

Pakistan Inflation: ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಂಭವಿಸಿದ ಉಗ್ರರ ಭೀಕರ ಗುಂಡಿನ ದಾಳಿಗೆ 26 ಅಮಾಯಕರು ಜೀವಬಿಟ್ಟಿದ್ದಾರೆ. ಕರ್ನಾಟಕದ ಮೂವರು ಸೇರಿದಂತೆ ಒಟ್ಟು 26 ಮಂದಿಪ್ರಾಣವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಕೆರಳಿದೆ. 2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ (ಏ.22)ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ. ಉಗ್ರರ ಹುಟ್ಟನ್ನು ಅಡಗಿಸಲು ಪಣತೊಟ್ಟಿರುವ ಭಾರತ, ಪಾಕ್ಗೆ ಕೊಟ್ಟಿರುವ ಆಘಾತ ಒಂದೆರೆಡಲ್ಲ.
ಈಗಾಗಲೇ ತೀವ್ರ ನಗದು ಕೊರತೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಹೆಣಗಾಡುತ್ತಿರುವ ಪಾಕಿಸ್ತಾನ, ಭಾರತ ವಿಧಿಸಿರುವ ನಿರ್ಬಂಧಗಳಿಂದಾಗಿ ಮತ್ತಷ್ಟು ಬಿಕ್ಕಟ್ಟು-ಇಕ್ಕಟ್ಟಿಗೆ ಸಿಲುಕುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆ ಯಾವುದೇ ಕ್ಷಣದಲ್ಲಿ ಯುದ್ಧ ಸಂಭವಿಸಬಹುದು ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಇದೀಗ ಪಾಕಿಸ್ತಾನದಲ್ಲಿ ಹಣದುಬ್ಬರ ಸಮಸ್ಯೆ ಕಾಡಲಾರಂಭಿಸಿದೆ. ಅಗತ್ಯ ವಸ್ತುಗಳು ಮತ್ತು ದಿನನಿತ್ಯದ ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತಿವೆ.
ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಒಂದು ಕೆಜಿ ಅಕ್ಕಿ ಬೆಲೆ 339 ರೂ., ಒಂದು ಡಜನ್ ಮೊಟ್ಟೆ ಬೆಲೆ 332 ರೂ., ಒಂದು ಲೀಟರ್ ಹಾಲಿನ ಬೆಲೆ 224 ರೂ., ಒಂದು ಕೆಜಿ ಟೊಮೊಟೊ ಬೆಲೆ 150 ರೂ. ಆಗಿದ್ದರೆ, ಒಂದು ಕೆಜಿ ಕೋಳಿ ಮಾಂಸದ ಬೆಲೆ 800 ರೂ.ಗೆ ತಲುಪಿದೆ. ಯಾವುದೇ ಆಹಾರ ಪದಾರ್ಥದ ಬೆಲೆ ಕೇಳಿದರೂ ಒಂದು ನಿಮಿಷ ತಲೆತಿರುಗುವಿಕೆ ಉಂಟಾಗುವಂತಿದೆ ಸದ್ಯದ ಪಾಕ್ ಜನರ ಪರಿಸ್ಥಿತಿ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಈಗ ಹಣದುಬ್ಬರವು ದೊಡ್ಡ ಸಮಸ್ಯೆಯಾಗಿ ಸುಡಲಾರಂಭಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮರುದಿನವೇ ಪಾಕಿಸ್ತಾನ ಗಂಭೀರ ಆರ್ಥಿಕ ಪರಿಣಾಮಗಳನ್ನು ಎದುರಿಸುತ್ತಿದೆ. ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುವ ನಿಷೇಧಿತ ಲಷ್ಕರ್-ಎ-ತೈಬಾ (LeT) ನೊಂದಿಗೆ ಸಂಯೋಜಿತವಾಗಿರುವ ರೆಸಿಸ್ಟೆನ್ಸ್ ಫ್ರಂಟ್ (TRF) ಪಹಲ್ಗಾಮ್ ದಾಳಿ ಹಿಂದಿರುವ ಮಾಸ್ಟರ್ಮೈಂಡ್ ತಾವೇ ಎಂಬ ಹೊಣೆಯನ್ನು ಹೊತ್ತುಕೊಂಡಿದೆ. ಈ ಹಿನ್ನೆಲೆ ಎರಡು ದೇಶಗಳ ನಡುವೆ ಯುದ್ಧದ ಮಾತುಗಳೂ ವ್ಯಾಪಕವಾಗಿ ಸದ್ದು ಮಾಡಿವೆ.
ಪಾಕಿಸ್ತಾನಿ ಸೂಟ್‌ಗಳು, ವಿಶೇಷವಾಗಿ ಮಹಿಳೆಯರಿಗೆ, ಭಾರತದಲ್ಲಿ ಬಹಳ ಹಿಂದಿನಿಂದಲೂ ಜನಪ್ರಿಯ. ಎರಡು ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಹಾಗೂ ರಾಜತಾಂತ್ರಿಕ ಪರಿಣಾಮದ ಕಾರಣ ಈ ಸೂಟ್‌ಗಳ ವ್ಯಾಪಾರ-ವಹಿವಾಟು ಗಮನಾರ್ಹವಾಗಿ ಕುಸಿತ ಕಂಡಿದೆ.
ಭಾರತ ಈಗಾಗಲೇ ಅಟ್ಟಾರಿ-ವಾಘಾ ಗಡಿಯನ್ನು ಬಂದ್ ಮಾಡಿದೆ. ಭಾರತ ಸರ್ಕಾರದ ಈ ಕಠಿಣ ನಿರ್ಧಾರದಿಂದಾಗಿ ಸುಮಾರು 3,886.53 ಕೋಟಿ ರೂ. ಮೌಲ್ಯದ ಗಡಿಯಾಚೆಗಿನ ವ್ಯಾಪಾರ ಸ್ಥಗಿತಗೊಂಡಿದೆ. ಇದು ಪಾಕಿಸ್ತಾನದಲ್ಲಿ ಔಷಧಗಳಿಂದ ಹಿಡಿದು ರಸಗೊಬ್ಬರಗಳವರೆಗೆ ವಿವಿಧ ಸರಕುಗಳ ಲಭ್ಯತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದು ದಿನನಿತ್ಯದ ಪದಾರ್ಥಗಳ ಮೇಲಿನ ಬೆಲೆಗಳ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ,(ಏಜೆನ್ಸೀಸ್).