

ಬೆಂಕಿ ಬಸಣ್ಣ, ನ್ಯೂಯಾರ್ಕ್
ಅಮೆರಿಕದ ದಕ್ಷಿಣದಲ್ಲಿರುವ ಫ್ಲಾರಿಡಾ ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾದ ಕೆಟಗರಿ-4 ಚಂಡಮಾರುತ ಇಯಾನ್ ಗಂಟೆಗೆ ಸುಮಾರು 240 ಕಿಲೋ ಮೀಟರ್ ವೇಗದಲ್ಲಿ ಬೀಸಿ ಭಾರಿ ಅನಾಹುತ ಉಂಟುಮಾಡಿದೆ. ಈಗಾಗಲೇ ಕನಿಷ್ಠ 47 ಜನರು ಬಲಿಯಾಗಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಫ್ಲಾರಿಡಾ ರಾಜ್ಯದಲ್ಲಿ 23 ಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್ ಸಂಪರ್ಕ ಇಲ್ಲದೇ ಕಗ್ಗತ್ತಲೆಯಲ್ಲಿ ಕಳೆಯುತ್ತಿದ್ದಾರೆ. ಅನೇಕ ನಗರಗಳು ಜಲಾವೃತವಾಗಿದ್ದು, ದೋಣಿಗಳನ್ನು ಬಳಸಿ ಜನರನ್ನು ರಕ್ಷಿಸಲಾಗುತ್ತಿದೆ. ಇದು ಫ್ಲಾರಿಡಾ ರಾಜ್ಯದ ಇತಿಹಾಸದಲ್ಲಿ ಅತಿದೊಡ್ಡ ಚಂಡಮಾರುತದ ವಿನಾಶವಾಗಿದೆ. ಕೇಂದ್ರ ಸರ್ಕಾರದ ಸಂಪೂರ್ಣ ನೆರವನ್ನು ಕೊಡುವುದಾಗಿ ಹಾಗೂ ತಾವು ಸದ್ಯದಲ್ಲೇ ಫ್ಲಾರಿಡಾಕ್ಕೆ ಭೇಟಿ ಕೊಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಇಯಾನ್ ಚಂಡಮಾರುತದಿಂದ ಲಕ್ಷಾಂತರ ಮನೆಗಳು, ಕಟ್ಟಡಗಳು, ಮರಗಳು, ವಿದ್ಯುತ್ ಲೈನ್ ಮುರಿದು ಬಿದ್ದಿವೆ. ಪ್ರವಾಹದಿಂದಾಗಿ ಬಹಳಷ್ಟು ಪ್ರದೇಶಗಳು ಮುಳುಗಡೆಯಾಗಿವೆ. ಇಷ್ಟು ದೊಡ್ಡ ಪ್ರವಾಹವನ್ನು ನಮ್ಮ ಜೀವನದಲ್ಲಿಯೇ ನೋಡಿಲ್ಲ. ಚಂಡಮಾರುತ ಬಂದು ಹೋದರೂ ಸಹಿತ ಬಹಳಷ್ಟು ಪ್ರದೇಶಗಳಲ್ಲಿ ನೀರಿನ ಮಟ್ಟ ಸತತವಾಗಿ ಹೆಚ್ಚಾಗುತ್ತಲೇ ಇದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ಸಂತ್ರಸ್ತರನ್ನು ರಕ್ಷಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಫ್ಲಾರಿಡಾ ರಾಜ್ಯದ ಗವರ್ನರ್ ರಾನ್ ಡಿಸೆಂಟಿಸ್ ಹೇಳಿದರು.
ಚಂಡಮಾರುತ ಈಗ ಸೌತ್ ಕರೊಲಿನಾ, ನಾರ್ತ್ ಕರೊಲಿನಾ ಮತ್ತು ಜಾರ್ಜಿಯ ರಾಜ್ಯಗಳಿಗೆ ಅಪ್ಪಳಿಸಲಿದೆ. ಅಮೆರಿಕಕ್ಕೆ ಅಪ್ಪಳಿಸುವ ಮುನ್ನ ಇಯಾನ್ ಚಂಡಮಾರುತ ಕ್ಯೂಬಾ ದೇಶಕ್ಕೆ ತೀವ್ರ ಹಾನಿ ಉಂಟುಮಾಡಿತ್ತು.
