IAS Officer: ಜೀವನ ಕಟ್ಟಿಕೊಳ್ಳಲು ಲೆಕ್ಕಕ್ಕೆ ಸಿಗದಷ್ಟು ಜನರು ಗೊತ್ತಿರದ ಭಾಷೆ, ಊರಿಗೆ ಹಾರುತ್ತಿದ್ದಾರೆ. ಜೀವನೋಪಾಯ, ಯಶಸ್ಸನ್ನು ಸಾಧಿಸುವ ಸಲುವಾಗಿ ತಮ್ಮ ಹುಟ್ಟೂರನ್ನು ತೊರೆದು ಹೊಸ ಜನ, ನೆಲವನ್ನು ಅರಸಿ ಬರುವವರ ಸಂಖ್ಯೆ ಅಧಿಕವಾಗಿದೆ. ಇದರಲ್ಲಿ ಎರಡನೇ ಮಾತಿಲ್ಲ. ಬಡತನದ ಬೆವರು ಮೈಗೆ ಅಂಟಿಕೊಂಡ ಕಾರಣ ಅದನ್ನು ಯಶಸ್ಸಿನ ಮೆಟ್ಟಿಲೇರಿದ ನಂತರವೇ ಒರೆಸಬೇಕು ಎಂಬುದು ಅನೇಕರ ಶಪಥ. ತಾವು ಕಂಡ ಕನಸನ್ನು ನನಸಾಗಿಸಿಕೊಳ್ಳಲು ಹೆತ್ತವರಿಂದ ದೂರ ಉಳಿದು, ಇಷ್ಟಪಟ್ಟದ್ದನ್ನು ತೊರೆದು, ಸಿಕ್ಕ ಸಿಕ್ಕ ಸಣ್ಣ ಅವಕಾಶಗಳನ್ನು ಉಪಯೋಗಿಸಿಕೊಂಡು, ಯಾರ ಕೊಂಕು ಮಾತುಗಳಿಗೂ ಎದೆಗುಂದದೆ ಸಾಧನೆಯ ಹಾದಿಯಲ್ಲಿ ನಿಂತವರು ಇಂದು ಅದೆಷ್ಟೋ ಮಂದಿ. ಈ ವ್ಯಕ್ತಿಯು ಕೂಡ ಅದೇ ಸಾಲಿಗೆ ಸೇರಿದ್ದು, ರೈಲ್ವೇ ನಿಲ್ದಾಣದಲ್ಲಿ ಕೂಲಿಗಾರನಾಗಿ ಕೆಲಸ ಮಾಡಿಕೊಂಡೇ ಇಂದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಪತ್ನಿ, ಮಗನನ್ನು ಹತ್ಯೆಗೈದ ಪತಿ! ತಾನು ಸಾವಿನಿಂದ ಪಾರು | Harassment
ಕೈಗೊಂಡ ಆ ನಿರ್ಧಾರವೇ
ಕಠಿಣ ಹಾದಿಯಲ್ಲಿ ಸಾಗಿಬಂದ ಅಧಿಕಾರಿಯ ಹೆಸರು ಶ್ರೀನಾಥ್ ಕೆ. ಕೇರಳ ಸಾರ್ವಜನಿಕ ಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಇವರು, ಬಡತನ ಮತ್ತು ಹಣಕಾಸಿನ ತೊಂದರೆಯಿಂದ ಉತ್ತಮ ತರಬೇತಿ ಪಡೆಯಲು ಸಾಧ್ಯವಾಗಲಿಲ್ಲ. ಆರಂಭಿಕ ದಿನಗಳಲ್ಲಿ ಇದರಿಂದ ಭಾರೀ ಹೊಡೆತ ಅನುಭವಿಸಿದ ಶ್ರೀನಾಥ್, ತಮ್ಮ ಓದಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ತಲುಪಿದರು. ಹೆತ್ತವರ ಬಳಿ ಸಹಾಯ ಕೇಳಲು ಆಗದೆ, ಮತ್ತೊಬ್ಬರ ಸಹಾಯವನ್ನು ಕೋರದ ಶ್ರೀನಾಥ್, ದೃಢ ಮನಸ್ಸಿಂದ ಕೈಗೊಂಡ ನಿರ್ಧಾರವೇ ಇಂದು ಅವರನ್ನು ಒಬ್ಬ ಹೆಸರಾಂತ ಐಎಎಸ್ ಅಧಿಕಾರಿಯಾಗಿ ನಿಲ್ಲುವಂತೆ ಮಾಡಿದೆ.
