಕಾರ ತಳ ಸಮುದಾಯದ ಜನರ ಆಶೋತ್ತರಗಳನ್ನು ಈಡೇರಿಸಿದೆ ; ಯೋಗಾರಮೇಶ್
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ
ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ, ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬುಡಕಟ್ಟು ಜನಾಂಗದ ನೇತಾರ ಭಗವಾನ್ ಮುಂಡಾ ಸ್ಮರಣಾರ್ಥ ನ.15 ಅನ್ನು ಬುಡಕಟ್ಟು ಜನಾಂಗದ ಗೌರವ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅರ್ಜುನ್ ಮುಂಡಾ ತಿಳಿಸಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಏ.27ರಂದು ಪ್ರಧಾನಿ ಮೋದಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಲಿದ್ದು, ಬೂತ್ ಮಟ್ಟದಲ್ಲಿ ಎಲ್‌ಇಡಿ ಟಿವಿಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು. ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ ಯಾದವ, ಚುನಾವಣೆ ಉಸ್ತುವಾರಿ ಧರ್ಮಾರಾವ್, ಪದಾಧಿಕಾರಿಗಳಾದ ಬಿ.ಗೋವಿಂದ, ಜಿ.ಶಂಕರರೆಡ್ಡಿ, ಕೊಟ್ರೇಶಪ್ಪ ಕೋರಿ, ಗಿರೀಶ ಕನಕವಿಡು, ಕೊಟ್ರೇಶಪ್ಪ ಕೋರಿ, ತಿರುಮಲರೆಡ್ಡಿ ಇದ್ದರು.