

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂ ಪ್ರದೇಶದಲ್ಲಿ ನಡೆದ ಅಮಾಯಕ ಹಿಂದೂಗಳ ಮೇಲಿನ ಭಯಾನಕ ಉಗ್ರ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು, ಅಮೆರಿಕದ ಸಾವಿರಾರು ಹಿಂದೂಗಳು ಇದೇ ಭಾನುವಾರ ಏಪ್ರಿಲ್ 27, 2025ರಂದು ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ವಾಷಿಂಗ್ಟನ್ ಮಾನ್ಯೂಮೆಂಟ್ನಿಂದ ಪ್ರಾರಂಭವಾದ ಪ್ರತಿಭಟನೆ ನಡುಗೆ ಲಿಂಕನ್ ಮೆಮೋರಿಯಲ್ ಸ್ಮಾರಕದ ವರಗೆ ನಡೆಯಿತು.
ಈ ಪ್ರತಿಭಟನೆಯ ಆಯೋಜನೆಯಲ್ಲಿ ನಮ್ಮ ಕನ್ನಡಿಗರ ಹೆಮ್ಮೆಯ ನಾಯಕರಾದ ಶಶಿಕಿರಣ್ ರುದ್ರಪ್ಪ , ಅನಿಲ್ ತಗ್ಗಿನಹಳ್ಳ , ಪ್ರಶಾಂತ್ , ಶ್ಯಾಮ ಬಾಣಾವರ, ಮಹೇಂದ್ರ , ಕುಮಾರ , ಶ್ರೀಕಾಂತ ಅಕ್ಕಿನೇನಿ, ನೇಹಾ ಹಿರೇಮಠ , ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಅಮೆರಿಕಾದ ವಿಶ್ವ ಹಿಂದೂ ಪರಿಷತ್ತಿನ ನಾಯಕರಾದ ಮಹೇಂದ್ರ ಸಪ , ಅಜಯ್ ಶರ್ಮ, ವಿದ್ಯಾ ಸಾಗರ್ ಮುಂತಾದವರು ಪ್ರತಿಭಟನೆಯ ಆಯೋಜನೆಯಲ್ಲಿ ಅಪಾರ ಶ್ರಮ ಪಟ್ಟಿದ್ದಾರೆ.
ಈ ಭಾರೀ ಪ್ರತಿಭಟನೆಯನ್ನು ಈ ಕೆಳಗಿನ ಸಂಸ್ಥೆಗಳು ಒಟ್ಟಾಗಿ ಜಂಟಿಯಾಗಿ ಆಯೋಜಿಸಿತು. HinduPACT, VHPA (ವಿಶ್ವ ಹಿಂದೂ ಪರಿಷತ್ ಅಮೆರಿಕ), CoHNA (Coalition of Hindus of North America), HSS (Hindu Swayamsevak Sangh), SWHA, Sewa International USA, Ka (Kashmiri Overseas Association), Shaivite Traditions, AHAD (American Hindus Against Defamation), HAF (Hindu American Foundation), ಮತ್ತು Avanti Organization.
