ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್​ಗೆ ಹೋದ ಭಾರತೀಯ ಯುವತಿಯ ಹತ್ಯೆ!

Kontham
Published on

ಹೈದರಾಬಾದ್: ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್​ಗೆ ತೆರಳಿದ್ದ ಭಾರತೀಯ ಯುವತಿಯನ್ನು ಇರಿದು ಕೊಂದ ಪ್ರಕರಣ ನಡೆದಿದೆ. ಲಂಡನ್​ನ ವಿಂಬ್ಲೆಯಲ್ಲಿ ಮಂಗಳವಾರ ಈ ಹತ್ಯೆ ನಡೆದಿದೆ. ಫ್ಲ್ಯಾಟ್​ನಲ್ಲಿ ಜೊತೆಗಿದ್ದ ಯುವಕನಿಂದಲೇ ಈಕೆ ಕೊಲೆಗೀಡಾಗಿದ್ದಾಳೆ.

ಹೈದರಾಬಾದ್​ನ ಕೊಂಥಮ್ ತೇಜಸ್ವಿನಿ (27) ಕೊಲೆಗೀಡಾದ ಯುವತಿ. ಮಾಸ್ಟರ್ಸ್ ಡಿಗ್ರಿಗೆಂದು ಈಕೆ ಕಳೆದ ಮಾರ್ಚ್​ನಲ್ಲಿ ಲಂಡನ್​ಗೆ ತೆರಳಿದ್ದಳು. ಅಲ್ಲಿ ಈಕೆಯೊಂದಿಗೆ ಫ್ಲ್ಯಾಟ್​ನಲ್ಲಿ ಜೊತೆಗಿದ್ದ ಬ್ರೆಜಿಲ್​ನ ವ್ಯಕ್ತಿ ಇರಿದಿದ್ದು, ತೇಜಸ್ವಿನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಇನ್ನೊಬ್ಬಳು ಯುವತಿ ಕೂಡ ಇರಿತಕ್ಕೊಳಗಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪುರುಷ ಹಾಗೂ ಒಬ್ಬಳು ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಅನುಮಾನದ ಮೇರೆಗೆ ಇನ್ನೊಬ್ಬ ವ್ಯಕ್ತಿಯನ್ನೂ ಲಂಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net