ಸಮುದಾಯ ಮುಖ್ಯವಾಹಿನಿಗೆ ಬರಲಿ

ಬೆಳಗಾವಿ: ನಿಜಶರಣ ಅಂಬಿಗರ ಚೌಡಯ್ಯನವರ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಕೋಳಿ-ಬೆಸ್ತ ಸಮುದಾಯದ ಬೇಡಿಕೆಯಂತೆ ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿ ಸೇರ್ಪಡೆಗೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಸರ್ದಾರ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚೌಡಯ್ಯನವರ 904ನೇ ಜಯಂತಿ ಆಚರಣೆ ಕಾರ್ಯಕ್ರಮ ಇಷ್ಟು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಚೌಡಯ್ಯ ನೇರ ನುಡಿ ಮೂಲಕ ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಜಾತಿ, ಮತ ಹೋಗಲಾಡಿಸಿ ಸಮಾನತೆ ತರಲು ನಿರಂತರ ಶ್ರಮಿಸಿದ್ದಾರೆ. ಪ್ರತಿಯೊಬ್ಬರೂ ಅವರ ವಚನ ಸಾಹಿತ್ಯ, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬೇಡಿಕೆಯಂತೆ ಎಸ್ಟಿ ಮೀಸಲಾತಿ ಸೇರ್ಪಡೆಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ತೀರ್ಮಾನ ಈಗ ಕೇಂದ್ರ ಸರ್ಕಾರದ ಹಂತದಲ್ಲಿದೆ ಎಂದು ತಿಳಿಸಿದರು. ನೆಲ ಬೇಟೆಗಾರರು ಹಾಗೂ ಜಲ ಬೇಟೆಗಾರರು ಎರಡೂ ಒಂದೇ. ಆದರೆ ಕೋಳಿ-ಬೆಸ್ತ ಹೆಸರುಗಳಿಂದ ಗುರುತಿಕೊಂಡಿರುವುದರಿಂದ ಎಸ್ಟಿ ಪಟ್ಟಿಗೆ ಸೇರ್ಪಡೆಗೊಂಡಿಲ್ಲ. ಮುಂಬರುವ ದಿನಗಳಲ್ಲಿ ಎಸ್ಟಿ ಸೇರ್ಪಡೆಗೆ ಚಿಂತನೆ ನಡೆಸಲಾಗುವುದು ಎಂದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಳಿತಕ್ಕೆ ಒಳಗಾದ ಸಮಾಜದ ಒಳಿತಿಗಾಗಿ ನಿರಂತರ ಶ್ರಮಿಸಿದ್ದಾರೆ ಬಸವಣ್ಣನವರ ವಿಚಾರಧಾರೆಯಂತೆ ಅಂಬಿಗರ ಚೌಡಯ್ಯ ವಚನಗಳ ಮೂಲಕ ಏಕತೆಯ ಸಂದೇಶ ಸಾರಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಮಾತನಾಡಿ, ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಅವರಿಗೆ ದೊಡ್ಡ ಇತಿಹಾಸವಿದೆ. ಅದೇ ರೀತಿ ಮಹಾಭಾರತ ರಚಿಸಿದ ಮಹರ್ಷಿ ವ್ಯಾಸರು ದೇಶಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಅವರು ಸಹ ಕೋಳಿ-ಬೆಸ್ತ ಸಮುದಾಯದವರು. ಸಮುದಾಯದವರು ತಮ್ಮ ಮೂಲ ಅರಿತುಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, 1956ರಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಯಲ್ಲಿ ಕೋಳಿ-ಬೆಸ್ತ ಸಮುದಾಯದ ಹೆಸರು ಇತ್ತು. ಆದರೆ, ಅಂದಿನ ದಿನಗಳಲ್ಲಿ ಸಮಾಜ ಶೈಕ್ಷಣಿಕವಾಗಿ ಹಿಂದುಳಿದ ಕಾರಣ ಯಾವುದೇ ಹೋರಾಟ ಮಾಡಿಲ್ಲ. ಈಗಲಾದರೂ ಕೋಳಿ-ಬೆಸ್ತ ಸಮಾಜ ಸಮುದಾಯ ಎಸ್ಟಿ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದು ವಿನಂತಿಸಿದರು.

ಉಪನ್ಯಾಸ ನೀಡಿದ ಸಿಂಧನೂರು ಡಾ.ಮಲ್ಲಿಕಾರ್ಜುನ ಕಮತಗಿ, ನಿಜಶರಣ ಅಂಬಿಗರ ಚೌಡಯ್ಯ ವಚನ ಸಾಹಿತ್ಯದ ಮೂಲಕ ಸುಮಾರು 12 ಶತಮಾನದ ಬಸವಣ್ಣನವರ ಕಾಲದಲ್ಲಿ ತಮ್ಮ ಚಿಂತನೆ ಸಾರಿದ್ದಾರೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಅವರ ವಚನ ಸಾಹಿತ್ಯ ಸಾಕಷ್ಟು ಪರಿಣಾಮ ಬೀರಿತ್ತು. ಅದಕ್ಕಾಗಿ ನಿಜಶರಣ ಎಂಬ ಬಿರುದು ಚೌಡಯ್ಯ ಅವರಿಗೆ ನೀಡಲಾಗಿದೆ ಎಂದರು.

ಸಚಿವ ಸತೀಶ ಜಾರಕಿಹೊಳಿ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ, ಅವರ ವಿಚಾರಧಾರೆ, ವಚನ ಸಾಹಿತ್ಯದ ಪುಸ್ತಕ ಬಿಡುಗಡೆಗೊಳಿಸಿದರು. ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ, ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಇತರರಿದ್ದರು. ಚೌಡಯ್ಯ ಭಾವಚಿತ್ರದ ಮೆರವಣಿಗೆ ಕೋಟೆ ಕೆರೆಯಿಂದ ಪ್ರಾರಂಭವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಚನ್ನಮ್ಮ ವೃತ್ತದ ಮಾರ್ಗವಾಗಿ ಸರ್ದಾರ ಮೈದಾನ ತಲುಪಿತು. ಪೂರ್ಣಕುಂಭ, ಡೊಳ್ಳು ಕುಣಿತ, ನಗಾರಿ ತಂಡ ಸೇರಿ ವಿವಿಧ ಕಲಾ ತಂಡಗಳು, ಆನೆ ಅಂಬಾರಿ, ಒಂಟೆ, ಕುದುರೆ ಪಾಲ್ಗೊಂಡಿದ್ದವು.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