

ರಾಯಚೂರು: ಇಂದು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಿ.ವೈ.ವಿಜಯೇಂದ್ರ, ನಾನು ಇಟ್ಟ ಗುರಿ, ಮುಂದಿಟ್ಟ ಹೆಜ್ಜೆಯನ್ನು ಯಾವತ್ತು ಹಿಂದೆ ತೆಗೆಯುವುದಿಲ್ಲ ಎಂದು ಹೇಳಿದರು.
"ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನ ಮಗನಾಗಿ ಈ ಮಾತನ್ನು ಹೇಳುತ್ತೀನಿ. ಶಿಕಾರಿಪುರ ತಾಲೂಕಿಗೆ ಸೀಮಿತವಾಗದೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಗುರುಹಿರಿಯರ ಆಶಿರ್ವಾದದಿಂದ ಮುನ್ನಡೆಯುತ್ತೇನೆ. ಭಗವಂತನ ಕೃಪೆ, ಹರಗುರು ಚರಮೂರ್ತಿಗಳ ಆಶಿರ್ವಾದ ನನ್ನ ಮೇಲಿದೆ. ಮುಂದೆ ಭಗವಂತ ಶಕ್ತಿ ಕೊಟ್ಟಾಗ ನೀರಾವರಿ ಯೋಜನೆಗಳು, ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇನೆ" ಎಂದರು.
"ಈಗಲೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ದೇವರಲ್ಲಿ ಪ್ರಾರ್ಥನೆ ಮಾಡುತ್ತೆನೆ. ಭಗವಂತ ಶಕ್ತಿ ಕೊಟ್ಟರೆ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಈ ಭಾಗದ ಅಭಿವೃದ್ಧಿಗಾಗಿ ಏಮ್ಸ್ ಮತ್ತು ನೀರಾವರಿ ಯೋಜನೆ ಬಗ್ಗೆ ಜನರು ಕೇಳುತ್ತಿದ್ದಾರೆ. ಇದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದು ಭರವಸೆಯ ಮಾತುಗಳನ್ನಾಡಿದರು.