

ಕತಾರ್: ಇಂಡಿಯನ್ ಕಲ್ಚರಲ್ ಸೆಂಟರ್ (ಐಸಿಸಿ) ಸ್ಟುಡೆಂಟ್ ಫೋರಮ್ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಸಮಾರಂಭವು ನ. 18ರಂದು ದೋಹ-ಕತಾರ್ನಲ್ಲಿರುವ ಐಸಿಸಿ ಅಶೋಕ ಹಾಲ್ನಲ್ಲಿ ನಡೆಯಿತು. ದೇಶಭಕ್ತ ಮತ್ತು ಮಕ್ಕಳ ಕನಸು- ವರ್ಲ್ಡ್ ಥೀಮ್ ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಐಸಿಸಿ ಆ್ಯಕ್ಟಿವಿಟಿ ಕೋ-ಆರ್ಡಿನೇಟರ್ ಆ್ಯಂಡ್ ಎಜುಕೇಷನ್ ಮುಖ್ಯಸ್ಥೆ ಕಮಲಾ ಠಾಕೂರ್ ಅವರು ಸ್ವಾಗತ ಭಾಷಣ ಮಾಡಿದರು. ಜೆ.ಪಿ. ಸುಜಿತ್ರಾ ಮತ್ತು ಶಯಮಂತಿ ಭೌಮಿಕ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು. ವಿದ್ಯಾರ್ಥಿ ವೇದಿಕೆ ವತಿಯಿಂದ ಸಿದ್ಧಿ ಸುರೇಶ್ ಸ್ವಾಗತ ಭಾಷಣ ಮಾಡಿದರು.
ಕಾನ್ಸುಲರ್ ಆ್ಯಂಡ್ ಕಮ್ಯುನಿಟಿ ಅಫೇರ್ಸ್ನ ಫಸ್ಟ್ ಸೆಕ್ರೆಟರಿ ಕ್ಸೇವಿಯರ್ ಧನರಾಜ್, ಐಸಿಸಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್ ಮಾತ್ರವಲ್ಲದೆ ಐಸಿಸಿ ಫೋರಮ್ನ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಸೇರಿ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಐಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಬಂಧಕವಿ ಹಾಗೂ ಕ್ಸೇವಿಯರ್ ಧನರಾಜ್ ಅವರು ಮಾತನಾಡಿ ಸಕ್ರಿಯವಾಗಿ ಪಾಲ್ಗೊಂಡ ಮಕ್ಕಳ ಕುರಿತು ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಕ ಮಾತುಗಳನ್ನಾಡಿದರು. ನ. 14 ಮತ್ತು 18ರಂದು ಭಾಗವಹಿಸಿದ್ದ ಮಕ್ಕಳಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಶ್ರೇಯ್ ಭಟ್ ಧನ್ಯವಾದ ಸಮರ್ಪಣೆ ಮಾಡಿದರು.