ಅಮೆರಿಕದ ಫ್ಲಾರಿಡಾವನ್ನು ಅಪ್ಪಳಿಸಿರುವ ಇಯಾನ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 47ಕ್ಕೆ ಏರಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಚಂಡಮಾರುತದ ಅಬ್ಬರಕ್ಕೆ ಇತರ ಭಾಗಗಳಲ್ಲಿ ಏಳು ಮಂದಿ ಮೃತಪಟ್ಟಿದ್ದು ಬಲಿಯಾದವರ ಒಟ್ಟು ಸಂಖ್ಯೆ 54 ಆಗಿದೆ. ಉತ್ತರ ಕರೊಲಿನಾದಲ್ಲಿ ನಾಲ್ವರು ಹಾಗೂ ಕ್ಯೂಬಾದಲ್ಲಿ ಮೂವರು ಇಯಾನ್ ಹಾವಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬಹಳಷ್ಟು ಜನರು ಮುಳುಗಿ ಸತ್ತಿದ್ದಾರೆ. ಹಲವು ಶವಗಳು ಪ್ರವಾಹದ ನೀರಿನಲ್ಲಿ ತೇಲುತ್ತಿದ್ದವು ಎಂದು ರಾಜ್ಯದ ವೈದ್ಯಕೀಯ ಪರೀಕ್ಷಕರು ಸಿದ್ಧಪಡಿಸಿದ ವರದಿ ತಿಳಿಸಿದೆ.
ಫ್ಲಾರಿಡಾದ ನೈಋತ್ಯ ಕರಾವಳಿಯೊಂದರಲ್ಲೇ ಸಾವಿರಕ್ಕೂ ಹೆಚ್ಚು ಜನರನ್ನು ಪಾರು ಮಾಡಲಾಗಿದೆ ಎಂದು ರಾಷ್ಟ್ರೀಯ ಕಾವಲು ಪಡೆಯ (ನ್ಯಾಷನಲ್ ಗಾರ್ಡ್ಸ್) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫ್ಲಾರಿಡಾದ ಗಲ್ಪ್ ಕರಾವಳಿಯ ಅತಿ ದೊಡ್ಡ ತಡೆ ದ್ವೀಪವಾದ ಪೈನ್ ಐಲ್ಯಾಂಡ್ನಲ್ಲಿ ಮನೆಗಳು ನೆಲಕಚ್ಚಿವೆ, ದೋಣಿಗಳು ಚೂರುಚೂರಾಗಿ ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳು ಮನಕಲಕುವಂತಿವೆ. ರಕ್ಷಣಾ ಸ್ವಯಂಸೇವಕರು ಮನೆಮನೆಗಳಿಗೆ ತೆರಳಿ ಅಲ್ಲಿರಬಹುದಾದ ಜನರನ್ನು ಬೇರೆಡೆ ಸ್ಥಳಾಂತರಿ ಸಲು ಪ್ರಯತ್ನಿಸುತ್ತಿದ್ದಾರೆ. ಪ್ರವಾಹದ ನೀರು ಹೆಚ್ಚುತ್ತಲೇ ಇರುವುದರಿಂದ ಅಪಾಯ ಇನ್ನಷ್ಟು ಜಾಸ್ತಿಯಾಗುತ್ತಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ರಕ್ಷಣೆ ಹಾಗೂ ಸ್ಥಳಾಂತರ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ನೈಋತ್ಯ ಫ್ಲಾರಿಡಾದ ನದಿಗಳ ನೀರಿನ ಮಟ್ಟ ಇನ್ನೂ ಕೆಲವು ದಿನಗಳ ಕಾಲ ಇಳಿಯುವ ಸಾಧ್ಯತೆಯಿಲ್ಲ ಎಂದು ರಾಷ್ಟ್ರೀಯ ಹವಾಮಾನ ತಜ್ಞ ಟೈಲರ್ ಫ್ಲೆಮಿಂಗ್ ಹೇಳಿದ್ದಾರೆ. ದಕ್ಷಿಣ ಕರೊಲಿನಾದ ಪಾವ್ಲೇಸ್ ಐಲ್ಯಾಂಡ್ನ ಬಹುತೇಕ ಅರ್ಧದಷ್ಟು ಭಾಗದಲ್ಲಿ ವಿದ್ಯುತ್ ಕಡಿತದಿಂದ ಜನರು ಕತ್ತಲಕೂಪದಲ್ಲಿ ಮುಳುಗಿದ್ದಾರೆ.