500 ರೂ. ಕೂಲಿ
ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಬೇಕಾದರೆ ಆನ್ಲೈನ್ ವ್ಯವಸ್ಥೆಗಳನ್ನು ಪಡೆಯುವುದು ಅನಿವಾರ್ಯ. ಇದಕ್ಕಾಗಿ ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಮತ್ತು ಇಂಟರ್ನೆಟ್ ಅವಶ್ಯಕತೆ ಹೆಚ್ಚಿರುತ್ತದೆ. ಇದೆಲ್ಲವನ್ನೂ ಗಮನಿಸಿದ ಶ್ರೀನಾಥ್, ರೈಲ್ವೆ ನಿಲ್ದಾಣದಲ್ಲಿ ಸಿಗುವ ಉಚಿತ ವೈಫೈ ಸಹಾಯದಿಂದ ಆನ್ಲೈನ್ ಪಾಠವನ್ನು ಕೇಳಲು ಶುರು ಮಾಡಿದರು. ಪರೀಕ್ಷೆಗೆ ಬೇಕಾದ ಅಧ್ಯಯನ ಸಾಮಗ್ರಿಗಳು ಮತ್ತು ಅಣಕು ಪರೀಕ್ಷೆಗಳ ಪ್ರವೇಶಕ್ಕೆತಗಲುವ ವೆಚ್ಚವನ್ನು ಭರಿಸಲು ಅದೇ ರೈಲ್ವೇ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡಿದರು. ತಮಗೆ ಬರುತ್ತಿದ್ದ 500 ರೂ. ಕೂಲಿ ಹಣದಿಂದಲೇ ಶ್ರೀನಾಥ್, ತಮ್ಮ ಎದುರಿಗಿದ್ದ ಕಠಿಣ ಸವಾಲುಗಳನ್ನು ಬೇಧಿಸಿ, ಇಂದು ಯುಪಿಎಸ್ಸಿ ಪರೀಕ್ಷೆಯನ್ನೂ ಕೂಡ ಬೇಧಿಸಿ, ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ.
ಕೆಪಿಎಸ್ಸಿ, ಯುಪಿಎಸ್ಸಿ
ಕೇರಳದ ಮುನ್ನಾರ್ ಮೂಲದ ಶ್ರೀನಾಥ್, ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಎರ್ನಾಕುಲಂ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಅವರು, ಪ್ರತಿದಿನ ಪ್ರಯಾಣಿಕರ ಸಾಮಾನುಗಳನ್ನು ಸಾಗಿಸುವ ಮೂಲಕ ದಿನಕ್ಕೆ 400ರಿಂದ 500 ರೂ. ಹಣವನ್ನು ಕೂಲಿಯಾಗಿ ಪಡೆಯುತ್ತಿದ್ದರು. ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಕುಟುಂಬದ ಜವಾಬ್ದಾರಿಯ ಜತೆಗೆ ತಮ್ಮ ಕನಸನ್ನು ಈಡೇರಿಸಿಕೊಂಡ ಶ್ರೀನಾಥ್, ಕೆಪಿಎಸ್ಸಿ ಪಾಸ್ ಮಾಡಿ, ಆನಂತರ ಭಾರತದ ಅತ್ಯಂತ ಕಠಿಣ ಪರೀಕ್ಷೆ ಎಂದೇ ಕರೆಯಲ್ಪಡುವ ಯುಪಿಎಸ್ಸಿಯನ್ನು ನಾಲ್ಕನೇ ಪ್ರಯತ್ನದಲ್ಲಿ ಪಾಸ್ ಮಾಡಿ ಇಂದು ಐಎಎಸ್ ಅಧಿಕಾರಿ ಹುದ್ದೆಯನ್ನು ಅಲಂಕರಿಸಿದ್ದಾರೆ.
ಶ್ರೀನಾಥ್ ಅವರ ಯಶೋಗಾಥೆ ಎಂಥವರಿಗೂ ಸ್ಪೂರ್ತಿದಾಯಕ. ಕೇವಲ ತಮ್ಮ ಗುರಿಯನ್ನು ಮಾತ್ರ ಈಡೇರಿಸಿಕೊಳ್ಳದ ಐಎಎಸ್ ಅಧಿಕಾರಿ ಶ್ರೀನಾಥ್, ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತು, ಇಂದು ಉನ್ನತ ಹುದ್ದೆಯನ್ನು ಕಠಿಣ ಪರಿಶ್ರಮದಿಂದ ಗಿಟ್ಟಿಸಿಕೊಂಡಿರುವುದು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಎಂದೇ ಹೇಳಬಹುದು,(ಏಜೆನ್ಸೀಸ್).
ಸ್ಟಾರ್ ನಟಿಯರಿಗೆ ಡಬ್ ಮಾಡೋದು ಯುವತಿ ಅಲ್ಲ ಯುವಕ! ಸೌತ್ ಬ್ಯೂಟಿಗಳ ಧ್ವನಿ ಹಿಂದಿದೆ ಈತನ ಜಾದು | Dubbing Artist