ಹಿಂದೂ ನಾಯಕರು ಮಾತನಾಡಿ ತಮ್ಮ ಭಾಷಣಗಳಲ್ಲಿ ಪಾಕಿಸ್ತಾನವನ್ನು ತೀವ್ರವಾಗಿ ವಿರೋಧಿಸಿ, "ಉಗ್ರರಿಗೆ ಆಶ್ರಯ ನೀಡುತ್ತಿರುವ ದೇಶವನ್ನು ಜಗತ್ತು ಖಂಡಿಸಬೇಕು" ಎಂದು ಒತ್ತಾಯಿಸಿದರು. ಹೀಗೆಯೇ, ಹಿಂದೂಗಳ ಮೇಲೆ ನಡೆಯುವ ಹತ್ಯೆಗಳನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಅಗತ್ಯವಿದೆ ಎಂಬ ಸಂದೇಶವನ್ನು ಹಂಚಿಕೊಳ್ಳಲಾಯಿತು. ಅಮೇರಿಕಾದ ಪ್ರಮುಖ ಮೀಡಿಯಾಗಳು ಪಹಲ್ಗಾಂ ಹತ್ಯೆಗೆ ತೋರಿಸುತ್ತಿರುವ ನಿರ್ಲಕ್ಷವನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನಾಕಾರರು, "ಪಾಕಿಸ್ತಾನ ಉಗ್ರರನ್ನು ಆಶ್ರಯಿಸುತ್ತಿದೆ," "ಧರ್ಮದ ಹೆಸರಲ್ಲಿ ಹತ್ಯೆ ನಿಲ್ಲಲಿ," "ಹಿಂದೂ ಹೋರಾಟದ ವಿರುದ್ಧ ಶೂನ್ಯ ಸಹಿಷ್ಣುತೆ" ಎಂಬ ಘೋಷಣೆಗಳನ್ನು ಕೂಗುತ್ತಾ, ಹುತಾತ್ಮರ ಭಾವಚಿತ್ರಗಳು , ಭಾರತದ ತ್ರಿವರ್ಣ ಧ್ವಜಗಳು, ಅಮೆರಿಕ ಧ್ವಜಗಳು ಮತ್ತು ಹಿಂದೂ ಕೇಸರಿ ಧ್ವಜಗಳೊಂದಿಗೆ ಬಿರುಸಿನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಪ್ರಮುಖ ಭಾಗವಾಗಿ ಪಹಲ್ಗಾಂ ದಾಳಿಯಲ್ಲಿ ಹುತಾತ್ಮರಾದ ಸ್ಮರಣಾರ್ಥವಾಗಿ ಮೃತಪಟ್ಟವರ ಫೋಟೋಗಳನ್ನು ಹಿಡಿದು, ಪುಷ್ಪಾರ್ಚನೆ ನಡೆಸಿ ಗೌರವ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಲ್ಲಿಸಲಾದ ಹುತಾತ್ಮರ ಪಟ್ಟಿ ಈ ರೀತಿ:
ಸುಶೀಲ್ ನಾಥನಿಯೆಲ್, ಹೇಮಂತ ಸುಹಾಸ್ ಜೋಶಿ, ಸಯದ್ ಆದಿಲ್, ಅತುಲ್ ಶ್ರಿಕಾಂತ್ ಮೋನೆ, ಲೆಫ್ಟಿನೆಂಟ್ ವಿನಯ ನರವಾಳ್, ನೀರಜ್ ಉದ್ವಾನಿ, ಬಿಟನ್ ಅಧಿಕಾರಿ, ಸುದೀಪ್ ನೆಪಾನಿ, ಶುಭಂ ದ್ವಿವೇದಿ, ಪ್ರಶಾಂತ್ ಸತಪಥಿ, ಮನೀಷ್ ರಂಜನ್, ಎನ್. ರಾಮಚಂದ್ರನ್, ಸಂಜಯ್ ಲಕ್ಷ್ಮಣ್ ಲೆಲೆ, ದಿನೇಶ್ ಅಗರ್ವಾಲ್, ಸಮೀರ್ ಗುಹಾ, ದಿಲೀಪ್ ಡಿಸ್ಲೆ, ಜೆ.ಎಸ್. ಚಂದ್ರಮೌಳಿ, ಸೊಮಿಸೆಟ್ಟಿ ಮಧುಸುಧನ್, ಸಂತೋಷ್ ಜಗ್ದಲೆ, ಮಂಜುನಾಥ್ ರಾವ್, ಭಾರತ್ ಭೂಷಣ್, ಕೌಸ್ತುಭ್ ಗಣ್ಬೋಟೆ, ಯತೀಶ್ ಪರ್ಮಾರ್, ಸುಮಿತ್ ಪರ್ಮಾರ್, ತಾಜೆ ಹೈಲಿಯಾಂಗ್ ಮತ್ತು ಶೈಲೇಶ್ ಕಲಾಥಿಯಾ. ಈ ಹುತಾತ್ಮರು ಹೀಗೇ ಮರೆತುಹೋಗಬಾರದು ಎಂಬ ಶಪಥವನ್ನು ಪ್ರತಿಭಟನಾಕಾರರು ತೆಗೆದುಕೊಂಡರು.